ಏಕಾಏಕಿ ರದ್ದಾದ ಬಿಪಿಲ್ ಕಾರ್ಡ್!

Published on

 ಅರೆಕೊಪ್ಪ ಗ್ರಾಮಸ್ಥರ ಆಕ್ರೋಶ

ಕನಕಪುರ: ತಾಲೂಕಿನಲ್ಲಿ ಏಕಾಏಕಿ ಬಡವರ ರೇಷನ್ ಕಾರ್ಡ್‌ಗಳನ್ನು ರದ್ದು ಮಾಡಲಾಗುತ್ತಿದೆ ಎಂದು ತಾಲೂಕು ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಉಯ್ಯಂಬಳ್ಳಿ ಹೋಬಳಿ ಅರೆಕೊಪ್ಪ ನ್ಯಾಯಬೆಲೆ ಅಂಗಡಿಯೊಂದರಲ್ಲೇ 13 ಬಡ ಕುಟುಂಬಗಳ ರೇಷನ್ ಕಾರ್ಡ್ ರದ್ದು ಮಾಡಲಾಗಿದೆ. ಶಿವನೇಗೌಡನದೊಡ್ಡಿಯ ಸುನೀತಾ ಗಣೇಶ್, ಮುತ್ತುರಾಜು, ರೇವಣ್ಣ ಮುನಿಸಿದ್ದಮ್ಮ, ಮೀರಾಬಾಯಿ, ದುರ್ಗಾನಾಯ್ಕ ಸೇರಿ ಹಲವರ ಕಾರ್ಡ್‌ಗಳನ್ನು ಗಮನಕ್ಕೆ ತಾರದೆ ಆಹಾರ ಇಲಾಖೆಯ ನಿರೀಕ್ಷಕ ಮನೋಹರ್ ರದ್ದು ಪಡಿಸಿದ್ದು, ಹಣ ಕೊಡುವವರಿಗೆ ರೇಷನ್ ಕಾರ್ಡ್‌ಗಳನ್ನು ಮಾಡಿಕೊಡುತ್ತಿದ್ದಾರೆ. ಈ ಬಗ್ಗೆ ತನಿಖೆ ಮಾಡಿ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ರೇಷನ್ ಕಾರ್ಡ್‌ಗೆ ಇ-ಕೆವೈಸಿ ನಿಯಮ ಅಳವಡಿಸಿದ್ದರೂ ಅದಕ್ಕೆ ಇನ್ನು ಸಾಕಷ್ಟು ಕಾಲಾವಕಾಶ ನೀಡಲಾಗಿದೆ, ಇದರ ಮಧ್ಯೆರಾಜ್ಯ ಸರ್ಕಾರ ಯಾವುದೇ ರೇಷನ್ ಕಾರ್ಡ್ ರದ್ದು ಮಾಡಬಾರದು ಎಂದು ಸೂಚಿಸಿ, ರದ್ದಾಗಿರುವ ಕಾರ್ಡ್‌ಗಳನ್ನು ವಾಪಸ್ ನೀಡುವಂತೆ ಸೂಚಿಸಿದೆ. ಆದರೂ ಆಹಾರ ಇಲಾಖೆ ಅರ್ಹ ಕಾರ್ಡ್‌ದಾರರಿಗೆ ತೊಂದರೆ ನೀಡುವ ಮೂಲಕ ಅವರನ್ನು ವಂಚಿತರನ್ನಾಗಿ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.

ಅರಕೊಪ್ಪ ನ್ಯಾಯಬೆಲೆ ಅಂಗಡಿಯಲ್ಲಿ ಅರ್ಹ ಫಲಾನುಭವಿಗಳ ಕಾರ್ಡ್ ರದ್ದಾಗಿರುವ ಹಿನ್ನೆಲೆಯಲ್ಲಿ ಅದನ್ನು ಸರಿಪಡಿಸುವಂತೆ ಇಲಾಖೆಗೆ ಲಿಖಿತ ಮನವಿ ಕೊಟ್ಟಿದ್ದರೂ ಸರಿಪಡಿಸುವ ಗೋಜಿಗೆ ಹೋಗಿಲ್ಲ. - ಮಾರೇಗೌಡ, ನ್ಯಾಯಬೆಲೆ ಅಂಗಡಿ ಮಾಲೀಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net