More

    15 ಲಕ್ಷ ರೂ. ಹೇಳಿಕೆಯ ದಾಖಲೆ ಇದ್ದರೆ ಜೆಪಿ ಹೆಗ್ಡೆ ನೀಡಲಿ

    ಉಡುಪಿ: ಬಿಜೆಪಿ ಈ ಹಿಂದೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ದೇಶದ ಎಲ್ಲರ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಹೇಳಿತ್ತು ಎಂದು ಕಾಂಗ್ರೆಸ್​ ಲೋಕಸಭಾ ಅಭ್ಯರ್ಥಿ ಜಯಪ್ರಕಾಶ್​ ಹೆಗ್ಡೆ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಆ ಕುರಿತು ಸೂಕ್ತ ದಾಖಲೆ ಅವರಲ್ಲಿ ಇದ್ದರೆ ಜನತೆಯ ಮುಂದಿಡಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರಕುಮಾರ್​ ಕುಂದಾಪುರ ಸವಾಲು ಹಾಕಿದ್ದಾರೆ.

    ಉಡುಪಿ ಕಡಿಯಾಳಿಯಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಚುನಾವಣಾ ಅಭಿಯಾನ ಪ್ರಮುಖರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

    ಹೆಗ್ಡೆ ಅಪಪ್ರಚಾರ

    ‘ವಿದೇಶದ ಸ್ವಿಸ್​ ಬ್ಯಾಂಕ್​ನಲ್ಲಿರುವ ಕಾಂಗ್ರೆಸ್ಸಿಗರ ಕಪ್ಪು ಹಣ ಭಾರತಕ್ಕೆ ತಂದರೆ ಪ್ರತಿ ಭಾರತೀಯನ ಖಾತೆಗೆ 15 ಲಕ್ಷ ರೂ. ಹಂಚುವಷ್ಟು ಹಣವಿರಬಹುದು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ್ದರು. ಆದರೆ, ಆ ಹೇಳಿಕೆಯನ್ನು ತಿರುಚಿ ಹೆಗ್ಡೆ ಅವರು ಅಪಪ್ರಚಾರ ಮಾಡುತ್ತಿದ್ದಾರೆ. ಸಂಸತ್​ನಲ್ಲಿ ಅಧಿಕೃತ ವಿರೋಧ ಪಕ್ಷದ ಮಾನ್ಯತೆಯೂ ಇಲ್ಲದೆ ದೇಶದೆಲ್ಲೆಡೆ ಜನತೆಯಿಂದ ತಿರಸತಗೊಂಡಿರುವ ಕಾಂಗ್ರೆಸ್​ ಇದೀಗ ಸುಳ್ಳು ಸುದ್ದಿ ಉತ್ಪಾದಿಸುವ ಕಾರ್ಖಾನೆಯಂತಾಗಿದೆ ಎಂದರು.

    ಪಕ್ಷೇತರರಂತೆ ಮತ ಯಾಚನೆ

    ಜಯಪ್ರಕಾಶ್​ ಹೆಗ್ಡೆ ಗೆಲ್ಲುವ ಮಾತಿರಲಿ, ಅಭ್ಯರ್ಥಿ ಆಯ್ಕೆಯಲ್ಲೇ ಕಾಂಗ್ರೆಸ್​ ಎಡವಿದೆ. ಸ್ವಯಂ ಪಕ್ಷದಿಂದಲೇ ಉಚ್ಚಾಟನೆಗೊಂಡಿರುವ ಕೈ ನಾಯಕರ ವಿರೋಧದ ನಡುವೆಯೇ ಅಭ್ಯರ್ಥಿಯಾದ ದುಸ್ಥಿತಿ ಎದುರಾಗಿದೆ. ಕಾಂಗ್ರೆಸ್​ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್​ ಗಾಂಧಿ ಸಹಿತ ಯಾವುದೇ ಕಾಂಗ್ರೆಸ್​ ಮುಖಂಡರ ಹೆಸರು ಉಲ್ಲೇಖಿಸದೆ ಪಕ್ಷೇತರ ಅಭ್ಯರ್ಥಿಯಂತೆ ಅವರು ಮತ ಯಾಚಿಸುತ್ತಿರುವುದು ಶೋಚನೀಯ ಎಂದರು.
    ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯಕುಮಾರ್​ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಕಿರಣಕುಮಾರ್​ ಬೈಲೂರು, ಪೆರ್ಣಂಕಿಲ ಶ್ರೀಶ ನಾಯಕ್​, ಜಿಲ್ಲಾ ಪ್ರ.ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ, ಪ್ರಮುಖರಾದ ಬೈಕಾಡಿ ಸುಪ್ರಸಾದ್​ ಶೆಟ್ಟಿ, ಗುರುಪ್ರಸಾದ್​ ಶೆಟ್ಟಿ ಕಟಪಾಡಿ, ನಳಿನಿ ಪ್ರದಿಪ್​ ರಾವ್​, ದಿಲೇಶ್​ ಶೆಟ್ಟಿ, ಶಿವಕುಮಾರ್​ ಅಂಬಲಪಾಡಿ, ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು ಇತರರಿದ್ದರು.

    ವೋಟಿಗಾಗಿ ಆಸ್ಕರ್​ ಪುತ್ಥಳಿಗೆ ಮಾಲಾರ್ಪಣೆ

    ಸ್ವಾರ್ಥ ಸಾಧನೆ, ಅಧಿಕಾರದ ಲಾಲಸೆಯಿಂದ ಪಕ್ಷದಿಂದ ಪಕ್ಷಕ್ಕೆ ಹಾರುತ್ತಿರುವ ಜಯಪ್ರಕಾಶ್​ ಹೆಗ್ಡೆ, ತನ್ನ ಬೆಂಬಲಿಗ ಕಾರ್ಯಕರ್ತರಿಗೆ ದ್ರೋಹ ಬಗೆದಿದ್ದಾರೆ. ಪಕ್ಷದಿಂದ ಉಚ್ಚಾಟನೆಗೊಂಡಾಗ ಕಾಂಗ್ರೆಸ್​ನ ಹಿರಿಯ ಮುಖಂಡ ಆಸ್ಕರ್​ ಫರ್ನಾಂಡಿಸ್​ ಅವರ ಬಗ್ಗೆ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದ ಹೆಗ್ಡೆ, ಇದೀಗ ವೋಟಿಗಾಗಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿರುವುದು ವಿಪರ್ಯಾಸ. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷಿ$್ಮ ಹೆಬ್ಬಾಳ್ಕರ್​ ಅವರು ಚುನಾವಣೆ ಪ್ರಕ್ರಿಯೆಗಾಗಿ ಜಿಲ್ಲೆಯಲ್ಲಿ ಈವರೆಗೆ ಒಮ್ಮೆಯೂ ಕಾಣಿಸಿಕೊಂಡಿಲ್ಲ. ಇದು ಈ ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗೆ ಗೆಲುವಿನ ಭರವಸೆಯೇ ಇಲ್ಲ ಎನ್ನುವುದನ್ನು ಸೂಚ್ಯವಾಗಿ ಹೇಳಿದಂತಿದೆ ಎಂದು ಕಿಶೋರಕುಮಾರ್​ ಟೀಕಿಸಿದರು. ಸರಳ ಸಜ್ಜನ ರಾಜಕಾರಣಿಯಾದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಗೆಲ್ಲಿಸುವ ಮೂಲಕ ಮೋದಿ ಅವರಿಗೆ ಶಕ್ತಿ ತುಂಬಲು ಎಲ್ಲ ಕಾರ್ಯಕರ್ತರು ಶ್ರಮಿಸಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts