

ಚಿಂತಾಮಣಿ: ಮುಡಾ ಹಾಗೂ ವಾಲ್ಮೆಕಿ ಹಗರಣ ಸೇರಿ ಹಲವು ಪ್ರಕರಣ ಬಯಲಿಗೆಳೆಯುವುದರೊಂದಿಗೆ ರಾಜ್ಯದ ಭ್ರಷ್ಟ ಸರ್ಕಾರ ವಿರುದ್ಧ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೋರಾಟ ನಡೆಸುವ ಮೂಲಕ ಬಿ.ಎಸ್.ಯಡಿಯೂರಪ್ಪ ಮಾದರಿಯಲ್ಲಿ ಬಿಜೆಪಿಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ ಎಂದು ಬೆಂಗಳೂರು ಉಪ ನಗರ ವರ್ತುಲ ರಸ್ತೆ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿ.ಮುನಿರಾಜು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಪಕ್ಷದ ಬಲ ಹೆಚ್ಚಾಗುತ್ತಿದೆ. ಸಮರ್ಥ ಪ್ರತಿ ಪಕ್ಷವಾಗಿ ವಿಜಯೇಂದ್ರ ನೇತೃತ್ವದಲ್ಲಿ ಹೋರಾಟಗಳು ನಡೆಯುತ್ತಿವೆ. ಜಿಲ್ಲೆಯಲ್ಲೂ ಬಿಜೆಪಿ ಬಲವರ್ಧನೆ ಕಾಣುತ್ತಿದೆ ಎಂದು ನಗರದಲ್ಲಿ ಭಾನುವಾರ ಆಯೋಜಿಸಿದ್ದ ತಾಲೂಕುಮಟ್ಟದ ವಿಶೇಷ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಇದೇ ವೇಳೆ ಸ್ವಪಕ್ಷೀಯ ಬಸನಗೌಡ ಪಾಟೀಲ್ ಯತ್ನಾಳ ಧೋರಣೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಬಿಜೆಪಿ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವ ಬಸನಗೌಡ ಪಾಟೀಲ ಯತ್ನಾಳ್, ಮೊದಲು ಸ್ವಪಕ್ಷೀಯರನ್ನು ಟೀಕಿಸುವುದನ್ನು ನಿಲ್ಲಿಸಲಿ, ಸರ್ಕಾರದ ವೈಫಲ್ಯಗಳ ವಿರುದ್ಧ ಎಲ್ಲರೂ ಸೇರಿ ಹೋರಾಟ ನಡೆಸಬೇಕು ಎಂಬುದನ್ನು ಅರಿಯಲಿ ಎಂದು ಸಲಹೆ ನೀಡಿದರು.
ರಾಜ್ಯಾಧ್ಯಕ್ಷರು ಒಂದು ದಿನವೂ ಸುಮ್ಮನೆ ಕುಳಿತುಕೊಳ್ಳದೆ ಹೋರಾಟ ನಡೆಸುತ್ತಿದ್ದಾರೆ. ಇದರ ಬಗ್ಗೆ ಕೇಂದ್ರ ನಾಯಕರಲ್ಲಿ ಉತ್ತಮ ಅಭಿಪ್ರಾಯ ಇದೆ. ಇಡೀ ದೇಶದಲ್ಲಿ ಸದಸ್ಯತ್ವ ಅಭಿಯಾನದಲ್ಲಿ ಕರ್ನಾಟಕ ಒಂದನೇ ಸ್ಥಾನದಲ್ಲಿದೆ. ಹೀಗಿದ್ದರೂ ಗೊಂದಲ ಮೂಡಿಸುವ ಕೆಲಸವಾಗಬಾರದು. ಇಲ್ಲಸಲ್ಲದ ಹೇಳಿಕೆ ಕೊಡಬಾರದು, ಪಕ್ಷದ ಕಾರ್ಯಕರ್ತರ ದಿಕ್ಕು ತಪ್ಪಿಸಬಾರದು ಎಂದು ಮನವಿ ವಾಡಿಕೊಂಡರು.
ಮುಖ್ಯಮಂತ್ರಿ ಹಾಗೂ ಡಿಕೆಶಿ ಪ್ಯಾಕೇಜ್ ಕೊಟ್ಟಿದ್ದಾರೆ. ಇದಕ್ಕೆ ಸ್ವಪಕ್ಷದ ಬಗ್ಗೆಯೇ ಟೀಕಿಸುವಂತಾಗಿದೆ ಎಂಬ ಅನುಮಾನ ಮೂಡಿದ್ದು, ಯತ್ನಾಳ್ ಬಗ್ಗೆ ಎಲ್ಲವೂ ಗೊತ್ತಿದೆ. ಆದರೆ, ಅದನ್ನು ಬಹಿರಂಗಪಡಿಸಿದರೆ ಸರಿ ಇರುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಪೇಟ ಧರಿಸಲು ನಿರಾಕರಿಸುವ ಸಿಎಂ ಸಿದ್ದರಾಮಯ್ಯ, ಅನ್ಯ ಧರ್ಮದ ಟೋಪಿ ಹಾಕಿಸಿಕೊಳ್ಳಲು ಮಾತ್ರ ಮುಂದಾಗುತ್ತಾರೆ. ಇದು ಎಂತಹ ಧೋರಣೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಸೀಕಲ್ ರಾಮಚಂದ್ರಗೌಡ, ಜಿ.ಎನ್.ವೇಣುಗೋಪಾಲ್ ಮತ್ತಿತರರು ಇದ್ದರು.
ಮಾಜಿ ಸಂಸದರಿಗೆ ಭವಿಷ್ಯದಲ್ಲಿ ಒಳ್ಳೆಯ ಅವಕಾಶ
ಮಾಜಿ ಸಂಸದ ಪ್ರತಾಪ್ ಸಿಂಹಗೆ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯ ಇದೆ. ಆದರೆ ಅವರು, ಬಿಜೆಪಿ ವಿರುದ್ಧ ಹೇಳಿಕೆ ಕೊಡುವುದು ಸರಿಯಲ್ಲ. ಯಾರು ಸಹ ಕಾಂಗ್ರೆಸ್ ಏಜೆಂಟರಂತೆ ವರ್ತಿಸಬಾರದು. ಒಂದು ವೇಳೆ ಧೋರಣೆ ಬಿಡದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಸಿ.ಮುನಿರಾಜು ಎಚ್ಚರಿಕೆ ನೀಡಿದರು. ದೇಶಕ್ಕೆ ಮೋದಿ ಮಾದರಿಯಲ್ಲಿ ರಾಜ್ಯಕ್ಕೆ ಯಡಿಯೂರಪ್ಪ ನಾಯಕರು. ಅವರ ಮಗ ಎಂಬ ಭಾವನೆಯಲ್ಲಿ ವಿಜಯೇಂದ್ರ ಅವರಿಗೆ ಅಧ್ಯಕ್ಷ ಸ್ಥಾನ ಕೊಟ್ಟಿಲ್ಲ. ಅವರ ಸೇವೆಯನ್ನು ಪರಿಗಣಿಸಿ ಜವಾಬ್ದಾರಿ ನೀಡಲಾಗಿದೆ. ಇದನ್ನರಿತು ಈಗಲಾದರೂ ಯತ್ನಾಳ್ ಹಾಗೂ ಪ್ರತಾಪ್ ಸಿಂಹ, ಬೆಂಬಲಿಗರು ಪಕ್ಷದ ವಿರುದ್ಧ ವಾತನಾಡುವುದನ್ನು ನಿಲ್ಲಿಸಬೇಕು. ನಿಮಗಿಂತ ಜಾಸ್ತಿ ವಾತನಾಡಲು ಬರುತ್ತದೆ. ಅಗತ್ಯವಿದ್ದಲ್ಲಿ ಬೀದಿಗೆ ಇಳಿಯುತ್ತೇವೆ ಎಂದರು.