

ಕಾರವಾರ: ಯಾವುದೆ ಸ್ವಾರ್ಥ ಇಲ್ಲದೆ ನರೇಂದ್ರ ಮೋದಿ ಅವರು ದೇಶ ಹಾಗೂ ಜನತೆಯ ಹಿತಕ್ಕಾಗಿ ನಿರಂತರವಾಗಿ ದುಡಿಯುತ್ತಿದ್ದಾರೆ. ಹೀಗಾಗಿ ಅವರೊಂದಿಗೆ ಕೈ ಜೋಡಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಬಿಜೆಪಿಯ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಹೇಳಿದರು.
ಕಾರವಾರ ನಗರ ಹಾಗೂ ಗ್ರಾಮೀಣ, ಅಂಕೋಲಾ ಮಂಡಲದ ವ್ಯಾಪ್ತಿಯಲ್ಲಿ ವಿವಿಧೆಡೆ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ದೇಶಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮಹತ್ವಪೂರ್ಣ ಕಾರ್ಯಗಳನ್ನು ಮಾಡಿದ್ದಾರೆ. ದೇಶದಾದ್ಯಂತ ಜನರಿಗೆ ಅನುಕೂಲಕರ ಕೊಡುಗೆಗಳನ್ನು ನೀಡಿದ್ದಾರೆ. ಅವರ ಯೋಜನೆಗಳು ದೇಶದ ಅಭಿವೃದ್ಧಿಗೆ ಕಾರಣವಾಗಿದೆ. ವಿಶ್ವದಲ್ಲಿ ಭಾರತದ ಕೀರ್ತಿ, ಗೌರವವನ್ನು ಹೆಚ್ಚಿಸಿದ್ದಾರೆ ಎಂದರು.
ನಗರದ ಸೋನಾರವಾಡದಲ್ಲಿ ಪಕ್ಷದ ಹಿರಿಯ ಕಾರ್ಯಕರ್ತರಾದ ವಿಠ್ಠಲ ಕೇಣಿ ಹಾಗೂ ರಾಮದಾಸ ಅಣ್ವೇಕರ ಅವರ ನಿವಾಸದಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದರು. ಬಿಜೆಪಿಯ ಅಭಿಮಾನಿಗಳೂ ಸಹ ಸದಸ್ಯರಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದರು. ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ್, ನಗರ ಮಂಡಲ ಅಧ್ಯಕ್ಷ ನಾಗೇಶ ಕುರ್ಡೇಕರ್, ನಗರಸಭೆ ಸದಸ್ಯರಾದ ಮಾಲಾ ಹುಲ್ಸವಾರ, ರೋಷನಿ ಮಾಳ್ಸೇಕರ್, ಹನುಮಂತ ತಳವಾರ, ಶಿಲ್ಪಾ ನಾಯ್ಕ, ಹಿರಿಯ ಕಾರ್ಯಕರ್ತ ಪ್ರಮೋದ ಅಣ್ವೇಕರ್, ಚಂದ್ರಹಾಸ ಕುಡತರಕರ್, ಗುರು ಅಣ್ವೇಕರ್, ಶಿವಾನಂದ ಅಣ್ವೇಕರ್, ಮಾಧ್ಯಮ ಸಂಚಾಲಕ ಕಿಶನ್ ಕಾಂಬ್ಳೆ, ಪ್ರಧಾನ ಕಾರ್ಯದರ್ಶಿ ದೇವಿದಾಸ ಕಂತ್ರೆಕರ, ಶಕ್ತಿ ಕೇಂದ್ರ ಪ್ರಮುಖ ದೀಪಕ ಗಾಂವಕರ್ ಇದ್ದರು. ಗ್ರಾಮೀಣ ಘಟಕದ ಅಭಿಯಾನದಲ್ಲಿ ಸುಭಾಷ ಗುನಗಿ, ಜಿಲ್ಲಾ ಉಪಾಧ್ಯಕ್ಷ ಸಂಜಯ ಸಾಳುಂಕೆ, ಗ್ರಾಮೀಣ ಪ್ರಧಾನ ಕಾರ್ಯದರ್ಶಿ ಉದಯ ನಾಯ್ಕ ಇತರರು ಇದ್ದರು.