

ಮೈಸೂರು ರಾಜ ಸಂಸ್ಥಾನದ 25ನೇ ಮಹಾರಾಜರು, ರಾಜತಂತ್ರ ಹಾಗೂ ಪ್ರಜಾತಂತ್ರ ಎರಡನ್ನೂ ಅನುಭವಿಸಿದ ಜಯಚಾಮರಾಜೇಂದ್ರ ಒಡೆಯರ್ ಅವರ 101ನೇ ಜನ್ಮದಿನ ಇಂದು. (1919 ಜುಲೈ 18) ರಾಜಯೋಗಿ ಎಂದೇ ಬಿರುದಾಂಕಿತರಾದ ಮಹಾರಾಜರು ಸದಾ ಸಮಾಜಮುಖಿ ಚಿಂತನೆ, ಜನಪರ ಕಾರ್ಯಗಳಿಂದ ಜನಮನ ಗೆದ್ದರು. ಅವರ ಸ್ಮರಣೆಗಾಗಿ ಲೇಖಕ ಮೈಸೂರು ಸುರೇಶ್ ರಚಿಸಿರುವ ‘ರಾಜಯೋಗಿ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಬಹದ್ದೂರ್’ ಕೃತಿಯಿಂದ ಈ ಲೇಖನ. ಮೈಸೂರು ಅರಸರ ಹೆಸರಿನ ಕೊನೆಗೆ ‘ಒಡೆಯರ್’ ಎಂಬ ನಾಮಾಂಕಿತ ಇರುವ ಬಗ್ಗೆ ಹೇಗೆ ರೋಚಕ ಸಂಗತಿ ಇದೆಯೋ, ಅದೇ ಮಾದರಿಯಲ್ಲಿ ಜಯಚಾಮರಾಜೇಂದ್ರ ಒಡೆಯರ್ ಅವರಿಗೆ ‘ಜಯ’ ಎಂಬ ನಾಮಾಂಕಿತ ಬಂದಿರುವ ಹಿಂದೆ ಐತಿಹಾಸಿಕ ಸಂಗತಿಯೊಂದಿದೆ.
ಜಯ ಜಯ ಜಯೇತ್ ಜಯಚಾಮರಾಜೇಂದ್ರ!
ಆಗ ವಿಶ್ವದೆಲ್ಲೆಡೆ ಮಹಾಯುದ್ಧದ ಕರಿನೆರಳು. ಒಂದೆಡೆ ಸರ್ವಾಧಿಕಾರ, ಮತ್ತೊಂದೆಡೆ ಪ್ರಜಾತಂತ್ರ ಇವೆರಡರ ನಡುವೆ ನಡೆಯುತ್ತಿದ್ದ ಮಹಾಘೊರ ಯುದ್ಧ. ಇಂಥ ಸಮಯದಲ್ಲಿ ಮೈಸೂರು ಸಂಸ್ಥಾನವನ್ನು ಆಳುತ್ತಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಬ್ರಿಟಿಷ್ ಸರ್ಕಾರಕ್ಕೆ ಮೊದಲನೇ ಮಹಾಯುದ್ಧಕ್ಕೆ ಅಗತ್ಯ ಮಿಲಿಟರಿ ನೆರವು ನೀಡಿದರು. 1914ರ ಜುಲೈನಲ್ಲಿ ಆರಂಭಗೊಂಡ ಮೊದಲ ವಿಶ್ವ ಮಹಾಯುದ್ಧ 1918 ನವೆಂಬರ್ನಲ್ಲಿ ಮುಗಿಯಿತು. ಮಹಾಯುದ್ಧದಲ್ಲಿ ಜರ್ಮನಿ ವಿರುದ್ಧ ಬ್ರಿಟಿಷ್ ಸರ್ಕಾರ ಮೇಲುಗೈ ಸಾಧಿಸಿತು. ಇದಕ್ಕಾಗಿ ಬ್ರಿಟನ್ ರಾಣಿ ಕ್ವೀನ್ ಎಲಿಜಬೆತ್ ಮೈಸೂರು ಮಹಾರಾಜರಿಗೆ ಅಭಿನಂದನೆ ಸಲ್ಲಿಸಿದರು. ದೇಶದೆಲ್ಲೆಡೆ ವಿಶ್ವ ಮಹಾಯುದ್ಧದ ಗೆಲುವಿನ ಸಂಭ್ರಮಾಚರಣೆ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಮೈಸೂರು ಸಂಸ್ಥಾನದಲ್ಲಿ ಅರ್ನ್ಯಘ ರತ್ನದ ಜನನವಾಯಿತು. ಮೊದಲ ವಿಶ್ವಯುದ್ಧದ ಗೆಲುವಿನ ಸಂಕೇತವಾಗಿ ಆ ಮಗುವಿಗೆ ‘ಜಯ ಚಾಮರಾಜೇಂದ್ರ ಒಡೆಯರ್ ಬಹದ್ದೂರ್’ ಎಂದು ನಾಮಕರಣ ಮಾಡಲಾಯಿತು.
ಅದು ಸಿದ್ಧಾರ್ಥಿ ನಾಮ ಸಂವತ್ಸರದ ಆಷಾಢ ಬಹುಳ ಪಂಚಮಿ ದಿನ, ಮೈಸೂರಿನ ಬೀದಿ ಬೀದಿಗಳಲ್ಲಿ ನಾಡದೇವತೆ ಚಾಮುಂಡೇಶ್ವರಿ ಅಮ್ಮನವರ ಹಬ್ಬ ನಡೆದಿತ್ತು. ರಾಜಪರಿವಾರದವರು ಪ್ರತೀತಿಯಂತೆ ಚಾಮುಂಡಿಬೆಟ್ಟಕ್ಕೆ ಆಗಮಿಸಿ ಚಾಮುಂಡೇಶ್ವರಿ ತಾಯಿ ದರ್ಶನ ಪಡೆದಿದ್ದರು. ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಹೋದರ ಕಂಠೀರವ ನರಸಿಂಹರಾಜ ಒಡೆಯರ್ ಮತ್ತು ಕೆಂಪುಚೆಲುವರಾಜಮ್ಮಣ್ಣಿ ದಂಪತಿಗೆ 1919ನೇ ಜುಲೈ 18ರಂದು ಗಂಡುಮಗುವಿನ ಜನನವಾಯಿತು.
ಇಡೀ ಮೈಸೂರು ಸಂಭ್ರಮಾಚರಣೆಯಲ್ಲಿ ತೊಡಗಿತು. ಅರಮನೆಯೊಳಗೆ ಪುತ್ರೋತ್ಸವ. ರಾಜಕುಮಾರನ ಜನನ ಆಗಿರುವುದನ್ನು ಕೇಳಿ ಅರಮನೆಯೆಡೆಗೆ ದೌಡಾಯಿಸಿದ ಪ್ರಜೆಗಳು ಮಹಾರಾಜರಿಗೆ ಜಯಘೊಷ ಹಾಕಿದರು. ಮಾರನೇದಿನ ಅರಮನೆಯ ಬತೇರಿಯಿಂದ ರಾಜಪದ್ಧತಿಯಂತೆ 21 ಕುಶಾಲು ತೋಪುಗಳನ್ನು ಹಾರಿಸಲಾಯಿತು. ಮೈಸೂರಿನೆಲ್ಲೆಡೆ ದೀಪೋತ್ಸವ ನಡೆಯಿತು. ಇದಾದ 12 ದಿನಗಳ ಬಳಿಕ ನಾಮಕರಣ ಶಾಸ್ತ್ರವು ಅಂಬಾವಿಲಾಸ ಅರಮನೆಯಲ್ಲಿ ಸಾಂಗವಾಗಿ ನಡೆಯಿತು.
ರಾಜಕುಮಾರರ ನಾಮಕರಣದ ಪ್ರಯುಕ್ತ ನಾಲ್ವಡಿ ಕೃಷ್ಣರಾಜ ಒಡೆಯರ್ ಅಂಬಾವಿಲಾಸ ಅರಮನೆಯಲ್ಲಿ ವಿಶೇಷ ದರ್ಬಾರು ನಡೆಸಿದರು. ರಾಜ ಗುರುಗಳಾದ ಶ್ರೀ ಬ್ರಹ್ಮತಂತ್ರ ಪರಕಾಲಮಠದ ಶ್ರೀಗಳ ಸಮ್ಮುಖದಲ್ಲಿ ನಾಮಕರಣವು ಧಾರ್ವಿುಕ ವಿಧಿ ವಿಧಾನದೊಂದಿಗೆ ಅದ್ದೂರಿಯಾಗಿ ನಡೆಯಿತು. ಮಹಾರಾಜರ ದಿವಾನರಾಗಿದ್ದ ಸರ್ದಾರ್ ಸರ್ ಎಂ. ಕಾಂತರಾಜ ವಜ್ರದ ಕಂಠಿಹಾರವನ್ನು ಮಗುವಿನ ಕತ್ತಿಗೆ ಹಾಕಿ, ಜೋಡಿ ಶಾಲನ್ನು ಸಮರ್ಪಿಸಿದ ಮೇಲೆ ರಾಜಪರಿವಾರದ ಸದಸ್ಯರು, ರಾಜಕುಟುಂಬಗಳು ಮರದಹೊನ್ನು ಎಂಬ ಚಿನ್ನದ ನಾಣ್ಯವನ್ನು ‘ನಜಾರು’ ನೀಡಿ ಗೌರವ ಸಮರ್ಪಿಸಿದರು.
ಚಾಮುಂಡಿಬೆಟ್ಟದ ಮೇಲೆ ಕುಲದೇವಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಉತ್ಸಾವಾದಿಗಳು ನಡೆದವು. ಬೆಟ್ಟದಲ್ಲಿ ಶಿಶುವಿನ ಡೋಲೋತ್ಸವ ನಡೆಯಿತು. ದೇವಾಲಯದ ಆವರಣದಲ್ಲಿರುವ ಸಂಪಿಗೆಯ ಮರಕ್ಕೆ ಚಿನ್ನದ ಸರಪಣಿಗಳಿಂದ ರತ್ನಖಚಿತವಾದ ಚಿನ್ನದ ತೊಟ್ಟಿಲನ್ನು ಕಟ್ಟಿ ಅದರಲ್ಲಿ ಮಗುವನ್ನು ಮಲಗಿಸಿ ತೊಟ್ಟಿಲು ತೂಗಿದರು. ಅರಮನೆಯ ಆವರಣದಲ್ಲಿರುವ ತ್ರಿನಯನೇಶ್ವರಸ್ವಾಮಿ, ವರಾಹಸ್ವಾಮಿ, ಪ್ರಸನ್ನಕೃಷ್ಣಸ್ವಾಮಿ, ಲಕ್ಷ್ಮೀರಮಣಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆದವು. ಕಾರಾಗೃಹಗಳಲ್ಲಿದ್ದ ಸನ್ನಡತೆಯ ಕೈದಿಗಳಿಗೆ ಬಿಡುಗಡೆ ಭಾಗ್ಯ ದೊರೆಯಿತು. ಮೈಸೂರಿನ ಧರ್ಮಛತ್ರಗಳಲ್ಲಿ ಊಟದ ವ್ಯವಸ್ಥೆ ನಡೆಯಿತು.
ಆ ಮೂಲಕ ಇಡೀ ಮೈಸೂರು ಸಂಸ್ಥಾನವೇ ಜಯ ಚಾಮರಾಜೇಂದ್ರ ಒಡೆಯರ್ ಶ್ರೇಯಸ್ಸಿಗೆ ‘ಚಿರಮಭಿವರ್ದತಾಂ ಯದು ಸಂತಾನ ಶ್ರೀ’ ಎನ್ನುತ್ತ ಪ್ರಾರ್ಥನೆ ಸಲ್ಲಿಸಿತು.