

ಬೆಂಗಳೂರು: 2023ರ ವಿಧಾನಸಭಾ ಚುನಾವಣೆಯ ಪ್ರೀ ಕ್ವಾರ್ಟರ್ ಫೈನಲ್ ಎಂದೇ ಬಿಂಬಿತವಾಗಿದ್ದ ರಾಜ್ಯದ ಪ್ರಮುಖ ಮೂರು ಮಹಾನಗರ ಪಾಲಿಕೆಗಳ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಜನಾಭಿಪ್ರಾಯದ ಸ್ಯಾಂಪಲ್ ರಾಜಕೀಯ ಪಕ್ಷಗಳಿಗೆ ಸಿಕ್ಕಿದೆ.
ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಕಲಬುರಗಿ ಮಹಾನಗರ ಪಾಲಿಕೆ ಜತೆಗೆ ಒಂದೆರಡು ನಗರಸಭೆ, ಪುರಸಭೆ ಚುನಾವಣೆ ಫಲಿತಾಂಶ, ಗೆದ್ದೇ ಗೆಲ್ಲುವ ಅತಿಯಾದ ಆತ್ಮವಿಶ್ವಾಸದಲ್ಲಿದ್ದ ಕಾಂಗ್ರೆಸ್ಗೆ ಬಿಸಿ ಮುಟ್ಟಿಸಿದರೆ ಬಿಜೆಪಿಗೂ ಬೀಗುವಷ್ಟು ಖುಷಿಯನ್ನೇನು ತಂದಿಲ್ಲ. ಆದರೂ ಬೆಳಗಾವಿಯಲ್ಲಿ ಎಂಇಎಸ್ ಪ್ರಾಬಲ್ಯ ಮಟ್ಟಹಾಕಿ ಮೊಟ್ಟಮೊದಲ ಬಾರಿಗೆ ಬಿಜೆಪಿ ಸ್ವತಂತ್ರವಾಗಿ ಪಾಲಿಕೆ ಚುಕ್ಕಾಣಿ ಹಿಡಿದಿರುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತೃಪ್ತಿ ತಂದಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಬಿಜೆಪಿ ಅತೀ ಹೆಚ್ಚು ಸ್ಥಾನ ಗಳಿಸುವ ಮೂಲಕ ಅಧಿಕಾರ ಉಳಿಸಿಕೊಳ್ಳುವುದು ನಿಶ್ಚಿತವೆನಿಸಿದ್ದರೂ, ಕಾಂಗ್ರೆಸ್ ಸಹ ಗಣನೀಯ ಸಾಧನೆ ಮಾಡಿ ಶಕ್ತಿ ಪ್ರದರ್ಶನ ಮೆರೆದಿದೆ. ಕಲಬುರಗಿಯಲ್ಲಿ ಕಾಂಗ್ರೆಸ್ ಉಳಿದೆಲ್ಲರಿಗಿಂತ ಹೆಚ್ಚಿನ ಸ್ಥಾನ ಗಳಿಸಿದ್ದರೂ ಅಧಿಕಾರಕ್ಕೇರುವುದು ಕಷ್ಟ. ಬಿಜೆಪಿ ಇಲ್ಲಿ ಕಳೆದ ಚುನಾವಣೆಗೆ ಹೋಲಿಸಿದರೆ, ಹೆಚ್ಚಿನ ಸಾಧನೆ ಮಾಡಿದ್ದು, ಕಿಂಗ್ವೆುೕಕರ್ ಜೆಡಿಎಸ್ ಕೈಹಿಡಿದಲ್ಲಿ ಅಧಿಕಾರಕ್ಕೆ ಬರುವ ಅವಕಾಶ ಹೊಂದಿದೆ. ಹಾಗೂ ಹೀಗೂ 2 ವಿಧಾನಸಭಾ ಕ್ಷೇತ್ರಗಳಿಗೆ ಶೀಘ್ರವೇ ಉಪ ಚುನಾವಣೆ ನಡೆಯುವುದಿದೆ, ಆ ಬೆನ್ನಿಗೆ 1 ಕೋಟಿ ಮತದಾರರು ಆಯ್ಕೆ ಮಾಡುವ 200ಕ್ಕಿಂತ ಹೆಚ್ಚು ವಾರ್ಡ್ ಹೊಂದಿರುವ ಬಿಬಿಎಂಪಿ ಚುನಾವಣೆ ಇದೆ.
ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಸಾರ್ವತ್ರಿಕ ಚುನಾವಣೆ ಇನ್ನಾರು ತಿಂಗಳೊಳಗೆ ನಡೆಯಲಿದೆ. ಈ ಸರಣಿ ಚುನಾವಣೆಗೆ ಮುನ್ನ ನಡೆದ ಪಾಲಿಕೆಗಳ ಚುನಾವಣೆ ರಾಜಕೀಯ ಪಕ್ಷಗಳ ಪಾಲಿಗೆ ಜನರ ನಾಡಿಮಿಡಿತ ಅರಿತುಕೊಳ್ಳುವ ಅಖಾಡವಾಗಿತ್ತು. ಈ ಚುನಾವಣೆ ಹಾಗೂ ಪಕ್ಷಗಳ ನಾಯಕರ ವಿಚಾರಕ್ಕೆ ಬಂದರೆ ಒಂದಷ್ಟು ಅಚ್ಚರಿಗಳಿವೆ. ಚುನಾವಣೆ ಸಂದರ್ಭದಲ್ಲಿಯೇ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜಿಂದಾಲ್ ಪ್ರಕೃತಿ ಚಿಕಿತ್ಸೆ ಕೇಂದ್ರದಲ್ಲಿದ್ದರು. ಇದು ಕಾಂಗ್ರೆಸ್ ಪ್ರದರ್ಶನದ ಮೇಲೆ ಪರಿಣಾಮ ಬೀರಿದೆ ಎಂಬುದು ಕೆಲ ನಾಯಕರ ವಾದವಾಗಿದೆ. ಆದರೆ, ಫಲಿತಾಂಶದ ಸ್ಪಷ್ಟ ಅರಿವಿದ್ದೇ ಸಿದ್ದರಾಮಯ್ಯ ದೂರ ಉಳಿದರು ಎಂಬ ಅಭಿಪ್ರಾಯವೂ ಇದೆ. ಕಾಂಗ್ರೆಸ್ ಪ್ರಮುಖವಾಗಿ ಅಭ್ಯರ್ಥಿಗಳ ಆಯ್ಕೆಯಲ್ಲಿಯೇ ಎಡವಿತು. ಬಂಡಾಯದ ಬಿಸಿ ಮೂರು ಪಾಲಿಕೆಯಲ್ಲಿಯೂ ತಟ್ಟಿತು. ಬಂಡಾಯ ಅಭ್ಯರ್ಥಿಗಳನ್ನು ಕಣದಿಂದ ಹಿಂದೆ ಸರಿಸಲು ಮುಖಂಡರಿಗೆ ಸಾದ್ಯವಾಗಲಿಲ್ಲ.
ಕೈಪಡೆಗೆ ನಿರಾಸೆ: ಕರೊನಾ ನಿರ್ವಹಣೆ ಲೋಪ, ಮಂದಗತಿಯ ಆಡಳಿತ, ನಾಯಕತ್ವ ಬದಲಾವಣೆ, ನೆರೆ ಪರಿಹಾರ ವಿತರಣೆಯಲ್ಲಿ ಲೋಪ, ಎಲ್ಲಕ್ಕಿಂತ ಮುಖ್ಯವಾಗಿ ಇಂಧನ ದರ ಹಾಗೂ ಅಗತ್ಯ ವಸ್ತು ಬೆಲೆ ಏರಿಕೆ ಎಲ್ಲವೂ ಪಾಲಿಕೆ ಚುನಾವಣೆ ಮೇಲೆ ಪರಿಣಾಮ ಬೀರಲಿದ್ದು, ಇದರಿಂದ ತಮಗೆ ಅನುಕೂಲಕರ ವಾತಾವರಣವಾಗಬಹುದೆಂದು ಕಾಂಗ್ರೆಸ್ ಭಾವಿಸಿತ್ತು. ಆದರೆ, ನಿರೀಕ್ಷೆ ಹುಸಿಯಾಗಿದೆ. ಈ ನಡುವೆಯೂ ಒಂದೆರಡು ಕಡೆ ತನ್ನ ಸ್ಥಾನ ಹೆಚ್ಚಿಸಿಕೊಂಡು ಸಮಾಧಾನಪಟ್ಟಿದೆ.
ಬಿಜೆಪಿಗೆ ಎಚ್ಚರಿಕೆ ಗಂಟೆ: ಪೂರ್ಣ ಖುಷಿ ಕೊಡದ ಈ ಫಲಿತಾಂಶ ಬಿಜೆಪಿಗೂ ಎಚ್ಚರಿಕೆಯ ಗಂಟೆ. ಪಕ್ಷ ಹಾಗೂ ಸರ್ಕಾರದ ವಿರುದ್ಧ ನಕಾರಾತ್ಮಕ ಅಭಿಪ್ರಾಯ ಮೂಡುತ್ತಿರುವ ಸಮಯದಲ್ಲಿ ತಿದ್ದಿಕೊಳ್ಳಲು ಸಿಕ್ಕ ಒಂದೊಳ್ಳೆ ಅವಕಾಶ ಎಂಬ ಭಾವನೆ ಪಕ್ಷದ ನಾಯಕರಲ್ಲೇ ಒಡಮೂಡಿದೆ. ಹಳೇ ಮೈಸೂರು ಭಾಗ ಹೊರತುಪಡಿಸಿ ಅಷ್ಟೋ ಇಷ್ಟೋ ಬೇರೂರುತ್ತಿದ್ದ ಜೆಡಿಎಸ್ಗೆ ಈ ಚುನಾವಣೆ ಹೊಡೆತ ಕೊಟ್ಟಿದೆ. ಕಳೆದ ಬಾರಿ ಗಳಿಸಿದ್ದ್ದ ಸ್ಥಾನಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.
ಬಿಜೆಪಿ ಆತ್ಮವಿಶ್ವಾಸ: ಬಿಜೆಪಿ ನಾಯಕತ್ವವನ್ನು ವಿಶ್ಲೇಷಿಸುವುದಾದರೆ, ಮುಖ್ಯಮಂತ್ರಿಯಾದ ಬಳಿಕ ಬಸವರಾಜ ಬೊಮ್ಮಾಯಿ ಅವರಿಗೆ ಇದು ಮೊದಲ ಗೆಲುವಿನ ಸಿಂಚನ. ಆದರೆ ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಇದ್ದರೂ ಸಹ ಸ್ಪಷ್ಟ ಬಹುಮತ ಪಡೆಯದೇ ಇರುವುದು ಆತಂಕಕ್ಕೂ ಕಾರಣವಾಗಿದೆ. ಪಾಲಿಕೆ ಚುನಾವಣೆಗೂ ಮಂತ್ರಿಗಳನ್ನು ನಿಯೋಜಿಸಲಾಗಿತ್ತು. ಆದರೂ ಕಲಬುರಗಿಯಲ್ಲಿಯೂ ಈಗ ಬೇರೆ ಪಕ್ಷದ ಮನೆ ಬಾಗಿಲಿಗೆ ಹೋಗಬೇಕಾಗಿದೆ.
ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುನಾವಣೆಗಳಲ್ಲಿ ಬಿಜೆಪಿ ಮತದಾರರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದೆ. ಪಕ್ಷದ ಚಿಹ್ನೆ ಮೇಲೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಅಭಿವೃದ್ಧಿ ಮಂತ್ರಕ್ಕೆ ಜನಾದೇಶ ಲಭಿಸಿದೆ.
| ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ
ಬಿಜೆಪಿಗೆ ಕುಂದಾ ಸವಿ: ಬೆಳಗಾವಿ ನಗರ ಪಾಲಿಕೆ ಇತಿಹಾಸದಲ್ಲಿ ಇದೇ ಮೊದಲ ಬಾರಿ ಬಿಜೆಪಿ ಪ್ರಚಂಡ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಕಾಂಗ್ರೆಸ್ ಹಾಗೂ ಎಂಇಎಎಸ್ಗೆ ತೀವ್ರ ಮುಖಭಂಗವಾಗಿದೆ.
ಧಾರವಾಡ ಬಿಜೆಪಿ ತೆಕ್ಕೆಗೆ?: ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ದೊರೆತಿಲ್ಲವಾದರೂ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ, ಮೂವರು ಬಂಡಾಯ ಅಭ್ಯರ್ಥಿಗಳ ಸಹಾಯದೊಂದಿಗೆ ಮ್ಯಾಜಿಕ್ ಸಂಖ್ಯೆ ತಲುಪುವ ವಿಶ್ವಾಸದಲ್ಲಿದೆ.
ಕಲಬುರಗಿಯಲ್ಲಿ ಮೈತ್ರಿ!: ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಯಾರಿಗೂ ಸ್ಪಷ್ಟ ಬಹುಮತ ಸಿಗದೇ ಇದ್ದರೂ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಕಿಂಗ್ವೆುೕಕರ್ ಸ್ಥಾನದಲ್ಲಿರುವ ಜೆಡಿಎಸ್ನತ್ತ ಚಿತ್ತ ಹರಿಸಿದ್ದಾರೆ. ಬಿಜೆಪಿ ಜತೆ ಜೆಡಿಎಸ್ ಮೈತ್ರಿ ಏರ್ಪಡಬಹುದೆಂದು ಹೇಳಲಾಗುತ್ತಿದ್ದರೂ ಸ್ಪಷ್ಟವಾಗಿಲ್ಲ.
ಬಿಜೆಪಿಗೆ + ಆಗಿದ್ದೇನು?: ಪಕ್ಷದ ಕೆಳ ಹಂತದಲ್ಲಿ ವ್ಯವಸ್ಥಿತ ಕಾರ್ಯಯೋಜನೆ; ಕೇಂದ್ರ- ರಾಜ್ಯ ಸರ್ಕಾರದ ಸಾಧನೆಗಳು; ಸಚಿವರು, ಶಾಸಕರು, ಮುಖಂಡರ ಸಕ್ರಿಯ ಪಾಲ್ಗೊಳ್ಳುವಿಕೆ; ಎದುರಾಳಿ ಪಕ್ಷದ ನಾಯಕತ್ವ ಗೊಂದಲ.
ಕೈಕೊಟ್ಟಿದ್ದೇನು?: ಬಹುತೇಕ ಕಡೆ ಅಭ್ಯರ್ಥಿ ಆಯ್ಕೆ ಯಲ್ಲಿ ಎಡವಿದ್ದು; ಚುನಾವಣೆ ಕಾರ್ಯತಂತ್ರದಲ್ಲಿ ವಿಫಲತೆ; ಕಾರ್ಯಾಧ್ಯಕ್ಷರು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸದಿರುವುದು; ನಾಯಕರು- ಕಾರ್ಯಕರ್ತರ ನಡುವೆ ಬೆಸುಗೆ ಆಗದಿರುವುದು; ಬಿಜೆಪಿಯೇತರ ಮತಗಳನ್ನು ಒಗ್ಗೂಡಿಸಲಷ್ಟೇ ಪ್ರಯತ್ನಿಸಿದ್ದು.