

ಉಳ್ಳಾಲ: ಪದವೀಧರರಿಗೆ ವೃತ್ತಿ ಜೀವನದಲ್ಲಿ ಸಾಕಷ್ಟು ಸವಾಲುಗಳಿದ್ದರೂ ತಾಳ್ಮೆ, ಬುದ್ಧಿವಂತಿಕೆ, ಜ್ಞಾನ ವೃದ್ಧಿ, ತಂಡವಾಗಿ ಕೆಲಸ ಮಾಡುವ ಮೂಲಕ ಮುಂದುವರಿಯಬೇಕು. ನೀರು, ಪರಿಸರ, ಇಂಧನ, ವಿದ್ಯುತ್ ಮುಂತಾದ ಸಂಪನ್ಮೂಲ ರಕ್ಷಿಸುವ ಜವಾಬ್ದಾರಿ ಹೊಂದಬೇಕು.ಪಾಲಕರ ಕನಸು, ಶಿಕ್ಷಕರ ಶ್ರಮ, ಸಮುದಾಯ ಮತ್ತು ದೇಶದ ಮೇಲಿರುವ ಋಣ ಎಂದಿಗೂ ಮರೆಯದಿರಿ. ಬ್ಯಾರೀಸ್ ಸಂಸ್ಥೆಯ ಘೋಷವಾಕ್ಯ, ಪರಿಸರ, ಪ್ರತಿಜ್ಞೆ ಎಲ್ಲವೂ ಭಿನ್ನವಾಗಿದ್ದು ಇಲ್ಲಿ ಕಲಿತ ವಿದ್ಯಾರ್ಥಿಗಳು ಪ್ರಯೋಜನ ಪಡೆಯಬೇಕು. ವೃತ್ತಿ ಜೀವನದಲ್ಲಿ ಯಶಸ್ಸು ಕಾಣಬೇಕು ಎಂದು ಸುರತ್ಕಲ್ ಎನ್‌ಐಟಿಕೆ ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ವಿಭಾಗದ ಪ್ರೊ.ಉದಯ ಕುಮಾರ್ ಆರ್.ಯರಗಟ್ಟಿ ಕಿವಿಮಾತು ಹೇಳಿದರು.
ಕೊಣಾಜೆ ಸಮೀಪದ ಇನೋಳಿ ಬ್ಯಾರೀಸ್ ನಾಲೆಜ್ ಕ್ಯಾಂಪಸ್‌ನಲ್ಲಿ ಶನಿವಾರ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಇಂಜಿನಿಯರಿಂಗ್ ಪದವಿ ಪಡೆದ ಮಾತ್ರಕ್ಕೆ ಎಲ್ಲವೂ ಪಡೆದೆವೆನ್ನುವ ಭಾವನೆ ಬೇಡ, ಮಂಗಳೂರು ಸುಸಂಸ್ಕೃತಿಯಲ್ಲಿ ಹೆಸರು ಪಡೆದಿರುವ ಯುವಸಮುದಾಯ ತಮ್ಮ ಹಿರಿಯರಿಗೆ ಗೌರವ ನೀಡುವುದನ್ನು ಎಂದಿಗೂ ಮರೆಯಬಾರದು ಎಂದು ಹಿತವಚನ ನುಡಿದರು.
ಐಎನ್‌ಎಚ್‌ಎಫ್ ಹಾಗೂ ಅಹ್ಮದಾಬಾದ್ ಬಿಬಿಕೆ ಕೊಲ್ಲಾಬೊರೇಟಿವ್ ಆರ್ಕಿಟೆಕ್ಟ್ ಅಧ್ಯಕ್ಷ ಆರ್.ಕೀರ್ತಿಶಾ ಮಾತನಾಡಿ, ಮನೆಯಲ್ಲಿ ಪ್ರೀತಿ, ವಿಶ್ವಾಸ, ಮಾನವೀಯತೆ ಮುಖ್ಯವೇ ಹೊರತು ಹವಾನಿಯಂತ್ರಣ ಸಹಿತ ಐಷಾರಾಮಿ ವ್ಯವಸ್ಥೆ ಇದ್ದರೆ ಮಾತ್ರ ಮನೆ ಎನ್ನುವ ಭಾವನೆ ಸರಿಯಲ್ಲ. ನಗರ ಪ್ರದೇಶದಲ್ಲಿ ವಾಸಿಸುವ ಭಾವನೆಗಿಂತ ಅಲ್ಲಿ ಎಷ್ಟು ಮಂದಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ ಎನ್ನುವುದು ಮುಖ್ಯ ಎಂದರು.
ಬ್ಯಾರೀಸ್ ಅಕಾಡೆಮಿ ಆಫ್ ಲರ್ನಿಂಗ್ ಅಧ್ಯಕ್ಷ ಸೈಯ್ಯದ್ ಮೊಹಮ್ಮದ್ ಬ್ಯಾರಿ ಅಧ್ಯಕ್ಷತೆ ವಹಿಸಿದ್ದರು. 99ಗೇಮ್ಸ್ ಹಾಗೂ ರೋಬೋಸಾಫ್ಟ್‌ನ ಸ್ಥಾಪಕ ರೋಹಿತ್ ಭಟ್, ಕೋಡಿ ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಅಬ್ದುಲ್ ರಹ್ಮಾನ್, ಟ್ರಸ್ಟಿ ಡಾ.ಆಸಿಫ್, ಬೀಡ್ಸ್ ಪ್ರಾಂಶುಪಾಲ ಆರ್.ಖಲೀಲ್ ರಝಾಕ್, ಪಾಲಿಟೆಕ್ನಿಕ್ ನಿರ್ದೇಶಕ ಡಾ.ಪೃಥ್ವಿರಾಜ್, ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ.ಅಬ್ದುಲ್ಲಾ ಗುಬ್ಬಿ, ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಬಿಐಟಿ ಪ್ರಾಂಶುಪಾಲ ಎಸ್.ಐ.ಡಾ.ಮಂಜುರ್ ಬಾಷಾ ಸ್ವಾಗತಿಸಿ. ಬೀಸ್ ಪ್ರಾಂಶುಪಾಲ ಡಾ.ಅಝೀಜ್ ಮುಸ್ತಫಾ ವಂದಿಸಿದರು. ಪ್ರೊ.ಜೈಸನ್ ಮಿರಾಂಡ, ಡಾ.ಪೂಜಾ, ಪ್ರೊ.ನೂತನ ಪ್ರಸಾದ್ ಹಾಗೂ ಪ್ರೊ.ದಿಲ್ ನವಾಝ್ ನಿರೂಪಿಸಿದರು.
ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ) 13ನೇ, ಬ್ಯಾರೀಸ್ ಎನ್ವಿರೋ-ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್ (ಬೀಡ್ಸ್) 6ನೇ, ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಎಮರ್ಜಿಂಗ್ ಸೈನ್ಸ್ (ಬೀಸ್) ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಶೈಕ್ಷಣಿಕ ಸಾಧಕ ಇಂಜಿನಿಯರಿಂಗ್, ವಾಸ್ತುಶಿಲ್ಪ, ವಿಜ್ಞಾನ ಹಾಗೂ ಇತರ ವಿಭಾಗಗಳ ಪದವಿಪೂರ್ವ, ಸ್ನಾತಕೋತ್ತರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸ್ಮರಣ ಸಂಚಿಕೆ ‘ಮೆಮೋರ್’ ಬಿಡುಗಡೆಗೊಳಿಸಲಾಯಿತು.
ಕ್ಷುಲ್ಲಕ ಕಾರಣ ಮುಂದಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದರಿಂದ ಜೀವನದಲ್ಲಿ ಏನೂ ಸಾಧಿಸಿದಂತಾಗುವುದಿಲ್ಲ, ಇದಕ್ಕಾಗಿ ಪದವಿಗಳ ಅವಶ್ಯಕತೆಯಾದರೂ ಏನು? ಜೀವನದಲ್ಲಿ ಎದುರಾಗುವ ಪರೀಕ್ಷೆಗಳನ್ನು ಶೈಕ್ಷಣಿಕ ಜೀವನ ಮಾದರಿಯಂತೆ ಎದುರಿಸಬೇಕು. ಸರಿಯಾದ ಧ್ಯೇಯ, ಅಚಲ ವಿಶ್ವಾಸ, ನಂಬಿಕೆ, ನಿಷ್ಠೆ, ಮಾನವೀಯ ಮೌಲ್ಯಗಳು ನಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸೈಯ್ಯದ್ ಮೊಹಮ್ಮದ್ ಬ್ಯಾರಿ, ಅಧ್ಯಕ್ಷ, ಬ್ಯಾರೀಸ್ ಅಕಾಡೆಮಿ ಆಫ್ ಲರ್ನಿಂಗ್ ಪ್ರಸ್ತುತ ಕಾಲಘಟಕ್ಕೆ ತಕ್ಕಂತೆ ಉತ್ತಮ, ಯಶಸ್ವಿ ಆರ್ಕಿಟೆಕ್ಟ್‌ಗಳನ್ನು ಸಮಾಜಕ್ಕೆ ಅರ್ಪಿಸುತ್ತಿರುವ ಬಿಐಟಿ ಕ್ಯಾಂಪಸ್, ಯುವ ಸಮುದಾಯದಲ್ಲಿ ನಾಯಕತ್ವ ಗುಣ ಬೆಳೆಸುವಲ್ಲಿ ಸಫಲವಾಗಿದೆ. ಆರ್.ಕೀರ್ತಿಶಾ, ಅಧ್ಯಕ್ಷ, ಐಎನ್‌ಎಚ್ ಎಫ್ ಹಾಗೂ ಅಹ್ಮದಾಬಾದ್ ಬಿಬಿಕೆ ಕೊಲ್ಲಾಬೊರೇಟಿವ್ ಆರ್ಕಿಟೆಕ್ಟ್