ರಾಜ್ಯ ಕಾಂಗ್ರೆಸ್​ನಲ್ಲಿ ಬಿಕ್ಕಟ್ಟು, ಬಿಜೆಪಿಯಲ್ಲಿದೆ ಒಗ್ಗಟ್ಟು: ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿಕೆ

Arun Sing
Published on

| ಮಾರುತಿ ಪಾವಗಡ ದಿಗ್ವಿಜಯ ನ್ಯೂಸ್ ಹುಬ್ಬಳ್ಳಿ

ರಾಜ್ಯದ ಬಿಜೆಪಿಯಲ್ಲಿ ಒಗ್ಗಟ್ಟಿದ್ದು, ಕಾಂಗ್ರೆಸ್​ನಲ್ಲಿ ಬಿಕ್ಕಟ್ಟು ಹೆಚ್ಚಾಗುತ್ತಿದೆ, ಆದ್ದರಿಂದ ಬಿಜೆಪಿ ಮುಂದಿನ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲುವುದರಲ್ಲಿ ಅನುಮಾನವಿಲ್ಲ ಎಂದು ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬುಧವಾರ ಹುಬ್ಬಳ್ಳಿಯಲ್ಲಿ ದಿಗ್ವಿಜಯ 24-7 ನ್ಯೂಸ್ ಜತೆ ಮಾತನಾಡಿದ ಅವರು, ಕಾಂಗ್ರೆಸ್ 60 ವರ್ಷದಲ್ಲಿ ಏನೇನೂ ಸಾಧನೆ ಮಾಡಲಿಲ್ಲ. ಕಾಂಗ್ರೆಸ್​ನ ಕೇಂದ್ರ ನಾಯಕತ್ವ ವಿಫಲವಾಗಿದ್ದರೆ, ರಾಜ್ಯ ನಾಯಕತ್ವ ಒಡೆದ ಮನೆಯಾಗಿದೆ. ಇದು ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲಕರ ವಾತಾವರಣವನ್ನು ಸೃಷ್ಠಿಸುತ್ತದೆ ಎಂದರು.

ರಾಜ್ಯ ಕಾಂಗ್ರೆಸ್​ನ ಒಬ್ಬರು ನಾಯಕರು ಮುಖ್ಯಮಂತ್ರಿ ಗಾದಿಗಾಗಿ ಈಗಲೇ ಕಿತ್ತಾಟ ಪ್ರಾರಂಭಿಸಿದ್ದಾರೆ. ಡಿಕೆಶಿ ಬೆಂಬಲಿಗರು ಡಿಕೆಶಿ ಸಿಎಂ ಆಗಬೇಕೆಂದು ಹೇಳುತ್ತಿದ್ದಾರೆ. ಇದನ್ನು ಸಹಿಸದ ಸಿದ್ದರಾಮಯ್ಯ ಬಣ ಅವರೇ ಮುಂದಿನ ಸಿಎಂ ಎಂದು ಕೂಗುತ್ತಿದೆ ಎಂದು ಲೇವಡಿ ಮಾಡಿದರು.

ಎರಡು ದಿನಗಳ ಕಾಲ ಪಕ್ಷದ ಸಂಘಟನೆ ಬಗ್ಗೆ ಚರ್ಚೆ ಮಾಡಿದ್ದೇವೆ. ರಾಜ್ಯದ ಜನರ ಮುಂದೆ ಹೇಳಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನೇಕ ಯೋಜನೆಗಳಿವೆ. ಅವುಗಳ ಮೂಲಕವೇ ನಾವು ಜನರನ್ನು ಸೆಳೆಯುತ್ತೇವೆ. ಇತ್ತಿಚೆಗೆ ಎಲ್ಲ ಚುನಾವಣೆಗಳಲ್ಲಿ ಹೆಚ್ಚು ಸ್ಥಾನ ಗೆದ್ದಿದ್ದೇವೆ. ಪಕ್ಷದ ರಾಜಕೀಯ ಗ್ರಾಪ್ ಏರಿಕೆ ಆಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150 ಗುರಿ ಮುಟ್ಟುವುದಕ್ಕೆ ಇದರಿಂದ ನಮ್ಮ ಉತ್ಸಾಹವನ್ನು ಇಮ್ಮಡಿಗೊಳಿಸಿದೆ ಎಂದು ಹೇಳಿದರು. ನಮ್ಮಲ್ಲಿ ಸಣ್ಣಪುಟ್ಟ ಸಮಸ್ಯೆ ಆಗಿದ್ದರಿಂದ ಪರಿಷತ್ ಚುನಾವಣೆಯಲ್ಲಿ ಎರಡು ಕಡೆ ಸಮಸ್ಯೆ ಆಯಿತು. ಇಲ್ಲದಿದ್ದರೆ 14 ಸ್ಥಾನ ಗೆಲ್ಲುತ್ತಿದ್ದೇವು. ಬೆಳಗಾವಿ, ಮೈಸೂರಿನಲ್ಲಿ ಸೋಲು ಯಾವ ಕಾರಣಕ್ಕೆ ಆಗಿದೆ ಎಂಬುದು ಗೊತ್ತಿದೆ. ಆ ಬಗ್ಗೆ ಚರ್ಚೆ ಮಾಡುತ್ತೇವೆ. ಪಕ್ಷ ವಿರೋಧಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಅರುಣ್ ಸಿಂಗ್ ತಿಳಿಸಿದರು. ವಿಧಾನಪರಿಷತ್​ನಲ್ಲಿ ನಮ್ಮ ಶಕ್ತಿ ಈಗ ಜಾಸ್ತಿ ಆಗಿದೆ. ಮೆಜಾರಿಟಿ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಬೊಮ್ಮಾಯಿ ಬದಲಾವಣೆ ಇಲ್ಲ: ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಹುದ್ದೆಯಿಂದ ಬಸವರಾಜ ಬೊಮ್ಮಾಯಿ ಅವರನ್ನು ಬದಲಾವಣೆ ಮಾಡುವ ಉದ್ದೇಶ ಇಲ್ಲ. ಆ ಬಗ್ಗೆ ಸುದ್ದಿಗಳನ್ನು ಹಬ್ಬಿಸುವ ನಮ್ಮ ಪಕ್ಷದ ಕೆಲವರ ವಿರುದ್ಧ ಎಚ್ಚರಿಕೆ ನೀಡಿದ್ದೇವೆ. ಇದೇ ಪರಿಸ್ಥಿತಿ ಮುಂದುವರಿದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಅರುಣ್ ಸಿಂಗ್ ತಿಳಿಸಿದರು. ಬಸವರಾಜ ಬೊಮ್ಮಯಿ ನಾಯಕತ್ವದಲ್ಲಿಯೇ ಚುನಾವಣೆ ಎದುರಿಸುತ್ತೇವೆ. 2023ರವರೆಗೂ ಅವರೇ ಸಿಎಂ. ಸಿಎಂ ಬದಲಾವಣೆ ಎಂದು ಕಾಂಗ್ರೆಸ್ ಸುಳ್ಳು ಸುದ್ದಿಯನ್ನು ಹೆಚ್ಚಾಗಿ ಹಬ್ಬಿಸುತ್ತಿದೆ. ಅದಕ್ಕೆ ನಾವು ಸೊಪು್ಪ ಹಾಕುವುದಿಲ್ಲ ಎಂದರು.

ಬಿಎಸ್​ವೈ ಪರಮೋಚ್ಛ ನಾಯಕ: ಬಿಜೆಪಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸವೋಚ್ಛ ನಾಯಕರಾಗಿದ್ದಾರೆ. ಅವರನ್ನು ನಿರ್ಲಕ್ಷ್ಯ ಮಾಡುವ ಸಾಧ್ಯತೆ ನಮ್ಮ ಕನಸಿನಲ್ಲಿಯೂ ಇಲ್ಲ ಎಂದು ಅರುಣ್ ಸಿಂಗ್ ಹೇಳಿದರು. ಯಡಿಯೂರಪ್ಪ ಮಾರ್ಗದರ್ಶನ ಹಾಗೂ ಬೊಮ್ಮಯಿ ನೇತೃತ್ವದಲ್ಲಿ ಎಲ್ಲ ಮುಖಂಡರು ಒಂದಾಗಿ ಚುನಾವಣೆ ಎದುರಿಸುತ್ತೇವೆ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಜಯೇಂದ್ರ ನಮ್ಮ ಯುವ ನಾಯಕ: ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ನಮ್ಮ ಪಕ್ಷದ ಯುವ ನಾಯಕರಾಗಿದ್ದಾರೆ. ಅವರನ್ನ ಪಕ್ಷ ಬಳಸಿಕೊಳ್ಳುತ್ತೆ. ಅವರು ಒಬ್ಬ ಉತ್ತಮ ಸಂಘಟಕ ಎಂಬುದನ್ನು ಪಕ್ಷ ಗಮನಿಸಿದೆ ಎಂದು ಅರುಣ್ ಸಿಂಗ್ ಅಭಿಪ್ರಾಯಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net