

ಬೆಂಗಳೂರು: ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಅವರ ಜೀವನವನ್ನಾಧರಿಸಿ ನಿರ್ಮಾಣವಾಗುತ್ತಿರುವ ‘ವಿಜಯಾನಂದ’ ಚಿತ್ರತಂಡದಿಂದ ಇನ್ನೊಂದು ಮಹತ್ವದ ಪಾತ್ರ ರಿವೀಲ್ ಆಗಿದೆ. ಇದುವರೆಗೂ ಡಾ. ವಿಜಯ ಸಂಕೇಶ್ವರ ಮತ್ತು ಅವರ ತಂದೆ ಬಿ.ಜಿ. ಸಂಕೇಶ್ವರ ಅವರ ಪಾತ್ರ ಪರಿಚಯದ ಟೀಸರ್ ಬಿಡುಗಡೆ ಮಾಡಲಾಗಿತ್ತು. ಈಗ ವಿಜಯ ಸಂಕೇಶ್ವರ ಅವರ ಪುತ್ರ ಆನಂದ ಸಂಕೇಶ್ವರ ಅವರ ಪಾತ್ರವನ್ನು ಪರಿಚಯಿಸುವ ಟೀಸರ್ ಭಾನುವಾರ ಯೂಟ್ಯೂಬ್ನಲ್ಲಿ ಬಿಡುಗಡೆಯಾಗಿದೆ.
ಭಾನುವಾರ, ಚಿತ್ರದ ನಿರ್ಮಾಪಕರೂ ಆಗಿರುವ ಆನಂದ ಸಂಕೇಶ್ವರ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಅವರಿಗೆ ಶುಭ ಕೋರಿರುವ ‘ವಿಜಯಾನಂದ’ ಚಿತ್ರತಂಡದವರು, ಉಡುಗೊರೆಯಾಗಿ ಟೀಸರ್ ಬಿಡುಗಡೆ ಮಾಡಿದ್ದಾರೆ. ಆನಂದ ಸಂಕೇಶ್ವರ ಅವರ ಪಾತ್ರವನ್ನು ಭರತ್ ಬೋಪಣ್ಣ ನಿರ್ವಹಿಸುತ್ತಿದ್ದು, ಈ ಟೀಸರ್ ಮೂಲಕ ಪಾತ್ರದ ವ್ಯಕ್ತಿತ್ವವನ್ನು ಹಿಡಿದಿಡಲಾಗಿದೆ. ‘ನನ್ನ ಸಾಹಸಗಳ ಪಾಲುದಾರ ... ವಿಜಯನ ಕನಸು, ಆನಂದನ ಅಚಲವಾದ ನಂಬಿಕೆ ಸೇರಿ ಈ ವಿಜಯಾನಂದ’ ಎಂದು ಡಾ. ವಿಜಯ ಸಂಕೇಶ್ವರ ಅವರ ಪಾತ್ರದ ಹಿನ್ನೆಲೆ ಧ್ವನಿ ಕೇಳಿಬರುವ ಮೂಲಕ ಈ ಟೀಸರ್ ಮುಗಿಯುತ್ತದೆ.
ಅ. 24ರಂದು ಹುಬ್ಬಳ್ಳಿಯಲ್ಲಿ ಬಹಳ ವಿಜೃಂಭಣೆಯಿಂದ ಪ್ರಾರಂಭವಾದ ‘ವಿಜಯಾನಂದ’ ಚಿತ್ರದ ಚಿತ್ರೀಕರಣವನ್ನು, ಪುನೀತ್ ರಾಜಕುಮಾರ್ ಅವರ ನಿಧನದಿಂದ ಕೆಲವು ದಿನಗಳ ಕಾಲ ನಿಲ್ಲಿಸಲಾಗಿತ್ತು. ಒಂದು ಸಣ್ಣ ಗ್ಯಾಪ್ನ ನಂತರ ಚಿತ್ರೀಕರಣ ಪ್ರಾರಂಭವಾಗಿದ್ದು, ಡಿಸೆಂಬರ್ ಕೊನೆಯವರೆಗೂ ಮುಂದುವರಿಯಲಿದೆ ಎನ್ನುತ್ತಾರೆ ನಿರ್ದೇಶಕಿ ರಿಶಿಕಾ ಶರ್ವ. ಈ ಕುರಿತು ಮಾತನಾಡಿರುವ ಅವರು, ‘ಹುಬ್ಬಳ್ಳಿ-ಧಾರವಾಡದಲ್ಲಿ ಮೊದಲು ಚಿತ್ರೀಕರಣ ಮುಗಿಸಿ, ಆ ನಂತರ ಹೈದರಾಬಾದ್ನ ರಾಮೋಜಿ ಫಿಲಂ ಸಿಟಿ ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲಿದ್ದೇವೆ. ಫೆಬ್ರವರಿ ಹೊತ್ತಿಗೆ ಚಿತ್ರೀಕರಣ ಮುಗಿಯುವ ಸಾಧ್ಯತೆ ಇದೆ. ಡಾ. ವಿಜಯ ಸಂಕೇಶ್ವರ ಅವರ ಪಾತ್ರಕ್ಕೆ ಮೂರು ಶೇಡ್ಗಳಿವೆ. ಇಂದು ಬಿಡುಗಡೆಯಾಗಿರುವ ಟೀಸರ್ನಲ್ಲಿ ಭರತ್ ಅವರು ಹೇಗೆ ಕಾಣುತ್ತಾರೋ, ಇಡೀ ಚಿತ್ರದಲ್ಲಿ ಹಾಗೆ ಕಾಣುತ್ತಾರೆ’ ಎಂದು ಹೇಳುತ್ತಾರೆ. ‘ವಿಜಯಾನಂದ’ ಚಿತ್ರದಲ್ಲಿ ಡಾ. ವಿಜಯ ಸಂಕೇಶ್ವರ ಅವರ ಪಾತ್ರವನ್ನು ನಿಹಾಲ್ ರಜಪೂತ್ ನಿರ್ವಹಿಸುತ್ತಿದ್ದು, ಅನಂತ್ ನಾಗ್, ರವಿಚಂದ್ರನ್, ವಿನಯಾ ಪ್ರಸಾದ್, ಭರತ್ ಬೋಪಣ್ಣ, ಸಿರಿ, ಅರ್ಚನಾ ಗೊಟ್ಟಿಗೆ, ಶೈನ್ ಶೆಟ್ಟಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ವಿಆರ್ಎಲ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ.