ಬಿಜೆಪಿ ಮುಖಂಡರ ಪ್ರತಿಭಟನೆ

28arsph1ep
Published on

ಅರಸೀಕೆರೆ: ರಾಜ್ಯಸಭೆಗೆ ನಡೆದ ಚುನಾವಣೆಯ ಮತ ಎಣಿಕೆ ಬಳಿಕ ವಿಧಾನಸೌಧದಲ್ಲಿ ದೇಶದ್ರೋಹಿ ಘೋಷಣೆ ಕೂಗಿದ ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಬಿಜೆಪಿ ಮುಖಂಡರು ನಗರದ ಬಸವೇಶ್ವರ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.


ಪಕ್ಷದ ಮುಖಂಡ ಜಿವಿಟಿ ಬಸವರಾಜು ಮಾತನಾಡಿ, ಮತಗಳಿಕೆಗಾಗಿ ಒಂದು ಸಮುದಾಯದ ಓಲೈಕೆಗೆ ಕಾಂಗ್ರೆಸ್ ಮುಂದಾಗಿದೆ ಎಂಬುದು ರಾಜ್ಯದ ಜನತೆ ಎದುರು ಬಯಲಾಗಿದೆ. ರಾಜ್ಯಸಭೆ ಸದಸ್ಯರಾಗಿ ಚುನಾಯಿತರಾಗಿರುವ ನಾಸಿರ್ ಹುಸೇನ್ ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್ ಎಂದು ಬಹಿರಂಗವಾಗಿ ಕೂಗಿದ್ದಾರೆ. ಇವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.


ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇನ್ನೂ ಕ್ರಮ ತೆಗೆದುಕೊಳ್ಳುವ ಕುರಿತು ಮೀನಮೇಷ ಎಣಿಸುತ್ತಿರುವುದು ಸರಿಯಲ್ಲ. ದೇಶದ್ರೋಹಿಗಳನ್ನು ಕೂಡಲೇ ವಶಕ್ಕೆ ಪಡೆದು ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದರು. ನಂತರ ಉಪ ತಹಸೀಲ್ದಾರ್ ಪಾಲಾಕ್ಷ ಅವರಿಗೆ ಮನವಿ ಸಲ್ಲಿಸಿದರು.


ಕಾಟೀಕೆರೆ ಪ್ರಸನ್ನಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್, ಗ್ರಾಮಾಂತರ ಮಂಡಲ ಅಧ್ಯಕ್ಷ ದುಮ್ಮೇನಹಳ್ಳಿ ರಮೇಶ್, ಉಪಾಧ್ಯಕ್ಷ ಅಣ್ಣಾಯ್ಕನಹಳ್ಳಿ ವಿಜಯಕುಮಾರ್, ನಗರಾಧ್ಯಕ್ಷ ಪುರುಷೋತ್ತಮ್, ಮುಖಂಡರಾದ ವಿಜಯ್ ವಿಕ್ರಮ್, ಚಂದ್ರು, ವಾಸು, ರವಿ, ವಿನೋದ್ ಕುಟ್ಟಿ, ಯಾದಪುರ ತೇಜಸ್ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net