

ವಿಜಯವಾಣಿ ವಿಶೇಷ ರಾಣೆಬೆನ್ನೂರ
ತಾಲೂಕಿನಲ್ಲಿಯೇ ದೊಡ್ಡ ಗ್ರಾಮ ಪಂಚಾಯಿತಿ ಎಂದು ಹೆಸರಾಗಿರುವ ಮೇಡ್ಲೇರಿಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರೇ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ. ಆದರೆ, ಅಧ್ಯಕ್ಷ ಸ್ಥಾನ ಕಾಂಗ್ರೆಸ್ಗೆ ಒಲಿದಿರುವುದು ಬಯಸದೇ ಬಂದ ಭಾಗ್ಯ.
ಗ್ರಾಪಂ ಒಟ್ಟು 25 ಸದಸ್ಯ ಬಲ ಹೊಂದಿದ್ದು, ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ 16, ಕಾಂಗ್ರೆಸ್ ಬೆಂಬಲಿತ 6 ಹಾಗೂ ಪಕ್ಷೇತರ ಮೂವರು ಸದಸ್ಯರು ಆಯ್ಕೆಯಾಗಿದ್ದಾರೆ. ಚುನಾವಣೆ ಫಲಿತಾಂಶ ಪ್ರಕಟಗೊಂಡ ದಿನ ಬಿಜೆಪಿ ಸದಸ್ಯರು ‘ಈ ಬಾರಿ ಗ್ರಾಪಂ ಆಡಳಿತ ನಮ್ಮದೇ’ ಎಂದು ಕುಣಿದು ಕುಪ್ಪಳಿಸಿದ್ದರು.
ಆದರೆ, ಜ. 15ರಂದು ನಡೆದ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಆಯ್ಕೆ ಪ್ರಕ್ರಿಯೆಯಲ್ಲಿ ಮೇಡ್ಲೇರಿ ಗ್ರಾಪಂ ಅಧ್ಯಕ್ಷ ಸ್ಥಾನ ಎಸ್ಟಿಗೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಮೇಡ್ಲೇರಿ ಗ್ರಾಪಂನ 25 ಸದಸ್ಯರಲ್ಲಿ 6ನೇ ವಾರ್ಡ್ನ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಶಾಂತವ್ವ ತಳವಾರ ಅವರು ಎಸ್ಟಿಗೆ ಸೇರಿದ ಏಕೈಕ ಮಹಿಳೆಯಾಗಿದ್ದು, ಅಧ್ಯಕ್ಷ ಸ್ಥಾನ ಅನಾಯಾಸವಾಗಿ ಒಲಿದು ಬಂದಿದೆ.
ಬಯಸದೆ ಬಂದ ಭಾಗ್ಯ: ಶಾಂತವ್ವ ಕೃಷಿ ಕಾರ್ಯ ಮಾಡಿಕೊಂಡಿದ್ದಾರೆ. ಪತಿ, ಮಕ್ಕಳು ಒತ್ತಾಯ ಮಾಡಿ ಚುನಾವಣಾ ಕಣಕ್ಕಿಳಿಸಿದ್ದರು. ಪ್ರತಿಸ್ಪರ್ಧಿ ರೇವತಿ ಮೀನಕಟ್ಟಿ ವಿರುದ್ಧ 18 ಮತಗಳ ಅಂತರದಿಂದ ಶಾಂತವ್ವ ಗೆಲುವು ಸಾಧಿಸಿದ್ದಾರೆ. ಜ. 30ರಂದು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಶಾಂತವ್ವ ಅವಿರೋಧವಾಗಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಲಿದ್ದಾರೆ.
ಮುಂದುವರಿದ ಇತಿಹಾಸ: 1992ರಲ್ಲಿ ಮಂಡಲ ಪಂಚಾಯಿತಿಯಿಂದ ಮೇಲರ್ªಜೆಗೆ ಏರಿದ ಮೇಡ್ಲೇರಿಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಅಧಿಕಾರದ ಚುಕ್ಕಾಣಿ ಹಿಡಿದ ಉದಾಹರಣೆಯೇ ಇಲ್ಲ. ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಸರ್ಕಾರವಿದ್ದಾಗ ಒಂದು ಬಾರಿ ಮಾತ್ರ ಮೇಡ್ಲೇರಿ ಗ್ರಾಪಂನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಬೆಂಬಲಿತ ಸದಸ್ಯರು ಅಧಿಕಾರ ಹಿಡಿದಿದ್ದರು. ಅದನ್ನು ಹೊರತು ಪಡಿಸಿದರೆ, ಈವರೆಗೂ ಕಾಂಗ್ರೆಸ್ ಬೆಂಬಲಿತ ಸದಸ್ಯರೇ ಅಧಿಕಾರ ನಡೆಸುತ್ತ ಬಂದಿದ್ದಾರೆ.
ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಕೇವಲ 2 ಸ್ಥಾನದಲ್ಲಿ ಗೆಲುವು ಸಾಧಿಸಿದ್ದರು. ಈ ಬಾರಿ 16 ಸ್ಥಾನದಲ್ಲಿ ಗೆಲುವು ಸಾಧಿಸಿದ್ದಾರೆ. ಆದರೂ ಮೀಸಲಾತಿ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನ ಬಿಜೆಪಿ ತಪ್ಪಿ ಹೋಗಿದೆ.
ಮರೆಯಲಾಗದ ದುಃಖ: ಜ. 15ರಂದು ಮೀಸಲಾತಿ ಪ್ರಕಟಗೊಳ್ಳುತ್ತಿದ್ದಂತೆ ಶಾಂತವ್ವಳ ಕುಟುಂಬದವರು ಸಂಭ್ರಮಿಸಿದರು. ಅದರೆ ದುರಾದೃಷ್ಟವೆಂದರೆ ಅದೇ ದಿನ ರಾತ್ರಿ ಶಾಂತವ್ವಳ ಪತಿ ನಾಗಪ್ಪ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಹೀಗಾಗಿ ಶಾಂತವ್ವ ಅವರಿಗೆ ಒಂದೆಡೆ ಅಧ್ಯಕ್ಷ ಸ್ಥಾನ ಸಂತಸ ತಂದುಕೊಟ್ಟಿದ್ದರೆ, ಮತ್ತೊಂದೆಡೆ ಪತಿಯ ಸಾವು ಮರೆಯಲಾಗದ ನೋವು ಕೊಟ್ಟಿದೆ.