

ತುಮಕೂರು: ಜಿಲ್ಲೆಯ ಜೀವನಾಡಿ ಹೇಮಾವತಿ ನೀರಿನ ವಿಚಾರವಾಗಿ ಊರ ಹೆಬ್ಬಾಗಿಲಲ್ಲೇ ದೇವರಾಜ ಅರಸು ಅವರ ಫೋಟೋ ಇಟ್ಟು ನಮ್ಮ ಜನರು ಪೂಜಿಸಬೇಕು. ಒಂದು ಹನಿ ನೀರು ಪಡೆಯಲು ಸಾಧ್ಯವಿಲ್ಲವೆಂದು ಅಂದು ದೇವೇಗೌಡರು ಹೇಳಿದ್ದಾಗ್ಯೂ ಅರಸು ಅವರು ಅಧಿಕಾರದಿಂದ ನಿರ್ಗಮಿಸುವ ಕೊನೆ 3 ದಿನಗಳಲ್ಲಿ ಹೇಮಾವತಿ ನೀರಿನ ಯೋಜನೆ ಮಂಜೂರು ಮಾಡಿಕೊಟ್ಟಿದ್ದರು. ಅದರ ಫಲವಾಗಿ 24.5 ಟಿಎಂಸಿ ನೀರನ್ನು ಪ್ರಸ್ತುತ ಜಿಲ್ಲೆ ಜನರು ಪಡೆಯುವಂತಾಗಿದೆ ಎಂದು ಸಂಸದ ಜಿ.ಎಸ್.ಬಸವರಾಜು ಸ್ಮರಿಸಿದರು.
ಕಳೆದ 60 ವರ್ಷಗಳ ರಾಜಕೀಯ ಜೀವನದಲ್ಲಿ ವಿವಿಧ ಹಂತದಲ್ಲಿ ಕಾರ್ಯನಿರ್ವಹಿಸಲು ಸಹಕರಿಸಿದ ಎಲ್ಲಾ ಪಕ್ಷಗಳ ನಾಯಕರಿಗೂ ಮತದಾರರಿಗೂ ಜನತೆಗೆ, ನನ್ನ ಕುಟುಂಬದವರಿಗೆ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸುತ್ತೇನೆ. ವಿ.ಸೋಮಣ್ಣ ಕ್ಷೇತ್ರದ ನೂತನ ಸಂಸದರಾಗಿ ಆಯ್ಕೆಯಾಗುವುದು ನಿಶ್ಚಿತ. ಮುದ್ದಹನುಮೇಗೌಡರದ್ದು ಮಾತಾಡಿದ್ದೇ ಸಾಧನೆಯಾಗಿದೆ ಎಂದು ಬಸವರಾಜು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದರು.