

ಹನೂರು: ಔಷಧ ಸಸ್ಯಗಳನ್ನು ಸಂರಕ್ಷಿಸುವುದರಿಂದ ಅರಣ್ಯ ಪರಿಸರವನ್ನು ಉತ್ತಮಪಡಿಸುವುದರ ಜತೆಗೆ ಜೀವ ವೈವಿಧ್ಯತೆಯನ್ನು ಉಳಿಸಬಹುದು ಎಂದು ಕರ್ನಾಟಕ ರಾಜ್ಯ ಔಷಧ ಗಿಡಮೂಲಿಕಾ ಪ್ರಾಧಿಕಾರದ ಸಿಇಒ ಜಿ.ಎ.ಸುದರ್ಶನ್ ತಿಳಿಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಶುಕ್ರವಾರ ರಾಜ್ಯ ಔಷಧ ಗಿಡಮೂಲಿಕಾ ಪ್ರಾಧಿಕಾರ ಹಾಗೂ ಕರ್ನಾಟಕ ಜೀವವೈವಿಧ್ಯ ಮಂಡಳಿ ವತಿಯಿಂದ ಔಷಧ ಸಸ್ಯಗಳ ರಕ್ಷಣೆ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ರೈತರಿಗೆ ಆಯೋಜಿಸಿದ್ದ ಸಾಮರ್ಥ್ಯವರ್ಧನೆ ಕಾರ್ಯಾಗಾರದಲ್ಲಿ ಮಾತನಾಡಿದರು.
ಜಾಗತಿಕ ಮಾರುಕಟ್ಟೆಯಲ್ಲಿ ಔಷಧ ಸಸ್ಯಗಳ ಬೇಡಿಕೆ ನಿರಂತರವಾಗಿದೆ. ಆದರೆ ದೇಶದಲ್ಲಿ ಅವೈಜ್ಞಾನಿಕ ಸಂಗ್ರಹಣೆಯಿಂದ ಔಷಧ ಸಸ್ಯ ಸಂಪನ್ಮೂಲ ಕ್ಷೀಣಿಸುತ್ತಿದೆ. ಜತೆಗೆ ಗುಣಮಟ್ಟವು ಕಡಿಮೆಯಾಗುತ್ತಿದೆ. ಇದರಿಂದ ಸ್ವಾಭಾವಿಕ ಮರು ಉತ್ಪತ್ತಿಗೆ ಧಕ್ಕೆ ಉಂಟಾಗಿ ಅನೇಕ ಸಸ್ಯ ಪ್ರಭೇದಗಳು ವಿನಾಶದ ಅಂಚಿನಲ್ಲಿವೆ. ಪರಿಣಾಮ ಅರಣ್ಯ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಜೀವ ವೈವಿಧ್ಯತೆಗೂ ಧಕ್ಕೆಯಾಗುತ್ತಿದೆ. ಆದ್ದರಿಂದ ಔಷಧ ಸಸ್ಯಗಳನ್ನು ಕಾಪಾಡಬೇಕಿದೆ ಎಂದರು.
ಈ ದಿಸೆಯಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆಯಲ್ಲದೆ, ರೈತರಿಗೆ ಔಷಧ ಗಿಡಗಳನ್ನು ನೀಡುವುದರ ಮೂಲಕ ಅವರ ಜಮೀನಿನಲ್ಲಿ ಬೆಳೆಸಲು ಉತ್ತೇಜಿಸಲಾಗುತ್ತಿದೆ. ಆದ್ದರಿಂದ ಅದರ ಪ್ರಯೋಜನ ಪಡೆದುಕೊಂಡು ಔಷಧ ಸಸ್ಯಗಳ ವೃದ್ಧಿಗೆ ಪ್ರತಿಯೊಬ್ಬರೂ ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದರು.
ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಜಗತ್‌ರಾಮ್, ಡಿಸಿಎಫ್‌ಗಳಾದ ಡಾ.ಸಂತೋಷ್‌ಕುಮಾರ್, ಗೋವರ್ಧನ್ ಸಿಂಗ್, ಸುರೇಂದ್ರ, ಎಸಿಎಫ್‌ಗಳಾದ ಅಂಕರಾಜು, ಸತ್ಯಶ್ರೀ ಹಾಗೂ ಆರ್‌ಎಫ್‌ಒ, ಡಿಆರ್‌ಎಫ್‌ಒ ಹಾಗೂ ಸಿಬ್ಬಂದಿ ಇದ್ದರು.