

ಹಾವೇರಿ: ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅದರ ನಾಯಕರು ಬರೀ ತಮ್ಮ ಮನೆಗಳನ್ನು ಕಟ್ಟಿಕೊಂಡರು. 150 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ಗೆ ಸ್ವಂತ ಕಚೇರಿಯಿಲ್ಲ. ವರ್ಷದೊಳಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಬಿಜೆಪಿ ಸ್ವಂತ ಕಚೇರಿಗಳು ಕಾರ್ಯಾರಂಭವಾಗಲಿವೆ ಎಂದು ಪಕ್ಷದ ರಾಜ್ಯಾಧ್ಯಕ್ಷ ನಳೀನ್ಕುಮಾರ್ ಕಟೀಲ್ ಹೇಳಿದರು.
ನಗರದ ಕಾಗಿನೆಲೆ ರಸ್ತೆಯಲ್ಲಿ ಬಿಜೆಪಿ ಜಿಲ್ಲಾ ಕಾರ್ಯಾಲಯ ಭವನ ನಿರ್ಮಾಣ ಕಾಮಗಾರಿ ಪ್ರಾರಂಭೋತ್ಸವಕ್ಕೆ ಗುರುವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಅಧಿಕಾರ ಬಂದಾಗ ನಾವು ಯಾರನ್ನೂ ಮೆರೆತಿಲ್ಲ. ಸಾಮಾಜಿಕ ಕಾರ್ಯದ ಬಗ್ಗೆ ಚಿಂತನೆ ಮಾಡಿದ್ದೇವೆ. ಕಾರ್ಯಕರ್ತರನ್ನು ಬೆಳೆಸಿದ್ದೇವೆ. ಸುದೀರ್ಘ ಅಧಿಕಾರ ನಡೆಸಿದ ಕಾಂಗ್ರೆಸ್ಗೆ ಸ್ವಂತ ಕಚೇರಿಗಳಿಲ್ಲ. ನಮಗೆ ರಾಜ್ಯದ 9 ಕಡೆ ಸ್ವಂತ ಕಚೇರಿಗಳಿದ್ದು, 11ಕಡೆ ಶಿಲಾನ್ಯಾಸ ಮಾಡಿದ್ದೇವೆ. 9 ಕಡೆ ಕಾರ್ಯಾಲಯಗಳು ಉದ್ಘಾಟನೆಗೆ ಸಿದ್ಧವಾಗಿವೆ. ಮುಂದಿನ ಮೂರು ವರ್ಷದೊಳಗೆ ಮಂಡಲಗಳಲ್ಲಿ ಸ್ವಂತ ಕಾರ್ಯಾಲಯ ನಿರ್ವಿುಸುವ ಸಂಕಲ್ಪ ಮಾಡಿದ್ದೇವೆ ಎಂದರು.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ವಣಕ್ಕೆ ಮನೆಮನೆಯಿಂದ ಇಟ್ಟಿಗೆ ಸಂಗ್ರಹಿಸಲಾಯಿತು. ಆಗ ಅನೇಕರು ಟೀಕಿಸಿದರು. ಅಂದು ಸಂಗ್ರಹಿಸಿದ ಇಟ್ಟಿಗೆ ಶ್ರೀರಾಮಚಂದ್ರನ ಅಡಿಗೆ ಸಲ್ಲುತ್ತದೆ. ಈಗ ಪ್ರತಿಯೊಬ್ಬ ಹಿಂದು ಎದೆ ತಟ್ಟಿ ಆ ಮಂದಿರ ನನ್ನದು, ರಾಮ ನನ್ನವ ಎನ್ನುತ್ತಾರೆ. ರಾಮಮಂದಿರ ದೇಶದ ಭಾವನೆಯ ಮಂದಿರ ಆಗಿದೆ. ಬಿಜೆಪಿ ಕಾರ್ಯಕರ್ತರಿಗೆ ಕಾರ್ಯಾಲಯವೂ ಅಷ್ಟೇ ಪವಿತ್ರವಾಗಿದೆ. ಈ ಕಾರ್ಯಾಲಯ ಜನತೆಯ ಸೇವೆಯ ಮಂದಿರವಾಗಬೇಕು. ಜಿಲ್ಲಾ ಕಾರ್ಯಾಲಯ ಮತಗಟ್ಟೆ ಕೇಂದ್ರಗಳೊಂದಿಗೆ ನಿರಂತರ ಸಂಪರ್ಕ ಹೊಂದಿರಬೇಕು. ಮುಂದಿನ ಎಲ್ಲ ಚುನಾವಣೆಗಳನ್ನು ಗೆಲ್ಲಲು ಇದೊಂದು ಆದರ್ಶ ಕೇಂದ್ರವಾಗಬೇಕು ಎಂದರು.
ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ವಿದ್ಯುತ್ ಕಂಬ ನಿಲ್ಲಿಸಿದರೂ ಗೆಲ್ಲುತ್ತದೆ ಎಂಬ ಮಾತಿತ್ತು. ಆಗ ಅತಿಹೆಚ್ಚು ಶಾಸಕರು, ಸಂಸದರಿದ್ದರು. ಪಂಚಾಯಿತಿಯಿಂದ ಪಾರ್ಲಿಮೆಂಟ್ವರೆಗೂ ಕಾಂಗ್ರೆಸ್ ಇತ್ತು. ಇವತ್ತು ಅದರ ಪರಿಸ್ಥಿತಿ ಏನಾಗಿದೆ? ಈಗ ರಾಹುಲ್ ಗಾಂಧಿ ಅವರೇ ಅವರ ಕ್ಷೇತ್ರದಲ್ಲಿ ಸ್ಪರ್ಧಿಸಲು ಹೆದರಿ ಕೇರಳಕ್ಕೆ ಓಡಿ ಬರುತ್ತಿದ್ದಾರೆ. ಸೋನಿಯಾ ಗಾಂಧಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಇಂದು ಕಾಂಗ್ರೆಸ್ಗೆ ಅಧ್ಯಕ್ಷರಿಲ್ಲದ ಸ್ಥಿತಿ ನಿರ್ವಣವಾಗಿದೆ ಎಂದು ಟೀಕಿಸಿದರು.
ನಮಗೆ ಸಮಾಜ ಕಾರ್ಯ ಪ್ರಮುಖವೇ ಹೊರತು ರಾಜಕಾರಣವಲ್ಲ. ಹೀಗಾಗಿಯೇ ಬಿಜೆಪಿ ಬೆಳೆಯುತ್ತಿದೆ. ಆ ಕಾಲದಲ್ಲಿ ಬಿಜೆಪಿ ನೂರು ಶಾಸಕರು, ಹತ್ತಾರು ಸಂಸದರಿದ್ದರು. ಈಗ 1,900 ಶಾಸಕರು, ಅತಿ ಹೆಚ್ಚು ಸಂಸದರಿದ್ದಾರೆ. ಜಗತ್ತಿನಲ್ಲೇ ಅತಿಹೆಚ್ಚು ಸದಸ್ಯರನ್ನು ಪಡೆದ ಪಕ್ಷ ಬಿಜೆಪಿಯಾಗಿದೆ ಎಂದರು.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ದೇಶವನ್ನು ಸುರಕ್ಷಿತವಾಗಿಡುವುದು, ಕಟ್ಟುವುದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಮಟ್ಟಕ್ಕೆ ಒಯ್ಯುವ ಗುರುತರ ಜವಾಬ್ದಾರಿ ಬಿಜೆಪಿ ಮೇಲಿದೆ. ರಾಷ್ಟ್ರ ರಾಜಕಾರಣ ಗಮನಿಸಿದಾಗ ಸ್ಪಷ್ಟ ನೀತಿ, ನಿಯತ್ತು ಇರುವ ನಾಯಕತ್ವ ಬಿಜೆಪಿ ಹೊರತು ಯಾವುದೇ ಪಕ್ಷಕ್ಕಿಲ್ಲ. ಎಲ್ಲ ಪಕ್ಷಗಳು ಕಷ್ಟ, ದ್ವಂದ್ವ, ನಾಯಕತ್ವ ಕೊರತೆಯಲ್ಲಿ ಸಿಲುಕಿವೆ. ಕಾಂಗ್ರೆಸ್ ಸೇರಿ ಇತರ ಪ್ರಾದೇಶಿಕ ಪಕ್ಷಗಳು ಗೊಂದಲದಲ್ಲಿವೆ. ತಮ್ಮ ಪಕ್ಷದಲ್ಲೇ ಗೊಂದಲ ಇರುವಾಗ ದೇಶದ ಬಗ್ಗೆ ಚಿಂತನೆ ಮಾಡಲು ಅವರಿಗೆ ಸಮಯ, ನಿಯತ್ತು ಇಲ್ಲದಾಗಿದೆ ಎಂದರು.
ಸಂಸದ ಶಿವಕುಮಾರ ಉದಾಸಿ ಮಾತನಾಡಿ, ದೇಶದ ಎಲ್ಲ ಜಿಲ್ಲೆಗಳಲ್ಲೂ ಸ್ವಂತ ಕಟ್ಟಡ ನಿರ್ವಿುಸುವ ಸಂಕಲ್ಪ ಮಾಡಲಾಗಿದೆ. ಕಾರ್ಯಕರ್ತರು ನೆರವು ನೀಡಬೇಕು ಎಂದರು.
ಶಾಸಕರಾದ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ಆರ್. ಶಂಕರ, ಉಗ್ರಾಣ ನಿಗಮ ಅಧ್ಯಕ್ಷ ಯು.ಬಿ. ಬಣಕಾರ ಮಾತನಾಡಿ, ಕಟ್ಟಡ ನಿರ್ವಣಕ್ಕೆ ಕಾರ್ಯಕರ್ತರಿಂದ ದೇಣಿಗೆ ಸಂಗ್ರಹಿಸಿ ಕೊಡುವ ಜತೆಗೆ ವೈಯಕ್ತಿಕವಾಗಿ ನೆರವು ನೀಡುತ್ತೇವೆ ಎಂದರು.
ಕೃಷಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, ಪಕ್ಷದ ಕಚೇರಿಯ ನಿರ್ವಣದಲ್ಲಿ ಪ್ರತಿಯೊಬ್ಬ ಕಾರ್ಯಕರ್ತನೂ ಭಾಗಿದಾರನಾಗಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಂಸದ ಮಂಜುನಾಥ ಕುನ್ನೂರ, ಸುರೇಶಗೌಡ ಪಾಟೀಲ, ಪ್ರಮುಖರಾದ ಮಹೇಶ ಟೆಂಗಿನಕಾಯಿ, ಮಾ. ನಾಗರಾಜ, ಲಿಂಗರಾಜ ಪಾಟೀಲ, ನಾರಾಯಣ ಜರತಾರಘರ ಇತರರಿದ್ದರು. ಮಾಜಿ ಶಾಸಕ ಶಿವರಾಜ ಸಜ್ಜನರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಶಿಧರ ಹೊಸಳ್ಳಿ ನಿರೂಪಿಸಿದರು. ಪ್ರದೀಪ ಮುಳ್ಳೂರು ಸ್ವಾಗತಿಸಿದರು. ಕೃಷ್ಣ ಈಳಗೇರ ವಂದಿಸಿದರು.
ಹಾವೇರಿ ಬಿಜೆಪಿ ಕಾರ್ಯಾಲಯ ನಿರ್ವಣಕ್ಕೆ ಆರ್ಥಿಕ ಕೊರತೆ ಎದುರಾಗುವುದಿಲ್ಲ. ಅನೇಕರು ದೇಣಿಗೆ ನೀಡಲು ಮುಂದಾಗಿದ್ದಾರೆ. ಇಬ್ಬರು ಸಚಿವರಿದ್ದಾರೆ. ಅವರೆಲ್ಲ ಸಂಪನ್ಮೂಲ ಕೊಡಿಸುತ್ತಾರೆ. ಇಲ್ಲಿ ಹೆಚ್ಚು ಹಣ ಸೇರಿ ಅದನ್ನು ಬೇರೆ ಜಿಲ್ಲೆಗೆ ವರ್ಗಾಯಿಸಬಹುದು. ಅದರ ಬದಲು ಮಂಡಲದಲ್ಲಿ ಕಾರ್ಯಾಲಯ ನಿರ್ವಿುಸಿ ಎಂದು ನಳೀನ್ಕುಮಾರ್ ಕಟೀಲ್ ಹೇಳಿದರು.