ಕಮಲಾಧಿಪತಿಗಳ ಆಯ್ಕೆಗೆ ಬಿಜೆಪಿ ಚಾಲನೆ

Published on

ಶೀಘ್ರದಲ್ಲೇ ಸ್ಥಳೀಯ ಸಂಸ್ಥೆಗಳ ಚುನಾವಣೆ

ವಿಜಯವಾಣಿ ಸುದ್ದಿಜಾಲ ಗೌರಿಬಿದನೂರು

ಜಿಲ್ಲಾ ಪಂಚಾಯಿತಿ, ತಾಲೂಕ ಪಂಚಾಯಿತಿ ಸೇರಿ ಇತರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಸಮೀಪಿಸುತ್ತಿರುವ ಬೆನ್ನಲ್ಲೆ ಬಿಜೆಪಿಯ ತಾಲೂಕು ಘಟಕ, ನಗರ ಮತ್ತು ಗ್ರಾಮಾಂತರ ಘಟಕಗಳ ಅಧ್ಯಕ್ಷರ ಆಯ್ಕೆಗೆ ಚಾಲನೆ ನೀಡಲಾಗಿದೆ.

ಕಳೆದ ಎರಡು ಅವಧಿಗಳಿಂದ ಪಕ್ಷದ ನಗರ ಘಟಕದ ಅಧ್ಯಕ್ಷರಾಗಿ ಮಾರ್ಕೆಟ್ ಮೋಹನ್ ಹಾಗೂ ಗ್ರಾಮಾಂತರ ಅಧ್ಯಕ್ಷರಾಗಿ ರಮೇಶ್ ರಾವ್ ಕಾರ್ಯನಿರ್ವಹಿಸುತ್ತಿದ್ದು, ಈಗ ನೂತನ ಜಿಲ್ಲಾಧ್ಯಕ್ಷರ ಆಯ್ಕೆಯಾದ ಬಳಿಕ ತಾಲೂಕು ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಮೂಲಕ ಸಂಘಟನೆಗೆ ಶಕ್ತಿ ತುಂಬಲು ಪಕ್ಷ ಮುಂದಾಗಿದೆ.

ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸುವ ಜವಾಬ್ದಾರಿ ಜಿಲ್ಲಾಧ್ಯಕ್ಷರ ಜತೆಗೆ ಸಂಸದ ಡಾ.ಕೆ.ಸುಧಾಕರ್ ಅವರ ಮೇಲಿದೆ.

ಲೋಕಸಭೆ ಚುನಾವಣೆಯಲ್ಲಿ ತಾಲೂಕಿನಲ್ಲಿ ಪಕ್ಷದ ಅಭ್ಯರ್ಥಿ ಸುಧಾಕರ್‌ಗೆ ಅಧಿಕ ಮತಗಳು ಬಂದಿದ್ದವಾದರೂ ಅದಕ್ಕೂ ಮೊದಲು ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಸಾಧನೆ ಕಳಪೆಯಾಗಿತ್ತು. ತಾಲೂಕಿನಲ್ಲಿ ಪಕ್ಷದ ಚಿಹ್ನೆಗೆ ತನ್ನದೇ ಆದ ಮತದಾರರಿದ್ದರೂ ಲೋಕಸಭೆ ಚುನಾವಣೆಯಲ್ಲಿ ಕೈ ಹಿಡಿದು, ವಿಧಾನಸಭೆ ಹಾಗೂ ಇತರ ಚುನಾವಣೆಗಳಲ್ಲಿ ಕಡೆಗಣಿಸುತ್ತಿದ್ದಾರೆ. ಇದಕ್ಕೆ ಸ್ಥಳೀಯ ನಾಯಕತ್ವ ಹಾಗೂ ಇನ್ನಿತರ ಕಾರಣಗಳ ಬಗ್ಗೆ ಅವಲೋಕನ ನಡೆಯುತ್ತಿದೆ. ಆದ್ದರಿಂದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬಲ್ಲ ಸ್ಥಳೀಯ ಸಮರ್ಥ ನಾಯಕರನ್ನು ಆಯ್ಕೆ ಮಾಡಬೇಕು ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.

ಕಾರ್ಯಕರ್ತರಲ್ಲಿ ಕುತೂಹಲ

ತಾಲೂಕು ಅಧ್ಯಕ್ಷರ ಸ್ಥಾನಕ್ಕೆ ಯುವನಾಯಕ ಎನ್.ಎಂ.ಭರತ್ ರೆಡ್ಡಿ ಹಾಗೂ ನಗರ ಘಟಕದ ಅಧ್ಯಕ್ಷ ಸ್ಥಾನಕ್ಕೆ ಜಯಣ್ಣ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ. ನೂತನವಾಗಿ ಆಯ್ಕೆಯಾಗುವ ಪದಾಧಿಕಾರಿಗಳು ಸ್ಥಳೀಯವಾಗಿ ಪ್ರಬಲ ವಿರೋಧ ಪಕ್ಷವಾಗಿ ಕೆಲಸ ಮಾಡಿ ಪಕ್ಷವನ್ನು ಸಂಘಟಿಸಬೇಕಿದೆ. ಸಂಘಟನೆ ಮೂಲಕ ಪಕ್ಷಕ್ಕೆ ಶಕ್ತಿ ತುಂಬಿದಲ್ಲಿ ಮುಂಬರುವ ಚುನಾವಣೆಗಳಲ್ಲಿ ಪಕ್ಷ ಜಯದ ಹಾದಿಯಲ್ಲಿ ಸಾಗಬಹುದು ಎಂಬುದು ನಾಯಕರ ಅಭಿಪ್ರಾಯವಾಗಿದೆ. ಆದ್ದರಿಂದ ತಾಲೂಕಿನ ನಾಯಕತ್ವದ ಜವಾಬ್ದಾರಿಯನ್ನು ಪಕ್ಷ ಯಾರಿಗೆ ವಹಿಸುತ್ತದೆ ಎಂಬ ಕುತೂಹಲ ಕಾರ್ಯಕರ್ತರಲ್ಲಿ ಮೂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net