

ತುಮಕೂರು: ಶಿರಾ ತಾಲೂಕು ತರೂರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಬಿಸಿಯೂಟದ ಸಂದರ್ಭದಲ್ಲಿ ಸಾಂಬಾರು ಪಾತ್ರೆಯ ಒಳಗೆ 8 ವರ್ಷದ ಹೆಣ್ಣು ಮಗು ಬಿದ್ದು ಗಾಯಗೊಂಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಶಾಲೆಯ ವಿದ್ಯಾರ್ಥಿನಿ ಗಾಯಗೊಂಡು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ನೀಡಲಾಗಿದ್ದು ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ, ಸದಸ್ಯರಾದ ಡಾ.ಕೆ.ಟಿ.ತಿಪ್ಪೇಸ್ವಾಮಿ, ಮಂಜು ಇತ್ತೀಚೆಗೆ ಆಸ್ಪತ್ರೆಗೆ ಭೇಟಿ ನೀಡಿ ಬಾಲಕಿಯ ಅರೋಗ್ಯ ವಿಚಾರಿಸಿದ್ದಾರೆ.
ಘಟನೆಯ ಬಗ್ಗೆ ಬಾಲಕಿಯ ಪೋಷಕರು, ವೈದ್ಯರು ಮತ್ತು ಪೊಲೀಸರಿಂದ ಮಾಹಿತಿ ಪಡೆದಿರುವ ಆಯೋಗ ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಸೂಚನೆ ನೀಡಿದೆ.
ಅವಘಡದಲ್ಲಿ ಮಗುವಿನ ಶೇ.22ರಷ್ಟು ಚರ್ಮ ಸುಟ್ಟಿದ್ದು ಪ್ಲಾಸ್ಟಿಕ್ ಸರ್ಜರಿ ಮಾಡಬೇಕಾದ ಅಗತ್ಯವಿದೆ ಎಂದು ವೈದ್ಯರು ಶಿಫಾರಸು ಮಾಡಿದ್ದಾರೆ. ಬಡ ಕುಟುಂಬ ಹೆಣ್ಣು ಮಗಳ ಚಿಕಿತ್ಸೆಯ ಖರ್ಚನ್ನು ಸರ್ಕಾರವೇ ಭರಿಸಬೇಕು ಎಂಬ ಒತ್ತಾಯ ಸ್ಥಳೀಯರಿಂದ ಕೇಳಿಬಂದಿದೆ. ಘಟನೆ ಸಂಬಂಧ ಶಾಲೆಯಲ್ಲಿನ ನಾಲ್ಕು ಜನರ ವಿರುದ್ಧ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.