ಪ್ರಣಾಳಿಕೆ ಮೂಲಕ ಅನ್ಯಾಯ ಒಪ್ಪಿದ ಕಾಂಗ್ರೆಸ್ : ಕೆ.ಉದಯಕುಮಾರ್ ಶೆಟ್ಟಿ ಟೀಕೆ : ಕೈ ಯುವರಾಜನಿಗೆ ವಿದೇಶಿ ವ್ಯಾಮೋಹ

Published on

ಉಡುಪಿ: ಪ್ರಸಕ್ತ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆಗೆ ‘ನ್ಯಾಯ ಪತ್ರ’ ಎಂದು ಹೆಸರಿಸಿದ್ದು, ತನ್ನ 60 ವರ್ಷದ ಆಡಳಿತದಲ್ಲಿ ದೇಶದ ಜನತೆಗೆ ಅನ್ಯಾಯ ಮಾಡಿದ್ದನ್ನು ಒಪ್ಪಿಕೊಂಡಂತಿದೆ ಎಂದು ಬಿಜೆಪಿ ಮಂಗಳೂರು ವಿಭಾಗದ ಪ್ರಭಾರಿ ಕೆ.ಉದಯಕುಮಾರ್ ಶೆಟ್ಟಿ ಟೀಕಿಸಿದ್ದಾರೆ.

ಈ ಬಾರಿ ಅವಕಾಶ ಸಿಕ್ಕರೆ ಜನಪರ ಕೆಲಸ ಮಾಡುವುದಾಗಿ ಹೇಳಿದ್ದು, ಅವರ 4 ತಲೆಮಾರಿನವರು ಕೆಲಸ ಮಾಡಿಲ್ಲ ಎನ್ನುವುದನ್ನು ಒಪ್ಪಕೊಂಡಂತಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾಂಗ್ರೆಸ್‌ನ ಯುವರಾಜ ರಾಹುಲ್ ಗಾಂಧಿ ವಿದೇಶಿ ವ್ಯಾಮೋಹಿ ಎನ್ನುವುದನ್ನು ಮತ್ತೊಮ್ಮೆ ಸಾಬೀತಾಗಿದೆ. ಅವರ ಪ್ರಣಾಳಿಕೆಯ ಪರಿಸರ ವಿಭಾಗದಲ್ಲಿ ಬಳಸಿರುವ ಚಿತ್ರ ರಾಹುಲ್ ನೆಚ್ಚಿನ ತಾಣ ಥಾಯ್ಲೆಂಡ್ ಆಗಿದೆ. ನೀರಿನ ನಿರ್ವಹಣೆಯ ಚಿತ್ರ ನ್ಯೂಯಾರ್ಕ್‌ನ ಬ್ಲೋ ನದಿಯಾಗಿದೆ. ಅವರಿಗೆ ಹಿಂದುಸ್ತಾನದ ಕುರಿತು, ಇಲ್ಲಿನ ಪರಿಸರದ ಕುರಿತು ಅವರಿಗೆ ಕಿಂಚಿತ್ತೂ ಬಾಂಧವ್ಯ ಇಲ್ಲ ಎಂದರು.

ಜನರ ಪ್ರಣಾಳಿಕೆ

ಬಿಜೆಪಿಯದ್ದು ಈ ಬಾರಿಯ ಜನರ ಪ್ರಣಾಳಿಕೆ. ದೇಶದ 15 ಲಕ್ಷ ಜನರಿಂದ ಸಲಹೆ ಪಡೆದು, ದೇಶದ ಏಳಿಗೆ ಹಾಗೂ ಅಭಿವೃದ್ಧಿಯೇ ಮುಖ್ಯವಾಗಿರುವ ಪ್ರಣಾಳಿಕೆ ರಚಿಸಲಾಗಿದೆ. ಹೀಗಾಗಿ ನಮ್ಮದು ಅಭ್ಯರ್ಥಿ ಆಧಾರಿತ ಚುನಾವಣೆಯಲ್ಲ, ಪಕ್ಷ ಆಧಾರಿತ ಚುನಾವಣೆಯಾಗಿದೆ. 2014ರಿಂದ ಈತನಕ ದೇಶದ ಅಭಿವೃದ್ಧಿ ಯಾವ ರೀತಿಯಲ್ಲಿ ಆಗಿದೆ ಎಂಬ ಆಧಾರದಲ್ಲಿ ಚುನಾವಣೆ ನಡೆಯಲಿದೆ. ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ರ‌್ಯಾಲಿ ನಡೆಸಿದ ಬಳಿಕ ಎರಡೂ ಜಿಲ್ಲೆಯ ಶೇ.10ರಷ್ಟು ಹೆಚ್ಚಿನ ಮತದಾರರು ಬಿಜೆಪಿಯತ್ತ ಒಲವು ತೋರಿದ್ದಾರೆ ಎಂದರು.

ಜಿಲ್ಲಾ ಬಿಜೆಪಿ ವಕ್ತಾರರಾದ ವಿಜಯಕುಮಾರ್ ಉದ್ಯಾವರ, ಗೀತಾಂಜಲಿ ಸುವರ್ಣ, ಜಿಲ್ಲಾ ಬಿಜೆಪಿ ಕಾರ್ಯಾಲಯದ ಕಾರ್ಯದರ್ಶಿ ಶಿವಕುಮಾರ ಅಂಬಲಪಾಡಿ, ಜಾಲ್ಲಾ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ ಸುದ್ದಿಗೋಷ್ಠಿಯಲ್ಲಿದ್ದರು.

24ರಂದು ಯೋಗಿ ಆದಿತ್ಯನಾಥ ಭೇಟಿ

ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಪರ ಪ್ರಚಾರ ನಡೆಸಲು ಏ.22ರಂದು ಅಣ್ಣಾಮಲೈ ಹಾಗೂ ಏ.24ರಂದು ಯೋಗಿ ಆದಿತ್ಯನಾಥ ಆಗಮಿಸಲಿದ್ದಾರೆ. ಏ.19ರಂದು ಮಹಿಳಾ ಸಮಾವೇಶ ನಡೆಯಲಿದ್ದು, ಸುಮಲತಾ ಅಂಬರೀಷ್ ಆಗಮಿಸಲಿದ್ದಾರೆ. ಏ.20ರಂದು ಬೃಹತ್ ಯುವ ಸಮಾವೇಶ ಆಯೋಜಿಸಲಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗಮಿಸಲಿದ್ದಾರೆ ಎಂದು ಕೆ.ಉದಯಕುಮಾರ್ ಶೆಟ್ಟಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net