

ಬಳ್ಳಾರಿ: ನಾನೇನು ತಪ್ಪು ಮಾಡದೆ ಇದ್ರು ನನ್ನ ಮೇಲೆ ಸುಳ್ಳು ಕೇಸು ಹಾಕಿದ್ದಾರೆ. ನಾನು ಮಂತ್ರಿಯಾಗಿ 40 ವರ್ಷ ಆಯ್ತು. ಸಣ್ಣ ಕಳಂಕವೂ ನನ್ನ ಮೇಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ(CM Siddaramaiah) ಹೇಳಿದರು.
ಸಂಡೂರು ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ನಡೆದ ಬೃಹತ್ ಜನ ಸಮಾವೇಶದಲ್ಲಿ ಮಾತನಾಡಿದರು.
ಸುಳ್ಳು ಕೇಸು ಹಾಕಿಸಿದ ಬಿಜೆಪಿಗೆ ಸರಿಯಾದ ಪಾಠ ಕಲಿಸಬೇಕು ಅಂದರೆ ಇಲ್ಲಿನ ಅಭ್ಯರ್ಥಿ ಅನ್ನಪೂರ್ಣಮ್ಮ ಅವರನ್ನು ಗೆಲ್ಲಿಸಿ ಎಂದರು. ಯಶವಂತಪುರದ ಪುತ್ರ ಈ.ತುಕಾರಾಮ್ ಲೋಕಸಭಾ ಸದಸ್ಯರಾಗಿದ್ದಾರೆ. ಈಗ ಈ ಊರಿನ ಸೊಸೆ ಅನ್ನಪೂರ್ಣಮ್ಮ ಅವರನ್ನೂ ಗೆಲ್ಲಿಸಿ. ಈ.ತುಕಾರಾಮ್ ಅಭಿವೃದ್ಧಿಯಲ್ಲಿ ನಿಸ್ಸೀಮ. ನನ್ನಿಂದ, ಎಲ್ಲಾ ಮಂತ್ರಿಗಳಿಂದ ಸಜ್ಜನಿಕೆಯಿಂದಲೇ ಕೆಲಸ ಮಾಡಿಸಿಕೊಳ್ಳುವ ಕಲೆ, ಕಾಳಜಿ ಈ.ತುಕಾರಾಮ್ಗೆ ಇದೆ
ನಮ್ಮ ಪಾಲಿನ ತೆರಿಗೆ ಹಣ ಕೊಡುವುದನ್ನು ನಿಲ್ಲಿಸಿದರೆ, ಗ್ಯಾರಂಟಿಗಳನ್ನು ನಿಲ್ಲಿಸಿ ಬಿಡ್ತಾರೆ ಅಂತ ಕೇಂದ್ರ ತೊಂದರೆ ಕೊಡುತ್ತಿದೆ. ಆದರೆ ನಾವು 56 ಸಾವಿರ ಕೋಟಿ ಹಣವನ್ನು ಗ್ಯಾರಂಟಿಗಳಿಗೆ ಖರ್ಚು ಮಾಡುತ್ತಲೇ, ಒಂದು ಲಕ್ಷ ಇಪ್ಪತ್ತು ಸಾವಿರ ಕೋಟಿ ಹಣವನ್ನು ಅಭಿವೃದ್ಧಿ ಕೆಲಸಗಳಿಗೆ ಕೊಡುತ್ತಿದ್ದೇವೆ. ಆದ್ದರಿಂದ ಬಿಜೆಪಿಯವರ ಹಸಿ ಹಸಿ ಸುಳ್ಳುಗಳಿಗೆ ಮರುಳಾಗಬೇಡಿ. ಕಾಂಗ್ರೆಸ್ಸಿಗೆ ಮತ ನೀಡಿ. ಅನ್ನಪೂರ್ಣಮ್ಮ ಗೆದ್ದರೆ ನಾನೇ ಗೆದ್ದ ಹಾಗೆ. ಈ ಗೆಲುವಿನಿಂದ ನನಗೆ ಶಕ್ತಿ ಬರುತ್ತದೆ ಎಂದರು.
ಬಿಜೆಪಿ ಕೊಟ್ಟಿದ್ದ ಭರವಸೆಗಳಲ್ಲಿ ಶೇ.10 ರಷ್ಟು ಈಡೇರಿಸಲಿಲ್ಲ
ಚುನಾವಣೆ ವೇಳೆಯಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದರು. ಆದರೆ, ಗೆದ್ದ ಬಳಿಕ ಸಾಲ ಮನ್ನಾ ಮಾಡಿ ಅಂದ್ರೆ, "ಸಾಲ ಮನ್ನಾ ಮಾಡೋಕೆ ನಾವೇನು ದುಡ್ಡು ಪ್ರಿಂಟ್ ಹಾಕೋ ಮಿಷನ್ ಇದೆಯಾ? ಎಂದು ಯಡಿಯೂರಪ್ಪ ಪ್ರಶ್ನಿಸಿದ್ದರು ಎಂದು ಹೇಳಿದರು.
ಸಾಲ ಮನ್ನಾ ಮಾಡದ ಕೇಂದ್ರದ ಬಿಜೆಪಿ ಸರ್ಕಾರದ ಪ್ರಧಾನಿ ಮೋದಿಯವರು ಅತ್ಯಂತ ಶ್ರೀಮಂತರಾದ ಕಾರ್ಪೋರೇಟ್ ಕಂಪನಿಗಳ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು. ಇದೇ ಹಣದಲ್ಲಿ ರೈತರ ಸಾಲ ಮನ್ನಾ ಮಾಡಬಹುದಿತ್ತಲ್ಲವಾ ? ಎಂದು ಪ್ರಶ್ನಿಸಿದರು.
ಮೋದಿ ಟೀಕಿಸಿದ್ದಕ್ಕೆ ನನ್ನ ಮೇಲೆ ಸುಳ್ಳು ಕೇಸು
ನಾನು ನಿರಂತರವಾಗಿ ಮೋದಿ, ಅಮಿತ್ ಶಾ ಅವರ ನೀತಿಗಳನ್ನು, ಸುಳ್ಳುಗಳನ್ನು, ಅವರು ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯಗಳನ್ನು ಪ್ರಶ್ನಿಸಿ ಟೀಕಿಸಿದ್ದರಿಂದ ನನ್ನನ್ನೇ ಮುಗಿಸಲು ಮುಂದಾಗಿದ್ದಾರೆ. ನನ್ನ ಮೇಲೆ ಸುಳ್ಳು ಕೇಸು ಹಾಕಿಸಿ ಷಡ್ಯಂತ್ರ ನಡೆಸುತ್ತಿದ್ದಾರೆ. ಇಡಿ, ಐಟಿ, ಸಿಬಿಐ ಮೂಲಕ ಪ್ರಧಾನಿ ತಮ್ಮಟೀಕಾಕಾರರನ್ನು ಮುಗಿಸಲು ಹೊರಟಿದ್ದಾರೆ ಎಂದು ಕುಟುಕಿದರು.