

ತಿ.ನರಸೀಪುರ: ಕ್ಷೇತ್ರದಲ್ಲಿ ಪ್ರಭಾವಿ ಸಚಿವರಿದ್ದರೂ ಚಾಮರಾಜನಗರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗೆ ಮತದಾರರು ಹೆಚ್ಚಿನ ಮತ ನೀಡಿದ್ದಾರೆ ಹಾಗೂ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಶಿಕ್ಷಕರು ಪಕ್ಷದ ಅಭ್ಯರ್ಥಿಗೆ ಜಯ ತಂದಿದ್ದಾರೆ ಎಂದು ಮಾಜಿ ಶಾಸಕ ಎಂ.ಅಶ್ವಿನ್‌ಕುಮಾರ್ ಸಂತಸ ವ್ಯಕ್ತಪಡಿಸಿದರು.
ಮೈತ್ರಿಕೂಟದ ಅಭ್ಯರ್ಥಿ ಬಾಲರಾಜುಗೆ ಹೆಚ್ಚಿನ ಮತ ನೀಡಿದ ಕ್ಷೇತ್ರದ ಮತದಾರರಿಗೆ ಹಾಗೂ ಶಿಕ್ಷಕರ ಕ್ಷೇತ್ರದಿಂದ ಜಯ ಸಾಧಿಸಲು ಕಾರಣಕರ್ತರಾದ ಶಿಕ್ಷಕ ವೃಂದಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಲೋಕಸಭಾ ಚುನಾವಣೆ ಹಾಗೂ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಆಯ್ಕೆ ಸಂಬಂಧ ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಒಗ್ಗಟ್ಟು ಪ್ರದರ್ಶಿಸಿ ತಾಲೂಕಿನಲ್ಲಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಾಲರಾಜು ಅವರಿಗೆ ಹೆಚ್ಚಿನ ಮತ ಕೊಡಿಸುವ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಕ್ಷೇತ್ರದಲ್ಲಿ ಪ್ರಭಾವಿ ಸಚಿವರಿದ್ದರೂ ಮತದಾರರು ಲೆಕ್ಕಿಸದೆ ಮೈತ್ರಿ ಅಭ್ಯರ್ಥಿಗೆ ಹೆಚ್ಚಿನ ಮತ ನೀಡಿದ್ದಾರೆ. ಶಿಕ್ಷಕರ ಕ್ಷೇತ್ರದಿಂದ ವಿವೇಕಾನಂದ ಅವರ ಗೆಲುವಿಗೆ ಕಾರಣರಾದ ತಾಲೂಕಿನ ಎಲ್ಲ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಮುಂದಿನ ದಿನಗಳಲ್ಲೂ ಜೆಡಿಎಸ್ ಮತ್ತು ಬಿಜೆಪಿ ಒಗ್ಗಟ್ಟಿನ ಪ್ರದರ್ಶನ ಮುಂದುವರಿಯಲಿದೆ. ಉಭಯ ಪಕ್ಷಗಳಿಂದ ಯಾವುದೇ ಸಣ್ಣ ಪುಟ್ಟ ವ್ಯತ್ಯಾಸಗಳಾದರೂ ಅದನ್ನು ಸರಿಪಡಿಸಿಕೊಂಡು ಪಕ್ಷ ನೀಡುವ ಜವಾಬ್ದಾರಿಯನ್ನು ಚಾಚೂತಪ್ಪದೆ ಮಾಡುವ ಕೆಲಸ ಎರಡೂ ಪಕ್ಷಗಳ ಕಡೆಯಿಂದ ಆಗಲಿದೆ ಎಂದರು.
ನೂತನ ಸಂಸದರು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಲಿ: ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಿದ ಸುನೀಲ್ ಬೋಸ್ ಅವರನ್ನು ಕ್ಷೇತ್ರದ ಮತದಾರರು 1.86 ಲಕ್ಷ ಮತಗಳಿಂದ ಗೆಲ್ಲಿಸಿದ್ದಾರೆ. ಹಾಗಾಗಿ ಅವರು ಜವಾಬ್ದಾರಿಯಿಂದ ಕೆಲಸ ಮಾಡಿಕೊಂಡು ಹೋಗಲಿ, ಯಾವುದೇ ದ್ವೇಷದ ರಾಜಕಾರಣ ಮಾಡದೆ ಎಲ್ಲರನ್ನೂ ಸಮಭಾವದಿಂದ ತೆಗೆದುಕೊಂಡು ಹೋಗಲಿದ್ದಾರೆ ಎಂಬ ಭಾವನೆಯನ್ನು ಹೊಂದಿದ್ದೇನೆ. ನಮ್ಮ ಅಭ್ಯರ್ಥಿಯೂ ಸೋಲಿನಿಂದ ಕುಗ್ಗುವುದು ಬೇಡ, ಅವರೊಂದಿಗೂ ಮತದಾರರು ಕ್ಷೇತ್ರದಲ್ಲಿದ್ದಾರೆ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಹಾಗಾಗಿ ಅವರಿಗೆ ಮುಂದೆ ಉತ್ತಮ ಅವಕಾಶ ದೊರಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಮುಖಂಡ ಡಾ.ರೇವಣ್ಣ ಮಾತನಾಡಿ, ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಬಾಲರಾಜು ಅವರಿಗೆ 8 ವಿಧಾನ ಸಭಾ ಕ್ಷೇತ್ರದಲ್ಲೂ ಕಾರ್ಯಕರ್ತರು ಸಮನ್ವಯಯಿಂದ ಕೆಲಸ ಮಾಡಿ ಹೆಚ್ಚು ಮತ ಕೊಡಿಸಲು ಶ್ರಮವಹಿಸಿದ್ದಾರೆ. ಶಿಕ್ಷಕರ ಕ್ಷೇತ್ರದಿಂದ ಉಭಯ ಪಕ್ಷದ ನಾಯಕರು ಒಗ್ಗಟ್ಟಾಗಿ ಕೆಲಸ ಮಾಡಿದ ಪರಿಣಾಮ ವಿವೇಕಾನಂದ ಅವರು ಅಭೂತಪೂರ್ವ ಗೆಲುವು ಸಾಧಿಸಿದರು. ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ಮತದಾರರು ನೀಡಿದ ತೀರ್ಪನ್ನು ಸ್ವೀಕರಿಸಬೇಕಾಗುತ್ತೆ. ಗೆಲುವು ಸಾಧಿಸಿರುವ ಸುನೀಲ್ ಬೋಸ್ ಅವರು ಕ್ಷೇತ್ರದ ಅಭಿವೃದ್ಧಿಗೆ ಶ್ರಮ ವಹಿಸಲಿ, ನಂಜುಂಡಪ್ಪ ವರದಿಯಂತೆ ಚಾಮರಾಜನಗರ ಜಿಲ್ಲೆ ಹಿಂದುಳಿದಿದ್ದು ಅಲ್ಲಿ ಅನೇಕ ಸಮಸ್ಯೆಗಳಿವೆ. ಉದ್ಯೋಗ ಸೃಷ್ಟಿ, ನೀರಾವರಿ ಯೋಜನೆ, ಎಕೋ ಟೂರಿಸಂ ಬಗ್ಗೆ ಹೆಚ್ಚು ಒತ್ತು ನೀಡಬೇಕು.8 ವಿಧಾನಸಭಾ ಕ್ಷೇತ್ರದಲ್ಲಿ ವಿಚಾರವಂತರ ಅಭಿಪ್ರಾಯ ಕ್ರೋಡೀಕರಿಸಿ ಅಭಿವೃದ್ಧಿಗೆ ಒತ್ತು ನೀಡಿದರೆ ಮತ ನೀಡಿದ ಮತದಾರರ ಋಣ ತೀರಿಸಿದಂತಾಗುತ್ತದೆ. ಆನಿಟ್ಟಿನಲ್ಲಿ ಸುನೀಲ್ ಬೋಸ್ ಮುಂದಾಗಬೇಕು ಎಂದು ಸಲಹೆ ನೀಡಿದರು.
ಜೆಡಿಎಸ್ ಕ್ಷೇತ್ರಾಧ್ಯಕ್ಷ ಸಿ.ಬಿ.ಹುಂಡಿ ಚಿನ್ನಸ್ವಾಮಿ, ಬಿಜೆಪಿ ಕ್ಷೇತ್ರಾಧ್ಯಕ್ಷ ಶಿವಕುಮಾರ್(ಸತ್ಯಪ್ಪ), ಜಿಪಂ ಮಾಜಿ ಸದಸ್ಯ ಜೈಪಾಲ್ ಭರಣಿ, ರಾಜ್ಯ ಕಾರ್ಯಕಾರಿಣಿ ಮಾಜಿ ಸದಸ್ಯ ಕರೋಹಟ್ಟಿ ಮಹದೇವಯ್ಯ, ಜೆಡಿಎಸ್ ರಾಜ್ಯ ಕಾರ್ಯದರ್ಶಿ ವೈ.ಎಸ್.ರಾಮಸ್ವಾಮಿ, ಪುರಸಭೆ ಮಾಜಿ ಸದಸ್ಯ ಎನ್.ಲೋಕೇಶ್, ಡಾ.ಮಲ್ಲಿಕಾರ್ಜುನಸ್ವಾಮಿ, ಮುಖಂಡರಾದ ಚೌಹಳ್ಳಿ ಸಿದ್ದರಾಜು, ಕು.ಶಿ.ಭೃಂಗೇಶ್, ಕನ್ನಳ್ಳಿ ಮಹದೇವ್, ಪ್ರಕಾಶ್, ತಾಪಂ ಮಾಜಿ ಅಧ್ಯಕ್ಷ ಕುಮಾರಸ್ವಾಮಿ ಮತ್ತಿತರಿದ್ದರು.