

ತುಮಕೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ತೆರಳುತ್ತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಶಾಸಕರು, ಮುಖಂಡರನ್ನು ಮಾರ್ಗ ಮಧ್ಯೆ ಪೊಲೀಸರು ಬಂಧಿಸಿರುವ ಕ್ರಮ ಖಂಡಿಸಿ ನಗರದಲ್ಲಿ ಬಿಜೆಪಿ ಜಿಲ್ಲಾ ಮುಖಂಡರು ಪ್ರತಿಭಟನೆ ನಡೆಸಿದರು.
ನಗರದ ಟೌನ್ ಹಾಲ್ ವೃತ್ತದಲ್ಲಿ ಶುಕ್ರವಾರ ಗ್ರಾಮಾಂತರ ಶಾಸಕ ಬಿ.ಸುರೇಶಗೌಡ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು, ಮುಖಂಡರು ಸಮಾವೇಶಗೊಂಡು, ಪೊಲೀಸರನ್ನು ಬಳಸಿಕೊಂಡು ಬಿಜೆಪಿಯ ಪ್ರತಿಭಟನೆ ಹತ್ತಿಕ್ಕುವ ಕಾಂಗ್ರೆಸ್ ಸರ್ಕಾರದ ಧೋರಣೆ ಖಂಡಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಈ ವೇಳೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ಪೊಲೀಸ್ ವಾಹನದಲ್ಲಿ ತುಂಬಿಕೊಂಡು ಕರೆದೊಯ್ದರು.
ಪ್ರಜಾಪ್ರಭುತ್ವ ವಿರೋಧಿ ಕ್ರಮ: ಪ್ರತಿಭಟನೆಯ ಹಕ್ಕಿಗೆ ಕಡಿವಾಣ ಹಾಕುವ ರಾಜ್ಯ ಸರ್ಕಾರಕ್ಕೆ ಧಿಕ್ಕಾರ. ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುವವರೆಗೆ ಈ ಹೋರಾಟ ನಿಲ್ಲದು. ಮುಡಾ ಹಗರಣ ವಿರುದ್ಧ ಪ್ರತಿಭಟಿಸಲು ಮೈಸೂರಿಗೆ ತೆರಳುತ್ತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೃ.ವಿಜಯೇಂದ್ರ ಸೇರಿದಂತೆ ಅನೇಕ ಬಿಜೆಪಿ ನಾಯಕರನ್ನು ಮಾರ್ಗ ಮಧ್ಯೆ ಬಂಧಿಸಿರುವುದು ಪ್ರಜಾಪ್ರಭುತ್ವ ವಿರೋಧಿಕ್ರಮ ಎಂದು ಶಾಸಕ ಬಿ.ಸುರೇಶಗೌಡ ಆಕ್ರೋಶ ಹೊರಹಾಕಿದರು.
ಸಿದ್ದರಾಮಯ್ಯ ತಾನು ತಪ್ಪಿತಸ್ಥ ಅಲ್ಲ ಎಂದಿದ್ದರೆ ಸಿಬಿಐ ತನಿಖೆಗೆ ಕೊಡಲು ಏಕೆ ಹಿಂಜರಿಯುತ್ತಿದ್ದಾರೆ? ಹೇಳಿದಂತೆ ಕೇಳುವ ಎಸ್ಐಟಿ ಅಧಿಕಾರಿಗಳನ್ನು ಮುಂದೆ ಇಟ್ಟುಕೊಂಡು ತನಿಖೆ ಮಾಡಿಸುತ್ತಿದ್ದಾರೆ. ನಿಷ್ಪಕ್ಷಪಾತ ತನಿಖೆ, ಅದರಿಂದ ನ್ಯಾಯ ದೊರಕುವ ಮಾತು ಒಂದು ದೊಡ್ಡ ಕನಸು. ಮುಖ್ಯಮಂತ್ರಿಗಳು ತಾವು ಹಿಂದುಳಿದ ವರ್ಗದವರಾಗಿದ್ದರಿಂದ ತಮ್ಮ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಅದರ ಅಡಿಯಲ್ಲಿ ರಕ್ಷಣೆ ಪಡೆಯಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ ಎಂದು ಹರಿಹಾಯ್ದರು.
ರಾಜ್ಯ ಬಿಜೆಪಿ ರೈತ ಮೋರ್ಚಾ ಮಾಜಿ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್, ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಬಿಜೆಪಿಯ ಹೋರಾಟಗಳು ಭಯ ತಂದಿವೆ. ಹೀಗಾಗಿ ಯಾವುದೇ ಹೋರಾಟ ಮಾಡಲು ಅವಕಾಶ ನೀಡದೆ ಪೊಲೀಸರನ್ನು ಬಳಸಿಕೊಂಡು ಹತ್ತಿಕ್ಕುವ ಪ್ರಯತ್ನ ಮಾಡಿ ಪ್ರಜಾಪ್ರಭುತ್ವ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ನವರು ಬಳ್ಳಾರಿ ಪಾದಯತ್ರೆ, ಮೇಕೆ ದಾಟು ಪಾದಯಾತ್ರೆ ಮಾಡುವಾಗ ಸರ್ಕಾರವೇ ಪೊಲೀಸ್ ರಕ್ಷಣೆ ಒದಗಿಸಿ ಹೋರಾಟಕ್ಕೆ ಅವಕಾಶ ನೀಡಿತ್ತು. ಈಗಿನ ಕಾಂಗ್ರೆಸ್ ಸರ್ಕಾರ ಹೋರಾಟದ ಹಕ್ಕನ್ನು ಕಸಿಯುವ ಪ್ರಯತ್ನ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅದಿಕಾರಕ್ಕೆ ಬಂದಾಗಿನಿಂದ ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ. ವಾಲ್ಮೀಕಿ ಅಭಿವೃದ್ಧಿ ನಿಗಮ, ಮುಡಾದಲ್ಲಿ ಅಕ್ರಮಗಳನ್ನು ಎಸಗಿ ಜನರ ತೆರಿಗೆ ಹಣವನ್ನು ಲೂಟಿ ಮಾಡಲಾಗುತ್ತಿದೆ ಎಂದು ದೂರಿದರು.
ನಂತರ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕುಗುತ್ತಾ ದಿಢೀರ್ ರಸ್ತೆ ತಡೆ ನಡೆಸಿದಾಗ ಪೊಲೀಸರು ಬಿಜೆಪಿ ಮುಖಂಡರನ್ನು ವಶಕ್ಕೆ ಪಡೆದು ಕರೆದೊಯ್ದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂದೀಪ್ಗೌಡ, ನಗರಾಧ್ಯಕ್ಷ ಟಿ.ಎಚ್.ಹನುಂತರಾಜು, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ನವಚೇತನ್, ನಗರ ಪಾಲಿಕೆ ಮಾಜಿ ಸದಸ್ಯ ಸಿ.ಎಸ್.ರಮೇಶ್, ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ವೇದಮೂರ್ತಿ, ಮುಖಂಡರಾದ ಸಾಗರನಹಳ್ಳಿ ವಿಜಯಕುಮಾರ್, ಬಿ.ಎಸ್.ನಾಗೇಶ್, ಮನೋಹರಗೌಡ, ಬನಶಂಕರಿ ಬಾಬು, ಎನ್.ರಾಜಣ್ಣ, ನಾಗರಾಜ್, ಗಣೇಶ್ಪ್ರಸಾದ್, ಹನುಮಂತರಾಯಪ್ಪ, ಹನುಮಂತರಾಜು, ಅಣೆತೋಟ ಶ್ರೀನಿವಾಸ್, ಅಂಜನಮೂರ್ತಿ, ಪ್ರೇಮಾ ಹೆಗಡೆ, ಚೆಂಗಾವಿ ರವಿ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.