

ಶಿಡ್ಲಘಟ್ಟ : ಬಿಜೆಪಿ ಸಂವಿಧಾನ ವಿರೋಧಿ, ಮೀಸಲಾತಿ ಹಾಗೂ ದಲಿತರ ವಿರೋಧಿ ಎಂದು ಕಾಂಗ್ರೆಸ್‌ನವರು ಅಪಪ್ರಚಾರ ಮಾಡುತ್ತಿದ್ದಾರೆ. ಇದು ಶುದ್ಧ ಸುಳ್ಳು ಎಂಬುದನ್ನು ಎಲ್ಲರಿಗೂ ಮನವರಿಕೆ ಮಾಡಿಕೊಡುವ ಕೆಲಸವನ್ನು ನಾವು ಮಾಡಬೇಕು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು. ಬಿಜೆಪಿಯ ಸದಸ್ಯತ್ವ ನೋಂದಣಿ ಅಭಿಯಾನದ ಉಸ್ತುವಾರಿ ವಹಿಸಿರುವ ಅವರು, ನಗರದ ಬಿಜೆಪಿ ಕಚೇರಿಗೆ ಸೋಮವಾರ ಭೇಟಿ ನೀಡಿ ಪದಾಧಿಕಾರಿಗಳ ಜತೆ ಅಭಿಯಾನದ ಪರಾಮರ್ಶೆ ಮಾಡಿದರು.
ಕಾಂಗ್ರೆಸ್ ಮಾಡುತ್ತಿರುವ ಎಲ್ಲವೂ ರಾಜಕೀಯವಾಗಿ ಸುಳ್ಳು ಆರೋಪಗಳು ಎಂಬುದು ಎಲ್ಲರಿಗೂ ತಿಳಿದಿದೆ. ಹಾಗಾಗಿ ಬಿಜೆಪಿಯನ್ನು ದಲಿತರು, ಅಲ್ಪಸಂಖ್ಯಾತರು ಸೇರಿ ಎಲ್ಲ ವರ್ಗದವರೂ ಬೆಂಬಲಿಸುತ್ತಿದ್ದಾರೆ. ಇದರಿಂದಾಗಿಯೇ ದೇಶದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ ಎಂದರು.
ಇದೀಗ ರಾಜ್ಯದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ನಡೆಯುತ್ತಿದ್ದು ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಬಿಜೆಪಿಯನ್ನು ಬೆಂಬಲಿಸುವ ಮತ್ತು ಪಕ್ಷದ ತತ್ವ ಸಿದ್ಧಾಂತಗಳಲ್ಲಿ ನಂಬಿಕೆ ಇಟ್ಟವರು ಮಾತ್ರವೇ ಪಕ್ಷದ ಸದಸ್ಯತ್ವವನ್ನು ಮಾಡಿಕೊಳ್ಳುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ನೋಂದಾಯಿಸಬೇಕು. ಶಿಡ್ಲಘಟ್ಟದಲ್ಲಿಯೂ ಸುಮಾರು 23 ಸಾವಿರ ಸದಸ್ಯತ್ವವನ್ನು ಮಾಡಿಸಿದ್ದು ಉಳಿದ 17 ದಿನಗಳಲ್ಲಿ ಇನ್ನೂ 27 ಸಾವಿರ ಸದಸ್ಯತ್ವವನ್ನು ಮಾಡಿಸಬೇಕೆಂದು ಸೂಚಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಮಾಜಿ ಶಾಸಕ ಎಂ.ರಾಜಣ್ಣ, ಮುಖಂಡರಾದ ಸೀಕಲ್ ರಾಮಚಂದ್ರಗೌಡ,ಆನಂದಗೌಡ, ಕಂಬದಹಳ್ಳಿ ಸುರೇಂದ್ರಗೌಡ, ಡಾ.ಸತ್ಯನಾರಾಯಣರಾವ್, ಕನಕಪ್ರಸಾದ್, ನಾರಾಯಣಸ್ವಾಮಿ, ಆಂಜನೇಯಗೌಡ, ನರ್ಮದಾರೆಡ್ಡಿ, ನರೇಶ್, ರಜನೀಕಾಂತ್ ಇದ್ದರು.