ಹತ್ತು ವರ್ಷಗಳ ಬಳಿಕ ಕೋಟೆಯೊಳಗೆ ಅರಳಿತು ಕಮಲ: ಚಿತ್ರದುರ್ಗ ವಿಧಾನ ಪರಿಷತ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲುವು

K S Naveen
Published on

ದಾವಣಗೆರೆ: ದಾವಣಗೆರೆಯನ್ನು ಒಳಗೊಂಡ ಚಿತ್ರದುರ್ಗ ವಿಧಾನ ಪರಿಷತ್ ಕ್ಷೇತ್ರದಲ್ಲಿ ಹತ್ತು ವರ್ಷಗಳ ಬಳಿಕ ಕಮಲ ಅರಳಿದೆ. ಕಾಂಗ್ರೆಸ್​​ನ ಸೋಮಶೇಖರ್ ವಿರುದ್ಧ ಬಿಜೆಪಿಯ ಕೆ.ಎಸ್.ನವೀನ್​ ಜಯ ಗಳಿಸಿದ್ದಾರೆ. ಈ ಮೂಲಕ ಕ್ಷೇತ್ರದಲ್ಲಿ ಬಿಜೆಪಿ ಸತತ ಎರಡು ಸೋಲುಗಳ ಬಳಿಕ ಮತ್ತೆ ಗೆದ್ದಂತಾಗಿದೆ.

ನವೀನ್ 358 ಪ್ರಥಮ ಪ್ರಾಶಸ್ತ್ಯದ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಎರಡು ಸೋಲಿನ ಅನುಕಂಪ, ರಾಜ್ಯದಲ್ಲಿ ಬಿಜೆಪಿ ಆಡಳಿತ, ಪರಿಷತ್ ವ್ಯಾಪ್ತಿಯ 11 ವಿಧಾನಸಭೆ ಕ್ಷೇತ್ರಗಳ ಪೈಕಿ 8ರಲ್ಲಿ ಕಮಲ ಶಾಸಕರು, ಇಬ್ಬರು ಸಂಸದರು, ಆರು ಎಂಎಲ್​ಸಿಗಳು, ಪಕ್ಷ ಬೆಂಬಲಿತ ಗ್ರಾಮ ಪಂಚಾಯತ್​ ಸದಸ್ಯರಿರುವುದರಿಂದ ಬಿಜೆಪಿಗೆ ಗೆಲುವು ಲಭಿಸಿದೆ.

ಸ್ಥಳೀಯ ನವೀನ್ ವಿರುದ್ಧ ಹೊರಗಿನವರಾದ ಸೋಮಶೇಖರ್ ಸ್ಪರ್ಧಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿಗಿಂತ ಬಿಜೆಪಿ ಅಭ್ಯರ್ಥಿ ಮತದಾರರನ್ನು ಹೆಚ್ಚಿನ ಪ್ರಮಾಣದಲ್ಲಿ ತಲುಪಿದ್ದಲ್ಲದೆ, ಜನಸ್ವರಾಜ್ ಸಮಾವೇಶದ ಮೂಲಕ ಸಿಕ್ಕ ಗ್ರಾಮಪಂಚಾಯತ್ ಸದಸ್ಯರ ವಿಶ್ವಾಸವೂ ಗೆಲುವಿಗೆ ನೆರವಾಯಿತು.

ಕಾಂಗ್ರೆಸ್‌ನಲ್ಲಿ ಮೂವರು ಹಾಲಿ ಶಾಸಕರು ಹಾಗೂ ಮಾಜಿ ಶಾಸಕರ ಮತ್ತು ನಾಯಕರ ದಂಡೇ ಇದ್ದರೂ ಬಿಜೆಪಿಯಷ್ಟು ಪೂರ್ವ ತಯಾರಿ ಇರಲಿಲ್ಲ. ಕಳೆದ ಬಾರಿಯಂತೆ ನಮ್ಮ ಸರ್ಕಾರವಿಲ್ಲ ಎಂಬ ಕೊರಗು ಅವರನ್ನು ಬಾಧಿಸಿತು. ಕಾಂಗ್ರೆಸ್​ ಶಾಸಕರಿರುವ ಕಡೆ ಹಾಗೂ ಸಿದ್ದರಾಮಯ್ಯ ಪ್ರಚಾರ ಮಾಡಿದೆಡೆ ಕಾಂಗ್ರೆಸ್‌ಗೆ ಒಂದಷ್ಟು ಮತ ಬಂದರೂ ಗೆಲುವಿನ ದಡ ಸೇರಲು ಸಾಧ್ಯವಾಗಲಿಲ್ಲ.

ಇತ್ತ ಬಿಜೆಪಿಯಲ್ಲಿ ಬಿಎಸ್‌ವೈ ಪ್ರಭಾವ, ಕೇಂದ್ರ ಸಚಿವ ನಾರಾಯಣ ಸ್ವಾಮಿ, ಜಿಲ್ಲಾ ಉಸ್ತುವಾರಿಗಳಾದ ಶ್ರೀರಾಮುಲು, ಬೈರತಿ ಬಸವರಾಜ್, ಸಂಸದ ಜಿ.ಎಂ.ಸಿದ್ದೇಶ್ವರ ಸೇರಿ ಶಾಸಕರಾದ ತಿಪ್ಪಾರೆಡ್ಡಿ, ಗೂಳಿಹಟ್ಟಿ ಶೇಖರ್, ಚಂದ್ರಪ್ಪ, ಪೂರ್ಣಿಮಾ ಶ್ರೀನಿವಾಸ್, ಎಸ್.ವಿ. ರಾಮಚಂದ್ರ ಅವರು ಚುನಾವಣೆಯನ್ನು ಗಂಭೀರವಾಗಿ ಸ್ವೀಕರಿಸಿದ್ದು ನವೀನ್‌ಗೆ ವರವಾಯಿತು.

ಮತಗಳ ವಿವರ: ಪ್ರಥಮ ಪ್ರಾಶಸ್ತ್ಯದಲ್ಲಿ ಗೆಲುವಿಗೆ 2,459 ಮತಗಳ ಅಗತ್ಯವಿತ್ತು. ನವೀನ 2,629 ಮತ ಪಡೆದರು. ಎದುರಾಳಿ ಸೋಮಶೇಖರ್ 2271 ಮತ ಪಡೆದರು. ಪಕ್ಷೇತರ ಅಭ್ಯರ್ಥಿ ಹನುಮಂತಪ್ಪ ದರ್ಗದ್ 16 ಮತ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net