

ಜಿಲ್ಲಾ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್‌ನಿಂದ ಆಗ್ರಹ
ರಾಮನಗರ
ಮುಂಡಗೋಡದಲ್ಲಿ ಅಪಘಾತದಲ್ಲಿ ಮೃತಪಟ್ಟ ಮುಂಡಗೋಡ ಸರ್ಕಾರಿ ಶಾಲೆಯ ಬಿಸಿಯೂಟ ತಯಾರಕಿ ಅನ್ನಪೂರ್ಣಮ್ಮ ಅವರಿಗೆ 25 ಲಕ್ಷ ರೂ. ಪರಿಹಾರ ಹಾಗೂ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಮನಗರ ಜಿಲ್ಲಾ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್‌ನಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಲಾಯಿತು.
ಮುಖ್ಯ ಶಿಕ್ಷಕ ಮತ್ತು ಎಸ್‌ಡಿಎಂಸಿ ಅಧ್ಯಕ್ಷರ ಹೆಸರಲ್ಲಿ ಜಂಟಿ ಬ್ಯಾಂಕ್ ಖಾತೆ ಮಾಡಿಸುವ ಆದೇಶವನ್ನು ಕೂಡಲೇ ಹಿಂದಕ್ಕೆ ಪಡೆದುಕೊಳ್ಳಬೇಕು. ಮೊದಲೇ ಇದ್ದ ರೀತಿಯಲ್ಲಿ ಮುಖ್ಯ ಶಿಕ್ಷಕ ಮತ್ತು ಅಡುಗೆ ತಯಾರಕರ ಹೆಸರಲ್ಲಿ ಜಂಟಿ ಬ್ಯಾಂಕ್ ಖಾತೆ ತೆರೆಯಬೇಕು.
2022-23ನೇ ಸಾಲಿನ ಬಜೆಟ್‌ನಲ್ಲಿ ಅಂದಿನ ಸರ್ಕಾರ ಬಿಸಿಯೂಟ ತಯಾರಕರಿಗೆ ಮಾಸಿಕ 1 ಸಾವಿರ ರೂ. ಹೆಚ್ಚುವರಿಯಾಗಿ ಘೋಷಣೆ ಮಾಡಿತ್ತು. ಆದರೆ, ಇನ್ನೂ ಜಾರಿಗೆ ಬಂದಿಲ್ಲ. ಈ ಸರ್ಕಾರ ಜೂನ್ ತಿಂಗಳಿಂದಲೇ ಅನ್ವಯ ಆಗುವಂತೆ ಜಾರಿಗೊಳಿಸಬೇಕು.
ಚುನಾವಣೆ ಪ್ರಚಾರದ ವೇಳೆ ಬೆಳಗಾವಿಯಲ್ಲಿ ಪ್ರಿಯಾಂಕ ಗಾಂಧಿ ಅವರು ಬಿಸಿಯೂಟ ತಯಾರಕರಿಗೆ 6000 ರೂ. ಸಂಬಳ ನೀಡುವುದಾಗಿ ಭರವಸೆ ನೀಡಿದ್ದರು. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿ ಇದ್ದು, ಇದನ್ನು ಜಾರಿಗೆ ತರಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ನಂತರ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕು ಅಧ್ಯಕ್ಷೆ ಸಾಕಮ್ಮ, ಪದಾಧಿಕಾರಿಗಳಾದ ಮಂಗಳಾ, ಶಾಂತಮ್ಮ, ಶಶಿಕಲಾ, ಸುನೀತಾ, ಎಂ.ಭಾರತಿ, ದೇವಮ್ಮ, ಪ್ರಮೀಳಾ, ವಸಂತ ಇದ್ದರು.