ಕೈ ಗೆಲುವಿಗೆ ಬಿಜೆಪಿ ಸಾಥ್; ಸಾಕ್ಷೀಕರಿಸುತ್ತಿವೆ ಫಲಿತಾಂಶದ ಅಂಕಿ-ಅಂಶಗಳು..

State 8 2nd
ಮಂಡ್ಯ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗೂಳಿಗೌಡ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಮತ ಎಣಿಕೆ ಕೇಂದ್ರದಲ್ಲಿ ‘ಗೂಳಿ’ ಕರೆತಂದು ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.
Published on

| ಕೆ.ಎನ್.ರಾಘವೇಂದ್ರ ಮಂಡ್ಯ

ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್​ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗೂಳಿಗೌಡ ಗೆಲುವಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಪರೋಕ್ಷವಾಗಿ ಸಾಥ್ ನೀಡಿದ್ದಾರೆನ್ನುವ ಆರೋಪ ಗಟ್ಟಿಯಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಬಿಜೆಪಿ ಅಭ್ಯರ್ಥಿ ಬೂಕಹಳ್ಳಿ ಮಂಜು ಪಡೆದ ಮತಗಳ ಸಂಖ್ಯೆ 50 ಮಾತ್ರ.

ವಿಧಾನಪರಿಷತ್ ಚುನಾವಣೆ ಪ್ರಾರಂಭದಿಂದಲೂ ಬಿಜೆಪಿ ಉತ್ತಮ ಲಯದಲ್ಲಿತ್ತು. ಆದರೆ ಒಳಜಗಳ ಮತ್ತು ಹೊಂದಾಣಿಕೆಯಿಂದ ಕೊನೆ ಹಂತದಲ್ಲಿ ಹಿಡಿತ ಸಡಿಲಿಸಿದ್ದು ಕಾಂಗ್ರೆಸ್ ಗೆಲುವಿಗೆ ವರದಾನವಾಯಿತು. ಇದರೊಂದಿಗೆ ಕೆ.ಆರ್.ಪೇಟೆ ಉಪಚುನಾವಣೆ ಗೆಲುವಿನಿಂದ ಮಂಡ್ಯದ ಮೊದಲ ಬಿಜೆಪಿ ಶಾಸಕ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದ ಕೆ.ಸಿ.ನಾರಾಯಣಗೌಡಗೆ ಈ ಸೋಲಿನಿಂದ ಮುಖಭಂಗವಾದಂತಾಗಿದೆ. ಅಭ್ಯರ್ಥಿ ಬೂಕಹಳ್ಳಿ ಮಂಜು ಪರವಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿ ಕೇಂದ್ರ ಹಾಗೂ ರಾಜ್ಯ ಸಚಿವರೇ ಮತಯಾಚನೆ ಮಾಡಿದ್ದರು. ಆದರೆ ಅಂತಿಮವಾಗಿ ಕೇವಲ 50 ಮತಗಳನ್ನು ಗಳಿಸಿರುವುದು ಆಡಳಿತ ಪಕ್ಷದ ವರ್ಚಸ್ಸಿಗೆ ದೊಡ್ಡಮಟ್ಟದಲ್ಲಿಯೇ ಧಕ್ಕೆಯುಂಟಾಗಿದೆ.

ಪ್ರಮುಖ ಅಂಶವೆಂದರೆ 2015ರಲ್ಲಿ ನಡೆದ ವಿಧಾನ ಪರಿಷತ್ ಚುನಾವಣಾ ಸಂದರ್ಭ ಕಾಂಗ್ರೆಸ್ ಅಧಿಕಾರದಲ್ಲಿದ್ದ ಅವಧಿಯಲ್ಲೇ ಬಿಜೆಪಿಯಿಂದ ಸ್ಪರ್ಧಿಸಿದ್ದ ಕೆ.ನಾಗಣ್ಣಗೌಡ 130ಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದರು ಎನ್ನುವುದು ಗಮನಾರ್ಹ. ಸಚಿವ ಕೆ.ಸಿ.ನಾರಾಯಣಗೌಡ ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿ ವ್ಯಾಪಕವಾಗಿ ಹರಡುತ್ತಿವೆ. ಆದರೆ ಇತ್ತೀಚೆಗೆ ಆರೋಪವನ್ನು ತಳ್ಳಿ ಹಾಕಿದ ಕೆಸಿಎನ್, ವಿಪಕ್ಷಗಳು ನನ್ನ ವಿರುದ್ಧ ಇಲ್ಲಸಲ್ಲದ ಕುತಂತ್ರ ಮಾಡುತ್ತಿದ್ದಾರೆಂದು ವಾಗ್ದಾಳಿ ನಡೆಸಿದರು. ಈ ನಡುವೆ ಪಕ್ಷದ ಮತಗಳನ್ನೇ ಉಳಿಸಿಕೊಳ್ಳದೇ ಇರುವುದನ್ನು ಗಮನಿಸಿದರೆ ಸಚಿವರ ಚಿತ್ತ ಕಾಂಗ್ರೆಸ್​ನತ್ತ ವಾಲಿರುವುದು ವದಂತಿಗೆ ಪುಷ್ಟಿ ನೀಡಿದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net