

ಬೆಂಗಳೂರು: ‘ಮತ್ತೊಮ್ಮೆ ಮೋದಿ’ ಜಾಡು ಹಿಡಿದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಪರೋಕ್ಷವಾಗಿ ಫೈಟ್ಗೆ ಇಳಿದು, ಬಲಪ್ರದರ್ಶನಕ್ಕೆ ಸಜ್ಜಾಗಿರುವುದು ರಾಜ್ಯ ನಾಯಕರಿಗೆ ತಲೆನೋವಾಗಿದೆ.
ಚಿಕ್ಕಬಳ್ಳಾಪುರ, ತುಮಕೂರು, ದಾವಣಗೆರೆ, ಬೀದರ್ ಸೇರಿ ಏಳೆಂಟು ಲೋಕಸಭೆ ಕ್ಷೇತ್ರಗಳಲ್ಲಿ ಟಿಕೆಟ್ಗೆ ಜಿದ್ದಾಜಿದ್ದಿ, ಆಕಾಂಕ್ಷಿಗಳ ಮಧ್ಯೆ ಪೈಪೋಟಿ ಏರ್ಪಡುವ ಲಕ್ಷಣಗಳು ಗೋಚರಿಸಿವೆ. ಪಕ್ಷದ ಪರವಾದ ಅಲೆಯು ಬೇರೊಂದು ಸ್ವರೂಪ ಪಡೆಯುವುದನ್ನು ತಡೆಯಲು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತೆರೆಮರೆಯಲ್ಲಿ ಸಂಧಾನಕ್ಕೆ ಇಳಿದಿದ್ದಾರೆ. ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ವರಿಷ್ಠರ ನಿರ್ಣಯವೇ ಅಂತಿಮ. ಎಲ್ಲ ಹಂತದ ನಾಯಕರು, ಮುಖಂಡರು ಅದರಲ್ಲೂ ವಿಶೇಷವಾಗಿ ಟಿಕೆಟ್ ಆಕಾಂಕ್ಷಿಗಳಿಗೆ ಈ ಬಗ್ಗೆ ಸಾರಿ ಹೇಳಿದ್ದರೂ ಮುಸುಕಿನ ಗುದ್ದಾಟ ಶುರುವಾಗಿದೆ.
ಮಾತುಕತೆ ಕಸರತ್ತು: ಬಿಕ್ಕಟ್ಟು ಸೃಷ್ಟಿ ಸಾಧ್ಯತೆ ಕ್ಷೇತ್ರಗಳನ್ನು ಬಿಎಸ್ವೈ ಈಗಾಗಲೇ ಗುರುತಿಸಿದ್ದಾರೆ. ಸಮಸ್ಯೆ ಬಗೆಹರಿಸಲು ಆಯಾ ಕ್ಷೇತ್ರದ ಹಾಲಿ, ಮಾಜಿ ಸಂಸದರು, ಆಕಾಂಕ್ಷಿಗಳು, ಶಾಸಕರ ಜತೆಗೆ ಮಾತುಕತೆ ಕಸರತ್ತು ನಡೆಸಿದ್ದಾರೆ. ಯಡಿಯೂರಪ್ಪ ಅವರ ಡಾಲರ್ಸ್ ಕಾಲನಿಯ ಖಾಸಗಿ ನಿವಾಸದಲ್ಲಿ ದಾವಣಗೆರೆ ಲೋಕಸಭೆ ಕ್ಷೇತ್ರಕ್ಕೆ ಸಂಬಂಧಿಸಿದ ರಾಜಿ ಸಂಧಾನದ ಪ್ರಯತ್ನ ಸೋಮವಾರ ರಾತ್ರಿ ನಡೆದಿದೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸಮಕ್ಷಮ ಮನವೊಲಿಕೆಗೆ ಪ್ರಯತ್ನಿಸಿದ್ದು, ಸಂಸದ ಜಿ.ಎಂ.ಸಿದ್ದೇಶ್ವರ್ ಪರವಾಗಿ ಶಾಸಕ ಬಿ.ಪಿ.ಹರೀಶ್ ಒಲವು ವ್ಯಕ್ತಪಡಿಸಿದರು ಎಂದು ಹೇಳಲಾಗಿದೆ.
ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಎಸ್.ಎ.ರವೀಂದ್ರನಾಥ್, ಮಾಜಿ ಶಾಸಕ ಗುರುಸಿದ್ಧನಗೌಡರ್ ಬೇರೆಯವರಿಗೆ ಟಿಕೆಟ್ ಕೊಟ್ಟರೆ ಗೆಲುವು ನಿಶ್ಚಿತವೆನ್ನುವ ಮೂಲಕ ಸಿದ್ದೇಶ್ವರ್ಗೆ ಬೇಡವೆಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಗೆದ್ದ ಮೇಲೆ ಕ್ಷೇತ್ರದ ಜನರು, ಕಾರ್ಯಕರ್ತರ ಸಂಪರ್ಕ ಕಳೆದುಕೊಂಡಿರುವ ಸಿದ್ದೇಶ್ವರ್ ಅವರಿಗೆ ವಯಸ್ಸಹಜವಾಗಿ ಪ್ರವಾಸವೂ ಕಷ್ಟ ಸಾಧ್ಯವೆಂಬ ಅಭಿಪ್ರಾಯ ವ್ಯಕ್ತಪಡಿಸಿದರು ಎನ್ನಲಾಗಿದೆ. ಇದೇ ವೇಳೆ ಸಿದ್ದೇಶ್ವರ್ ಮತ್ತು ರೇಣುಕಾಚಾರ್ಯ ಮಧ್ಯೆ ಮಾತಿನ ಚಕಮಕಿಯಾಗಿದ್ದು, ಬಿಎಸ್ವೈ ಮಧ್ಯೆ ಪ್ರವೇಶಿಸಿ ಸಮಾಧಾನಪಡಿಸಿದ್ದಾರೆ. ಆದರೂ ಸಿದ್ದೇಶ್ವರ್ ಬೇಸರದಿಂದ ಹೊರ ನಡೆದರು ಎಂದು ಮೂಲಗಳು ತಿಳಿಸಿವೆ.
ಮುಖಂಡರಿಗೆ ಸಲಹೆ
ದಾವಣಗೆರೆ ಜಿಲ್ಲಾ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ತಯಾರಿ ಚರ್ಚೆಯಾಗಿದೆ. ಫೆ.8ರಂದು ನಿಗದಿಯಾಗಿರುವ ಕಾರ್ಯಕ್ರಮದಲ್ಲಿ ಟಿಕೆಟ್ಗಾಗಿ ಬಣಗಾರಿಕೆ ಭುಗಿಲೆದ್ದು, ಇಲ್ಲದ ಸಮಸ್ಯೆ ಸೃಷ್ಟಿಯಾಗುವುದನ್ನು ತಪ್ಪಿಸಲು ಬಿಎಸ್ವೈ ಎಚ್ಚರಿಕೆಯ ನಡೆ ಅನುಸರಿಸಿದ್ದಾರೆ. ಬಿ.ವೈ.ವಿಜಯೇಂದ್ರ, ಕೆ.ಎಸ್.ಈಶ್ವರಪ್ಪ ಪಾಲ್ಗೊಳ್ಳಲಿರುವ ಪದಗ್ರಹಣ ಸಮಾರಂಭ ಅಚ್ಚುಕಟ್ಟಾಗಿ ನಿರ್ವಹಿಸಲು ಮುಖಂಡರಿಗೆ ಸಲಹೆ ನೀಡಿ, ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದರು ಎನ್ನಲಾಗಿದೆ.