

ತುಮಕೂರು: ಮಾಜಿ ಸಿಎಂ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬಗ್ಗೆ ಅತ್ಯಂತ ಅವಹೇಳನಕಾರಿಯಾಗಿ ಮಾತನಾಡಿರುವ ಲೋಕಾಯುಕ್ತ ವಿಶೇಷ ತನಿಖಾ ದಳದ ಎಡಿಜಿಪಿ ಎಂ.ಚಂದ್ರಶೇಖರ್ ವಿರುದ್ಧ ಕೇಂದ್ರ ಸರ್ಕಾರ ಉಗ್ರ ಕ್ರಮತೆಗೆದುಕೊಳ್ಳಬೇಕು. ತಕ್ಷಣ ಅವರ ಎರವಲು ಸೇವೆ ಮುಕ್ತಾಯಗೊಳಿಸಿ, ಅವರ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳ ಸಿಬಿಐ ತನಿಖೆ ಆರಂಭಿಸಬೇಕು ಎಂದು ಗ್ರಾಮಾಂತರ ಬಿಜೆಪಿ ಶಾಸಕ ಬಿ.ಸುರೇಶ್ಗೌಡ ಆಗ್ರಹಿಸಿದರು.
ನನ್ನ 3 ದಶಕಗಳ ಸಾರ್ವಜನಿಕ ಜೀವನದಲ್ಲಿ ಒಬ್ಬ ಅಧಿಕಾರಿ ಈ ರೀತಿ ಶಾಸಕಾಂಗದ ಗಣ್ಯರೊಬ್ಬರ ವಿರುದ್ಧ ಮಾತನಾಡಿರುವುದು ನೋಡಿಲ್ಲ. ಇಂತಹ ಉದ್ಧಟತನವನ್ನು ಸಹಿಸಿಕೊಂಡು ಇರಲು ಆಗುವುದಿಲ್ಲ. ಅಧಿಕಾರಿಗಳಾದವರು ಅಧಿಕಾರಿಗಳಂತೆ ವರ್ತಿಸಬೇಕು, ಗೂಂಡಾಗಳ ತರಹ ಅಲ್ಲ. ಈ ಸರ್ಕಾರದಲ್ಲಿ ಯಾವ ಮಾನ ಮರ್ಯಾದೆ ಉಳಿದಿಲ್ಲ ಎನ್ನುವುದಕ್ಕೆ ಚಂದ್ರಶೇಖರ್ ಆಡಿರುವ ಮಾತು ನಿದರ್ಶನವಾಗಿದೆ. ರಾಜಭವನದ ವಿರುದ್ಧವೇ ತನಿಖೆಗೆ ಮುಂದಾಗುವಂತ ದುರಹಂಕಾರ ಈ ಅಧಿಕಾರಿಗೆ ಎಲ್ಲಿಂದ ಬಂತು ಎಂದು ತೀಕ್ಷ$್ಣವಾಗಿ ಪ್ರಶ್ನಿಸಿದ್ದಾರೆ.
ಒಬ್ಬ ಮಾಜಿ ಸಿಎಂ, ಕೇಂದ್ರ ಸಚಿವರ ವಿರುದ್ಧವೇ ಇಂತಹ ಭಾಷೆ ಬಳಸುವುದಾದರೆ ಇನ್ನು ನಮ್ಮಂತವರ ಗತಿಯೇನು? ಕುಮಾರಸ್ವಾಮಿ ಅವರ ಬಗ್ಗೆ ಹಂದಿ ಎನ್ನುವ ಪದ ಬಳಸಿರುವ ಈ ಅಧಿಕಾರಿಯೇ ಹಂದಿಗೆ ಸಮಾನವಾಗಿದ್ದಾರೆ. ಅವರು ತಮ್ಮ ವಿರುದ್ಧ ಬಂದ ಆರೋಪಗಳಿಂದ ಮುಕ್ತರಾಗುವವರೆಗೆ ಅವರನ್ನು ಆ ಹುದ್ದೆಯಿಂದ ಬಿಡುಗಡೆ ಮಾಡಲು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು ಸರ್ಕಾರಕ್ಕೆ ಕೋರಿಕೊಳ್ಳಬೇಕು. ಇಲ್ಲವಾದರೆ ಇಂತಹ ಪರಮಭ್ರಷ್ಟ ಅಧಿಕಾರಿಯನ್ನು ತಮ್ಮ ಕಚೇರಿಯಲ್ಲಿ ಇಟ್ಟುಕೊಂಡು ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತ ಸಂಸ್ಥೆ ಹೋರಾಟ ಮಾಡುವುದು ಒಂದು ನಾಟಕದಂತೆ ಜನರಿಗೆ ಅನಿಸುತ್ತದೆ ಎಂದು ಪ್ರಕಟಣೆಯಲ್ಲಿ ಹರಿಹಾಯ್ದರು.