

ನಂಜನಗೂಡು: ಚಲಿಸುತ್ತಿರುವ ಸಾರಿಗೆ ಬಸ್‌ನಲ್ಲಿ ನಿರ್ವಾಹಕನ ಹುಟ್ಟು ಹಬ್ಬ ಆಚರಣೆ ಮಾಡಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ನಂಜನಗೂಡು ತಾಲೂಕಿನ ಹುಲ್ಲಹಳ್ಳಿ, ಕಣೇನೂರು ಮಾರ್ಗವಾಗಿ ಎಚ್.ಡಿ.ಕೋಟೆಯ ಕಾರಪುರಕ್ಕೆ ತೆರಳುತ್ತಿದ್ದ ಸಾರಿಗೆ ಬಸ್‌ನಲ್ಲಿ ಗುರುವಾರ ಸಂಜೆ ಹುಟ್ಟುಹಬ್ಬ ಆಚರಿಸಲಾಗಿದೆ. ಎಚ್.ಡಿ.ಕೋಟೆ ಡಿಪೋಗೆ ಸೇರಿದ ರೂಟ್ ನಂ.138 ಎಬಿ ನೋಂದಣಿ ಸಂಖ್ಯೆ ಕೆ.ಎ. 09 ಎಫ್ 5074 ಬಸ್ ಇದಾಗಿದ್ದು, ದಿನನಿತ್ಯ ಸಂಜೆ 7.30ರ ವೇಳೆಗೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಬಸ್ ನಿಲ್ದಾಣದಿಂದ ಕಾರಾಪುರಕ್ಕೆ ಈ ಬಸ್ ತೆರಳುತ್ತದೆ.
ಗುರುವಾರ ರಾತ್ರಿ 8 ಗಂಟೆ ವೇಳೆಯಲ್ಲಿ ಕಣೇನೂರು ಗ್ರಾಮದ ಬಳಿ ಚಲಿಸುತ್ತಿದ್ದ ಬಸ್ ಇಂಜಿನ್ ಮೇಲೆ ನಿರ್ವಾಹಕ ಮಧುಸೂದನ್ ಕೇಕ್ ಕತ್ತರಿಸಿ ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬರ್ತ್ ಡೇ ಆಚರಿಸಲು ಚಲಿಸುವ ಬಸ್ ಬೇಕಿತ್ತಾ? ಹಲವು ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆದೊಯ್ಯುವ ಜವಾಬ್ದಾರಿ ನಿರ್ವಾಹಕ ಮತ್ತು ಚಾಲಕನ ಮೇಲಿರುತ್ತದೆ. ಆದರೆ ಇವರೇ ಬಸ್‌ನಲ್ಲಿ ಹುಟ್ಟುಹಬ್ಬ ಆಚರಿಸಿ ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.