ಯೋಗೇಶ್ವರ್ ಗೆ ಟಿಕೆಟ್ ನೀಡಿ ಬಿಜೆಪಿ ಮುಖಂಡರ ಆಗ್ರಹ

IMG-20241010-WA0050
Published on

ಚನ್ನಪಟ್ಟಣ

ಮುಂಬರುವ ಉಪಚುನಾವಣೆಯಲ್ಲಿ ಎನ್‌ಡಿಎ ಒಕ್ಕೂಟದಿಂದ ಸಿ.ಪಿ.ಯೋಗೇಶ್ವರ್ ಗೆ ಟಿಕೆಟ್ ನೀಡಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಎನ್.ಆನಂದಸ್ವಾಮಿ ಆಗ್ರಹಿಸಿದರು.

ತಾಲೂಕಿನ ಮತ್ತೀಕೆರೆ ಬಳಿಯ ಖಾಸಗಿ ಹೋಟೆಲ್ ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವೇ ದಿನಗಳಲ್ಲಿ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಲಿದೆ. ಈ ಚುನಾವಣೆಯಲ್ಲಿ ಸ್ಪರ್ಧಿಸಲು ನಮ್ಮ ಪಕ್ಷದ ನಾಯಕರಾದ ಸಿ.ಪಿ.ಯೋಗೇಶ್ವರ್ ಸಮರ್ಥವಾದ ಅಭ್ಯರ್ಥಿಯಾಗಿದ್ದಾರೆ. ನಮ್ಮ ಪಕ್ಷದ ವರಿಷ್ಠರು ಯೋಗೇಶ್ವರ್ ರವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಬೇಕು. ಇದಕ್ಕೆ ಮೈತ್ರಿ ಪಕ್ಷವಾದ ಜೆಡಿಎಸ್ ಕೂಡ ಸಹಕರಿಸಬೇಕು ಎಂದು ಮನವಿ ಮಾಡಿದರು.

ವಿಷ ಹಾಕುವ ಕೆಲಸ ಬೇಡ!

ಬಿಜೆಪಿ ಮುಖಂಡ ಮಾಗಡಿ ಪ್ರಸಾದ್ ಗೌಡ ಮಾತನಾಡಿ, ಜಿಲ್ಲೆಯಲ್ಲಿ ಬಿಜೆಪಿ ‌ಪ್ರಬಲವಾಗಿ ನಿಂತಿದೆ ಎಂದರೆ ಅದಕ್ಕೆ ಸಿ.ಪಿ. ಯೋಗೇಶ್ವರ್ ಹಾಗೂ ಡಾ.ಅಶ್ವಥ್ ನಾರಾಯಣ್ ಕಾರಣ. ಮುಂದಿನ‌ ದಿನಗಳಲ್ಲಿ ಈ ಜಿಲ್ಲೆಯಲ್ಲಿ ಪಕ್ಷ ಬೆಳೆಯಬೇಕು ಎಂದರೆ ನಮ್ಮ ನಾಯಕರಾದ ಯೋಗೇಶ್ವರ್ ಅಭ್ಯರ್ಥಿಯಾಗಬೇಕು. ನಮ್ಮ ಪಕ್ಷದ ವರಿಷ್ಠರು ಯೋಗೇಶ್ವರ್ ಬಿಟ್ಟು ಬೇರೆ ಆಲೋಚನೆ ಮಾಡಿದರೆ ನಾವೂ ಪಕ್ಷದಿಂದ ದೂರವಾಗುತ್ತೇವೆ. ಜಿಲ್ಲೆಯಲ್ಲಿ ಪಕ್ಷ ಹಾಗೂ ಮುಖಂಡರು ಸದೃಢವಾಗಿ ಬೆಳೆಯುತ್ತಿದ್ದೇವೆ. ನಮಗೆ ವಿಷ ಹಾಕುವ ಕೆಲಸ ಮಾಡಬೇಡಿ ಎಂದರು.

ರಾಮನಗರ ಬಿಜೆಪಿ ನಾಯಕ ಗೌತಮ್ ಗೌಡ ಮಾತನಾಡಿ, ಮುಂಬರುವ ಚನ್ನಪಟ್ಟಣ ಉಪಚುನಾವಣೆಯಲ್ಲಿ ಸಿ.ಪಿ. ಯೋಗೇಶ್ವರ್ ಅಭ್ಯರ್ಥಿಯಾಗಬೇಕು ಎಂಬುದು ತಾಲೂಕಿನ ಜನಸಾಮಾನ್ಯರ ಅಭಿಪ್ರಾಯವಾಗಿದೆ. ಈ ಚುನಾವಣೆ ಎದುರಿಸಲು ಯೋಗೇಶ್ವರ್ ಒಬ್ಬರೇ ಸಮರ್ಥವಾದ ಅಭ್ಯರ್ಥಿ. ಜಿಲ್ಲೆಯಲ್ಲಿ ನಮ್ಮಂಥ ಹಲವಾರು ಯುವಕರು ಯೋಗೇಶ್ವರ್ ನಾಯಕತ್ವದಲ್ಲಿ ಪಕ್ಷ ಕಟ್ಟುವ ಕೆಲಸ‌ ಮಾಡುತ್ತಿದ್ದೇವೆ. ನಮ್ಮ ಪಕ್ಷದಲ್ಲಿ ನಮಗೆ ಯೋಗೇಶ್ವರ್ ರವರೇ ದಾರಿದೀಪ. ಜಿಲ್ಲೆಯಲ್ಲಿ ಪಕ್ಷವನ್ನು ಕಟ್ಟುವ ನಮ್ಮಗಳ ಉತ್ಸಾಹಕ್ಕೆ ನಮ್ಮ ಪಕ್ಷದ ವರಿಷ್ಠರು ತಣ್ಣೀರು ಎರಚಬೇಡಿ. ಯೋಗೇಶ್ವರ್ ರವರಿಗೆ ಈ ರೀತಿಯ ನೋವು ಕೊಡಬೇಕಾದರೆ ಪಕ್ಷದಲ್ಲಿ ನಾವೆಲ್ಲ ಇರಬೇಕಾ ಎಂಬ ಪ್ರಶ್ನೆ ಕಾಡುತ್ತಿದೆ. ಯೋಗೇಶ್ವರ್ ಅಭ್ಯರ್ಥಿಯಾಗದಿದ್ದರೆ ಜಿಲ್ಲೆಯಲ್ಲಿ ಬಿಜೆಪಿ ಉಳಿಯೋಲ್ಲ ಎಂದು ತಮ್ಮ ಪಕ್ಷದ ವರಿಷ್ಠರಿಗೆ ಎಚ್ಚರಿಸಿದರು.

ಜಿಲ್ಲಾ ಉಪಾಧ್ಯಕ್ಷ ಕೆ.ಟಿ.ಜಯರಾಂ ಮಾತನಾಡಿ, ಇಡೀ ಜಿಲ್ಲೆಯಲ್ಲಿ ನಮ್ಮ ಪಕ್ಷ ಸದೃಡವಾಗಿರುವ ತಾಲೂಕು ಚನ್ನಪಟ್ಟಣ. ಈ ಚುನಾವಣೆಯಲ್ಲಿ ಯೋಗೇಶ್ವರ್ ಅಭ್ಯರ್ಥಿ ಯಾದರೆ ಮಾತ್ರ ಗೆಲುವು. ಇಲ್ಲವಾದರೆ ಕಷ್ಟವಾಗಲಿದೆ‌. ಜಿಲ್ಲೆಯಲ್ಲಿ ಹಾಗೂ ಮೈಸೂರು ಭಾಗದಲ್ಲಿ ಪಕ್ಷ ಗಟ್ಟಿಯಾಗಿ ಬೆಳೆಯಬೇಕು ಎಂದರೆ ಯೋಗೇಶ್ವರ್ ರವರಿವೆ ರಾಜಕೀಯ ಅಧಿಕಾರ ಬಹಳ ಮುಖ್ಯ. ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಜೆಡಿಎಸ್ ವರಿಷ್ಠರು ಸಹ ಯೋಗೇಶ್ವರ್ ಅಭ್ಯರ್ಥಿಯಾಗಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ನಗರಾಧ್ಯಕ್ಷ ಆರ್.ಶಿವಕುಮಾರ್, ಮುಖಂಡರಾದ ಹುಲುವಾಡಿ ದೇವರಾಜು, ಎಸ್.ಲಿಂಗೇಶ್ ಕುಮಾರ್, ಬಿ.ಪಿ.ಮುದ್ದುಕೃಷ್ಣೇಗೌಡ, .ಎಸ್.ಅರ್.ನಾಗರಾಜು, ಕೋಟೆಚಂದ್ರು, ರಾಮನಗರ‌ ಮುರುಳೀಧರ್, ಅರಳಾಳುಸಂದ್ರ ಶಿವಪ್ಪ, ತಗಚಗೆರೆ ಕುಳ್ಳಪ್ಪ, ಸದಾನಂದ, ಬ್ಯಾಡರಹಳ್ಳಿ ರಾಮಚಂದ್ರು, ಸಿ.ಪಿ.ನಾಗೇಶ್, ಮುದಗೆರೆ ಜಯಕುಮಾರ್, ಚಕ್ಕೆರೆ ಜಯಪ್ರಕಾಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಯೋಗೇಶ್ವರ್ ಟಿಕೆಟ್ ಗೆ ಆಗ್ರಹ! ಮೈತ್ರಿ ಪಕ್ಷದ ವಿರುದ್ಧ ಅಸಮಾಧಾನ!!

ಮುಂಬರುವ ಕ್ಷೇತ್ರದ ಉಪಚುನಾವಣೆ ಸಂಬಂಧ ತಾಲೂಕಿನ ಮತ್ತೀಕೆರೆ ಬಳಿಯ ಖಾಸಗಿ ಹೋಟೆಲ್ ನಲ್ಲಿ ಗುರುವಾರ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಮಿತಿ ಹಾಗೂ ಜಿಲ್ಲಾ ಮುಖಂಡರ ಸಭೆ ನಡೆಯಿತು. ಸಭೆಯಲ್ಲಿ ಪಕ್ಷದ ನಾಯಕ ಸಿ.ಪಿ.ಯೋಗೇಶ್ವರ್ ರವರಿಗೆ ಮೈತ್ರಿ ಪಕ್ಷದಿಂದ ಟಿಕೆಟ್ ನೀಡುವಂತೆ ಒಕ್ಕೊರಲಿನಿಂದ ಆಗ್ರಹಿಸಲಾಯಿತು.

ಪತ್ರಿಕಾಗೋಷ್ಠಿಗೂ ಮುನ್ನ ನಡೆದ ಈ ಸಭೆಯಲ್ಲಿ ಜಿಲ್ಲೆಯ ನಾಲ್ಕು ತಾಲೂಕುಗಳ ವಿವಿಧ ಮೋರ್ಚಾ ಅಧ್ಯಕ್ಷರು ಮತ್ತು ಜಿಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು. ಸಭೆಯಲ್ಲಿ ಯೋಗೇಶ್ವರ್ ರವರಿಗೆ ಮೈತ್ರಿ ಟಿಕೆಟ್ ನೀಡಲೇಬೇಕು ಎಂಬ ಆಗ್ರಹ ಕೇಳಿಬಂದಿತು. ಮೈಸೂರು ಭಾಗದಲ್ಲಿ ನಮ್ಮ ಪಕ್ಷ ಸದೃಢವಾಗಿ ಬೆಳೆಯಲು ಯೋಗೇಶ್ವರ್ ಕಾರಣ‌. ಈ ಉಪಚುನಾವಣೆಯಲ್ಲಿ ಅವರು ಅಭ್ಯರ್ಥಿಯಾದರೆ ಪಕ್ಷದ ಅಸ್ತಿತ್ವ ಉಳಿಯಲಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಮನೆಯಲ್ಲಿ ಉಳಿಯುವ ಎಚ್ಚರಿಕೆ!

ಸಭೆಯಲ್ಲಿ ಮಾತನಾಡಿದ ಕೆಲ‌ಮುಖಂಡರು ಈ ಚುನಾವಣೆಯಲ್ಲಿ ಸ್ಪರ್ಧಿಸಲು ಯೋಗೇಶ್ವರ್ ಗೆ ಅವಕಾಶ ನೀಡದಿದ್ದರೆ ನಾವುಗಳು ಮನೆಯಲ್ಲಿ ಉಳಿಯುತ್ತೇವೆ. ಯೋಗೇಶ್ವರ್ ರವರು ಮಾತ್ರ ಈ ಕ್ಷೇತ್ರದಲ್ಲಿ ಗೆಲುವ ಅಭ್ಯರ್ಥಿ. ಅವರನ್ನು ಅಭ್ಯರ್ಥಿ ಮಾಡಿಸಲು ನಮ್ಮ ಪಕ್ಷದ ವರಿಷ್ಠರು ಸಹ ಶ್ರಮಿಸಬೇಕು. ಇಲ್ಲವಾದರೆ, ಪಕ್ಷದ ಅಸ್ತಿತ್ವಕ್ಕೆ ದೊಡ್ಡಮಟ್ಟದ ಧಕ್ಕೆ ಉಂಟಾಗುತ್ತದೆ ಎಂಬ ವಾದ ಮಂಡಿಸಿದರು. ಇದರೊಂದಿಗೆ, ಜೆಡಿಎಸ್ ವರಿಷ್ಠರು ಕ್ಷೇತ್ರದಲ್ಲಿ ನಮ್ಮನ್ನು ವಿಶ್ವಾಸಕ್ಕೆ ಪಡೆಯುತ್ತಿಲ್ಲ ಎಂಬ ಅಸಮಾಧಾನವೂ ಕೇಳಿಬಂದಿತ್ತು. ಅಂತಿಮವಾಗಿ ವರಿಷ್ಠರನ್ನು ಭೇಟಿಮಾಡಿ ಜಿಲ್ಲಾಘಟಕದ ಅಂತಿಮ ನಿರ್ಧಾರವನ್ನು ತಿಳಿಸಲು ಸಭೆ ತೀರ್ಮಾನಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net