ಸುರೇಶಗೌಡಗೆ 60ರ ಸಂಭ್ರಮ

Hebbaka_Ravi
Published on

ತುಮಕೂರು: ಶಾಸಕ ಬಿ.ಸುರೇಶ್​ಗೌಡ ಅವರ 60ನೇ ಹುಟ್ಟುಹಬ್ಬವನ್ನು ಶುಕ್ರವಾರ ಕಚೇರಿಯಲ್ಲಿ ಬಿಜೆಪಿ ಕಾರ್ಯಕರ್ತರು, ಶಾಸಕರ ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದರು. ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು, ಮಠಗಳಿಗೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದರು.

ಸುರೇಶ್​ಗೌಡ ಮಾತನಾಡಿ, ಕ್ಷೇತ್ರದ ಜನರ ಪ್ರೀತಿಯ ಋಣ ದೊಡ್ಡದು. ಪ್ರೀತಿಯಿಂದ ಜಗತ್ತನ್ನೇ ಗೆಲ್ಲಬಹುದು, ಪ್ರೀತಿ ಇರುವ ಕಡೆ ಅಧಿಕಾರ, ಐಶ್ವರ್ಯ ಸೇರಿದಂತೆ ಎಲ್ಲವೂ ದೊರೆಯುತ್ತದೆ ಎಂದು ಭಾವುಕರಾಗಿ ನುಡಿದರು. ತಾವು ಯಾವತ್ತೂ ಹಟ್ಟುಹಬ್ಬ ಆಚರಿಸಿಕೊಂಡಿಲ್ಲ, ಈ ದಿನ ಆಭಿಮಾನಿಗಳು ಪ್ರೀತಿಯಿಂದ ನನ್ನ ಜನ್ಮದಿನ ಆಚರಣೆ ಮಾಡುತ್ತಿದ್ದಾರೆ ಎಂದರು.

ಇದು ನನ್ನ ಕಾರ್ಯಕ್ರಮವಲ್ಲ, ಕಾರ್ಯಕರ್ತರ ಕಾರ್ಯಕ್ರಮ. ಇಷ್ಟೆಲ್ಲಾ ಪ್ರೀತಿಯ ಮಹಾಪೂರ ತಮ್ಮ ಮೇಲೆ ಹರಿದುಬಂದಿರುವ ಸಂದರ್ಭದಲ್ಲಿ, ತಾವು ಇನ್ನುಮುಂದೆ ಯಾರ ಮೇಲೂ ಕೋಪ ಮಾಡಿಕೊಳ್ಳಬಾರದು, ಪ್ರೀತಿ, ಶಾಂತಿ, ಸಹನೆಯಿಂದಲೇ ನಡೆದುಕೊಳ್ಳಬೇಕು ಎಂದು ನಿರ್ಧರಿಸಿದ್ದೇನೆ ಎಂದರು.

ಶುಕ್ರವಾರ ಬೆಳಗ್ಗೆ ಶಿವಗಂಗೆಗೆ ತೆರಳಿ ಗವಿ ಗಂಗಾಧರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಸಿದ್ಧಗಂಗಾ ಮಠಕ್ಕೆ ಆಗಮಿಸಿ ಡಾ.ಶಿವಕುಮಾರ ಸ್ವಾಮೀಜಿ ಗದ್ದಿಗೆಗೆ ಪೂಜೆ ಸಲ್ಲಿಸಿ, ಶ್ರೀಸಿದ್ಧಲಿಂಗ ಸ್ವಾಮೀಜಿ ಆಶೀರ್ವಾದ ಪಡೆದರು.

ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ವಿತರಣೆ ಮಾಡಿದರು. ನಂತರ ಗೂಳೂರಿನಲ್ಲಿ ಅಭಿಮಾನಿಗಳು ಶಾಸಕರನ್ನು ಬೆಳ್ಳಿರಥದಲ್ಲಿ ಕೂರಿಸಿ ಪ್ರಮುಖ ರಸ್ತೆಗಳಲ್ಲಿ ಅದ್ದೂರಿಯಾಗಿ ಮೆರವಣಿಗೆ ಮಾಡಿ ಸಂಭ್ರಮಿಸಿದರು. ಗೂಳೂರು ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಹೊನ್ನುಡಿಕೆ ಹ್ಯಾಂಡ್​ಪೋಸ್ಟ್​ ಸೇರಿದಂತೆ ದಾರಿಯುದ್ದಕ್ಕೂ ಅಭಿಮಾನಿಗಳು ಗುಂಪುಸೇರಿ ಶಾಸಕರಿಗೆ ಮಾಲಾರ್ಪಣೆ ಮಾಡಿ ಜನ್ಮದಿನದ ಶುಭಾ ಕೋರಿದರು.

ಗ್ರಾಮಾಂತರ ಕ್ಷೇತ್ರದ ಬಿಜೆಪಿ ಕಚೇರಿ ಬಾಣಾವರದ ಶಕ್ತಿಸೌಧದಲ್ಲಿ ಹಬ್ಬದ ವಾತಾವರಣ ನಿಮಾರ್ಣವಾಗಿತ್ತು. ಜಿಲ್ಲೆಯಾದ್ಯಂತ ಸಾವಿರಾರು ಮಂದಿ ಅಭಿಮಾನಿಗಳು, ಕಾರ್ಯಕರ್ತರು ಸೇರಿದ್ದರು. ಅಭಿಮಾನಿಗಳು ಕೇಕ್​ ಕತ್ತರಿಸಿ, ಸಿಹಿ ವಿತರಣೆ ಮಾಡಿ ತಮ್ಮ ನಾಯಕನ ಜನ್ಮದಿನವನ್ನು ಸಡಗರದಿಂದ ಆಚರಿಸಿದರು. ಜಿಲ್ಲೆಯ ಬಿಜೆಪಿ ಹಾಗೂ ಜೆಡಿಎಸ್​ನ ಹಲವಾರು ನಾಯಕರು ಆಗಮಿಸಿ ಸುರೇಶ್​ಗೌಡರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು.

ಬೆಳ್ಳಾವಿಯ ಕಾರದೇಶ್ವರ ಮಠಕ್ಕೆ ತೆರಳಿ ಕಾರದ ವೀರಬಸವ ಸ್ವಾಮೀಜಿಗಳ ಆರ್ಶೀವಾದ ಪಡೆದರು, ದೇವರಾಯನದುರ್ಗಕ್ಕೆ ಹೋಗಿ ನರಸಿಂಹಸ್ವಾಮಿಗೆ ಪೂಜೆ ಸಲ್ಲಿಸಿದರು. ಹೆಬ್ಬೂರು ಸರ್ಕಾರಿ ಶಾಲೆ ಮೈದಾನದಲ್ಲಿ ಹೆಸರಾಂತ ಗಾಯಕ ರಾಜೇಶ್​ಕೃಷ್ಣನ್​ ನೇತೃತ್ವದ ತಂಡದಿಂದ ನಡೆದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಸಾವಿರಾರು ಜನ ಪಾಲ್ಗೊಂಡು ಸಂಭ್ರಮಿಸಿದರು.

ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್​, ಮಾಜಿ ಸಚಿವ ಸೊಗಡು ಶಿವಣ್ಣ ಸೇರಿದಂತೆ ಸಾವಿರಾರು ಜನರು ಆಗಮಿಸಿ ನೆಚ್ಚಿನ ನಾಯಕನಿಗೆ ಶುಭಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net