

ಮಂಗಳೂರು: ಕರ್ನಾಟಕದಲ್ಲಿ ನಮ್ಮ ಡಬಲ್ ಇಂಜಿನ್ ಸರ್ಕಾರ ಒಳ್ಳೆಯ ಕೆಲಸ ಮಾಡಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಉತ್ತಮ ಕೆಲಸ ಕಾರ್ಯ ಮಾಡಿದ್ದು, 2024ರಲ್ಲೂ ಮೋದಿ ಪ್ರಧಾನಿಯಾಗಿ ಆಯ್ಕೆಯಾಗಲಿದ್ದಾರೆ. ಜನರೂ ಇದನ್ನೇ ಬಯಸುತ್ತಿದ್ದಾರೆ ಎಂದು ಕೇಂದ್ರ ಪ್ರವಾಸೋದ್ಯಮ ಮತ್ತು ಬಂದರು, ಹಡಗು ಮತ್ತು ಜಲ ಮಾರ್ಗಗಳ ರಾಜ್ಯ ಖಾತೆ ಸಚಿವ ಶ್ರೀಪಾದ ನಾಯಕ್ ಹೇಳಿದರು.
ದ.ಕ. ಬಿಜೆಪಿ ವತಿಯಿಂದ ಮಂಗಳೂರಿನಲ್ಲಿ ಆಯೋಜಿಸಿದ ಪ್ರಣಾಳಿಕೆ ಸಲಹಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ದೇಶದ ಹಾಗೂ ರಾಜ್ಯದ ಅಭಿವೃದ್ಧಿ ದೃಷ್ಟಿಯಲ್ಲಿ ಜನರ ಬೇಡಿಕೆಗಳನ್ನು ನೇರವಾಗಿ ಜನರಿಂದ ಸಂಗ್ರಹಿಸಲು ಸರ್ಕಾರ ಬದ್ಧವಾಗಿದ್ದು, ಸಾರ್ವಜನಿಕರಿಂದ ಸಲಹೆ ಸೂಚನೆಗಳನ್ನು ಪಡೆದುಕೊಳ್ಳುತ್ತಿದೆ. ಸಭೆಯಲ್ಲಿ ಸಾರ್ವಜನಿಕರು ನೀಡಿದ ಸಲಹೆಗಳನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಗಮನಕ್ಕೆ ತಂದು ಅವುಗಳನ್ನು ಶೀಘ್ರದಲ್ಲೇ ಬಗೆಹರಿಸುವಲ್ಲಿ ಶ್ರಮ ವಹಿಸುವುದಾಗಿ ಭರವಸೆ ನೀಡಿದರು.
ಸಾರ್ವಜನಿಕರಿಂದ ಪ್ರಣಾಳಿಕಾ ಸಲಹೆ: ಲೆಕ್ಕ ಪರಿಶೋಧಕ ಎಸ್.ಎಸ್. ನಾಯಕ್ ಮಾತನಾಡಿ, ಮಂಗಳೂರಿನಿಂದ ಗೋವಾಕ್ಕೆ ಕೊಂಕಣ ರೈಲ್ವೆಯ ದ್ವಿಪಥ ಮಾರ್ಗ ನಿರ್ಮಾಣದ ಅಗತ್ಯ ಇದೆ. ನಂತೂರಿನಲ್ಲಿ ಫ್ಲೈಓವರ್ ನಿರ್ಮಾಣ, ಕೆಐಎಡಿಬಿ ವ್ಯಾಪ್ತಿಯ ಜೆಸ್ಕೋ ಜಮೀನಿನಲ್ಲಿರುವ ಸಮಸ್ಯೆ ಬಗೆಹರಿಸಿ ಕ್ರಮ, ಪಚ್ಚನಾಡಿ ಕಸದ ಸಮಸ್ಯೆ ವೈಜ್ಞಾನಿಕ ರೀತಿಯಲ್ಲಿ ಬಗೆಹರಿಸಲು ಸಲಹೆ ನೀಡಿದರು.
ನವಮಂಗಳೂರು ಬಂದರು ಬಳಕೆದಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ಕೊಟ್ಟಾರಿ ಮಾತನಾಡಿ, ಹುಬ್ಬಳಿಯಿಂದ ಮಂಗಳೂರಿಗೆ ರೈಲ್ವೆ ಮಾರ್ಗ ನಿರ್ಮಾಣದ ಯೋಜನೆ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು, ಇದರಿಂದ ಉತ್ತರಕರ್ನಾಟಕದ ಭಾಗದ ಕಾರ್ಖಾನೆಗಳ ಸರಕುಗಳು ಕಾರವಾರ ಬಂದರಿಗೆ ಹೋಗಿ ಮಂಗಳೂರು ಬಂದರಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಂಗಳೂರು -ಹುಬ್ಬಳ್ಳಿ ರೈಲ್ವೆ ಮಾರ್ಗ ನಿರ್ಮಾಣದ ಬಗ್ಗೆ ಸಲಹೆ ನೀಡಿದರು.
ಶಾಸಕ ವೇದವ್ಯಾಸ ಕಾಮತ್, ಕ್ರೆಡೈ ಕಾರ್ಯದರ್ಶಿ ಪ್ರಶಾಂತ್, ಸಿ.ಎ. ಶಾಂತಾರಾಮ್ ಶೆಟ್ಟಿ, ಪ್ರಣಾಳಿಕೆ ಸಲಹಾ ಸಮಿತಿ ರಾಜ್ಯ ಸಹ ಪ್ರಭಾರಿ ರವೀಂದ್ರ ಪೈ ಸೇರಿದಂತೆ ಹಲವರು ಇದ್ದರು. ವಿನ್ಯಾಸ್ ಕಾರ್ಯಕ್ರಮ ನಿರೂಪಿಸಿದರು. ಬಿಜೆಪಿ ಮುಂದಾಳು ಸಂಜಯ ಪ್ರಭು ವಂದಿಸಿದರು.
ಮರೈನ್, ರಿಂಗ್‌ರೋಡ್‌ಗೆ ಸಲಹೆ
ಮಂಗಳೂರು ರಸ್ತೆಗಳ ಬಗ್ಗೆ, ಬೆಂಗಳೂರು -ಮಂಗಳೂರು ರಸ್ತೆಯ ಶಿರಾಡಿಯಲ್ಲಿ ಸುರಂಗ ನಿರ್ಮಾಣ, ನಿರುದ್ಯೋಗ ನಿವಾರಣೆ, ಮರೈನ್ ಕಾಲೇಜು ತೆರೆಯಲು ಅನುಮತಿ ಬಗ್ಗೆ ಹಲವರು ಸಲಹೆ ನೀಡಿದರು. ಬೆಂಗಳೂರು ನಗರ ಪ್ರದೇಶದಲ್ಲಿರುವಂತೆ ಖಾಸಗಿ ಭಾಗಿತ್ವದಲ್ಲಿ ನಗರದ ಹೊರಭಾಗದಲ್ಲಿ ರಿಂಗ್ ರೋಡ್, ಫ್ಲೈಓವರ್ ನಿರ್ಮಾಣ ಮಾಡಿದರೆ ಘನ ವಾಹನಗಳು ನಗರದ ಒಳಗೆ ಬರದೆ ಹೊರ ಭಾಗದಲ್ಲಿ ಚಲಿಸಿದರೆ ವಾಹನ ದಟ್ಟಣೆ ಕಡಿಮೆಯಾಗಲಿದೆ. ಮಂಗಳೂರಿನಲ್ಲಿ ಹಲವು ಕಾಲೇಜುಗಳು ಇದ್ದರೂ ಉದ್ಯೋಗ ಕಲ್ಪಿಸುವ ಬಗ್ಗೆ ಯಾವುದೇ ಯೋಜನೆಗಳು ನಿರ್ಮಾಣವಾಗಿಲ್ಲ ಎಂದು ಅಭಿಪ್ರಾಯಪಟ್ಟರು.