ಬಿಜೆಪಿ ಬಣ ರಾಜಕೀಯ ಸರಿಹೋಗುತ್ತದೆ

ಬಿಜೆಪಿ ಬಣ ರಾಜಕೀಯ ಸರಿಹೋಗುತ್ತದೆ
Published on

ಹಾಸನ: ಬಿಜೆಪಿಯಲ್ಲಿ ಬಣ ರಾಜಕೀಯ ಸರಿ ಹೋಗುತ್ತೆ ಎನ್ನುವ ಭರವಸೆ ಇದೆ. ಐದೂ ಬೆರಳು ಒಂದೇ ರೀತಿ ಇರಲ್ಲ ಎಂದು ಬಿಜೆಪಿ ಶಾಸಕ ಹಾಗೂ ವಿಧಾನಸಭೆ ಪ್ರತಿಪಕ್ಷ ಉಪನಾಯಕ ಅರವಿಂದ್ ಬೆಲ್ಲದ್ ಹೇಳಿದರು.

ಶನಿವಾರ ಹಾಸನಾಂಬೆ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, ಸಮೀಕ್ಷೆಯಲ್ಲಿ ಲಿಂಗಾಯತ-ವೀರಶೈವ ಎಂದು ಬರೆಸಿ ಎಂಬ ಮಠಾಧೀಶರ ಹೇಳಿಕೆಗೆ ಪ್ರತಿಕ್ರಿಯಿಸಿ, ದೇಶದಲ್ಲಿ ಇರುವವರೆಲ್ಲ ಹಿಂದುಗಳೆ. ಬಸವಣ್ಣ ಎಲ್ಲಿಯೂ ಸನಾತನ ಧರ್ಮ ಪಾಲನೆ ಮಾಡಬೇಡಿ ಎಂದು ಹೇಳಿಲ್ಲ. ಬಸವಣ್ಣ ಕೂಡಲಸಂಗಮ ದೇವನ ಹೆಸರಲ್ಲಿ, ಅಕ್ಕಮಹಾದೇವಿ ಚೆನ್ನಮಲ್ಲಿಕಾರ್ಜುನನ ಹೆಸರಲ್ಲಿ ವಚನ ಬರೆದರು. ಎಡಪಂಥೀಯರು ಬಸವಣ್ಣ ಅವರನ್ನು ನಕ್ಸಲ್ ಹೀರೋ ಮಾಡಲು ಹೊರಟಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು.

ರಾಜ್ಯದ ಹಲವೆಡೆ ಭಾರೀ ಮಳೆಯಿಂದ ಹಾನಿಯಾಗಿದೆ. ನಮ್ಮ ಪಕ್ಷದ ವತಿಯಿಂದ ರಾಜ್ಯಾದ್ಯಂತ ಪ್ರವಾಸ ಮಾಡಿದ್ದೇವೆ. ಭತ್ತ, ಹೆಸರು, ತೊಗರಿ, ಅಡಕೆ ಬೆಳೆಗಳು ಹಾಳಾಗಿವೆ. ಸಾಮಾನ್ಯಜನರಿಗೆ ತೊಂದರೆ ಆಗಿದೆ, ರೈತರ ಬೆಳೆ, ರಸ್ತೆಗಳು ಹಾಳಾಗಿವೆ. ಆದರೂ ರಾಜ್ಯ ಸರ್ಕಾರ ಸ್ಪಂದಿಸಿಲ್ಲ ಎಂದು ದೂರಿದರು.

ಮುಖ್ಯಮಂತ್ರಿ ರಾಜ್ಯಾದ್ಯಂತ ಪ್ರವಾಸ ಮಾಡಬೇಕಿತ್ತು, ಅವರು ಪ್ರವಾಸ ಮಾಡ್ತಿಲ್ಲ, ಜಿಲ್ಲಾ ಮಂತ್ರಿಗಳು ಕೂಡ ಪ್ರವಾಸ ಮಾಡ್ತಿಲ್ಲ. ಸರ್ಕಾರ ರೈತರು, ಜನರನ್ನು ಸಂಪೂರ್ಣ ತಾತ್ಸಾರ ಮೂಡಿದೆ. ಸರ್ಕಾರದ ದುಡ್ಡು ತಿಂದು ತೇಗಿ ಭ್ರಷ್ಟಾಚಾರ ಮಾಡಿದ್ದಾರೆ, ಅಧಿಕಾರ, ಕುರ್ಚಿಗಾಗಿ ಹೊಡೆದಾಡುತ್ತಿದ್ದಾರೆ. ಎರಡೂವರೆ ವರ್ಷ ಆಯಿತು. ಹತ್ತು ಕೋಟಿ ರೂ. ಬಿಟ್ಟು ಬೇರೆ ಅನುದಾನ ಕೊಟ್ಟಿಲ್ಲ ಎಂದು ಕಿಡಿಕಾರಿದರು.

ಈಗೇನೋ 25 ಕೋಟಿ ರೂ. ಕೊಡುತ್ತಿದ್ದಾರೆ. ಅದು ಟೆಂಡರ್ ಆಗಿ ಕೆಲಸ ಮಾಡುವುದರೊಳಗೆ ಎಲೆಕ್ಷನ್ ಬರುತ್ತೆ. ಸರ್ಕಾರ ಇದೆ ಎನ್ನುವ ಕುರುಹು ನಮಗೆ ಕಾಣುತ್ತಿಲ್ಲ ಎಂದರು.

ಹಾಸನಾಂಬೆ ಜಾತ್ರೆಯಲ್ಲಿ ಈ ಬಾರಿ ಜಿಲ್ಲಾಡಳಿತ ಉತ್ತಮ ವ್ಯವಸ್ಥೆ ಮಾಡಿದೆ. ಸಚಿವ ಕೃಷ್ಣ ಬೈರೇಗೌಡ ನೇತೃತ್ವದಲ್ಲಿ ಒಳ್ಳೆಯ ವ್ಯವಸ್ಥೆ ಮಾಡಿದ್ದಾರೆ. ಎಲ್ಲರೂ ಸಮಾಧಾನದಿಂದ ದರ್ಶನ ಮಾಡುತ್ತಿದ್ದಾರೆ. ಇದಕ್ಕಾಗಿ ಕೃಷ್ಣ ಬೈರೇಗೌಡ ಹಾಗೂ ಅಧಿಕಾರಿಗಳ ತಂಡಕ್ಕೆ ಧನ್ಯವಾದ ಹೇಳುವೆ. ಕಳೆದ ಬಾರಿ ವಿವಿಐಪಿ ಪಾಸ್‌ಗಳಿಂದ ದೊಡ್ಡ ಪ್ರಮಾಣದಲ್ಲಿ ತೊಂದರೆ ಆಗಿತ್ತು. ವಿವಿಐಪಿಗಳಿಂದ ಸಾಮಾನ್ಯ ಜನಕ್ಕೆ ತೊಂದರೆ ಆಗದಂತೆ ಈ ರೀತಿಯ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net