

ಕಾರವಾರ:ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರಚಿಸುವ ಜೀವ ವೈವಿಧ್ಯ ಸಮಿತಿ(ಬಿಎಂಸಿ)ಕಾರ್ಯ ನಿರ್ವಹಣೆಗೆ 15 ನೇ ಹಣಕಾಸು ಯೋಜನೆಯಲ್ಲಿ ಶೇ.5 ರಷ್ಟು ಅನುದಾನವನ್ನು ಮೀಸಲಿಟ್ಟು ಶಿಫಾರಸು ಮಾಡಬೇಕು ಎಂದು ವೃಕ್ಷಲಕ್ಷ ಆಂದೋಲನ ಸಮಿತಿ ರಾಜ್ಯ ಜೀವ ವೈವಿಧ್ಯ ಮಂಡಳಿಗೆ ಮನವಿ ಮಾಡಿದೆ.
ಜೀವ ವೈವಿಧ್ಯ ಮಂಡಳಿ, ಪಶ್ವಿಮ ಘಟ್ಟ ಕಾರ್ಯಪಡೆ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರ ನೇತೃತ್ವದಲ್ಲಿ, ಸಮಿತಿಯ ಶ್ರೀಪಾದ ಬಿಚ್ಚುಗತ್ತಿ, ಕೆ.ವೆಂಕಟೇಶ, ಗಣಪತಿ ಕೆ.ಅವರು ಮಂಡಳಿಯ ಮುಖ್ಯಸ್ಥ ವೆಂಕಟೇಶ ಅವರನ್ನು ಇತ್ತೀಚೆಗೆ ಭೇಟಿಯಾಗಿ ಮಾದರಿ ಜೀವ ವೈವಿಧ್ಯ ಮಂಡಳಿ ಕಾರ್ಯನಿರ್ವಹಣೆ ಸಂಬಂಧ ಸಿದ್ಧಪಡಿಸಿದ ಸಮಗ್ರ ವರದಿಯೊಂದನ್ನು ಸಲ್ಲಿಸಿತು. ವರದಿಯ ಶಿಫಾರಸುಗಳನ್ನು ರಾಷ್ಟ್ರೀಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಪ್ರಸ್ತಾಪಿಸುವುದಾಗಿ ವೆಂಕಟೇಶ ಭರವಸೆ ನೀಡಿದರು.
ಉತ್ತರ ಕನ್ನಡದ ಸಿದ್ದಾಪುರ, ಶಿರಸಿ, ಯಲ್ಲಾಪುರ, ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ ಹೊಸನಗರ ತಾಲೂಕುಗಳ ಜೀವ ವೈವಿಧ್ಯ ಸಮಿತಿಗಳನ್ನು ಮಾದರಿ ಎಂದು ಗುರುತಿಸಿ ಅವುಗಳಿಂದ ವಿಶೇಷ ಚಟುವಟಿಕೆಗಳನ್ನು ಕೈಗೊಳ್ಳಲಾಯಿತು. 2021 ರಿಂದ 2023 ರ ಅವಧಿಯಲ್ಲಿ ತಾಲೂಕು ಮಾದರಿ ಜೀವ ವೈವಿಧ್ಯ ಸಮಿತಿಗಳು ಮಾಡಿದ ಕಾರ್ಯಗಳನ್ನು ವರದಿಯಲ್ಲಿ ಸೇರಿಸಲಾಗಿದೆ. ಒಟ್ಟು 15 ಸ್ಥಳಗಳನ್ನು ಪಾರಂಪರಿಕ ಜೀವವೈವಿಧ್ಯ ಸ್ಥಳಗಳನ್ನು ಗುರುತಿಸಿ ಮಾನ್ಯತೆ ನೀಡಲಾಗಿದೆ. ಇನ್ನೂ 12 ಸ್ಥಳಗಳಿಗೆ ಮಾನ್ಯತೆ ನೀಡುವುದು ಬಾಕಿ ಇದೆ. ಹಲವು ಕಾರ್ಯಾಗಾರಗಳು ನಡೆದಿವೆ ಎಂದು ವಿವರಿಸಲಾಗಿದೆ. ಈ ಸಮಿತಿಗಳ ಕಾರ್ಯನಿರ್ವಹಣೆಯಿಂದ ಬಂದ ಅಂಶಗಳನ್ನು ಪರಿಗಣಿಸಿ 10 ಶಿಫಾರಸುಗಳನ್ನು ಮಾಡಲಾಗಿದೆ.
ಅದರಲ್ಲಿ ಪ್ರಮುಖವಾಗಿ 14 ನೇ ಹಣಕಾಸು ಆಯೋಗದಲ್ಲಿ ಬಿಎಂಸಿ ನಿರ್ವಹಣೆಗೆ ಶೇ.5 ಅನುದಾಣ ಮೀಸಲಿಡಲಾಗಿತ್ತು. ಆದರೆ, 15 ಹಣಕಾಸು ನಿಽಯಲ್ಲಿ ಈ ಸೌಲಭ್ಯವಿಲ್ಲ ಎಂಬುದನ್ನು ವಿವರಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಒಂದು ಮಾದರಿ ಜೀವವೈವಿಧ್ಯ ಸಮೀತಿಯನ್ನು ತಾಪಂ ಮಟ್ಟದಲ್ಲಿ ರಚಿಸಬೇಕು. ಕೆರೆ, ಗ್ರಾಮ ನೈಸರ್ಗಿಕ ಭೂಮಿಗಳ ಸಂರಕ್ಷಣೆ ಹಳ್ಳ, ಹೊಳೆಗಳ ನಿರ್ವಹಣೆ ಆ ಸಮಿತಿಗಳು ಕಾಳಜಿ ವಹಿಸಬೇಕು. ಸ್ಥಳೀಯ ಮಟ್ಟದಲ್ಲಿ ನೈಸರ್ಗಿಕ ಜೀವವೈವಿಧ್ಯ ತಾಣಗಳನ್ನು ಗುರುತಿಸುವದು ಮತ್ತು ರಾಜ್ಯ ಮಂಡಳಿಗೆ ಶಿಫಾರಸ್ಸು ಮಾಡುವ ಕಾರ್ಯವಾಗಬೇಕು. ಹಳೇ ಸೊರಬ ದೇವರ ಕಾಡು ಪ್ರದೇಶಕ್ಕೆ ರಾಜ್ಯ ಜೀವವೈವಿಧ್ಯ ತಾಣ ಮಾನ್ಯತೆ ನೀಡಬೇಕು. ಸೊರಬ ತಾಲೂಕಿನಲ್ಲಿ 1500 ಸಣ್ಣ ದೊಡ್ಡ ಕೆರೆಗಳಿವೆ. ಜೀವವೈವಿಧ್ಯ ಮಂಡಳಿ ಸೊರಬ ತಾಲೂಕನ್ನು ಕೆರೆಗಳ ನಾಡು ಎಂದು ಮಾನ್ಯತೆ ನೀಡಬೇಕು. ಜೋಗ ಜಲಪಾತ ಸಮೀಪ ಇರುವ ಮಾವಿನಗುಂಡಿ ಮಹಿಳಾ ಸ್ವಾತಂತ್ರ ವನ ಪುನಶ್ಚೇತನ ಮಾಡಲು ಅರಣ್ಯ ಇಲಾಖೆ ವಿಶೇಷ ಯೋಜನೆ ರೂಪಿಸಬೇಕು. ಸಿದ್ದಾಪುರದ ಕತ್ತಲೆ ಕಾನು, ಸಾಗರದ ಬರೂರಿನ ಸೀತಾ ಅಶೋಕಾವನ ಸಂರಕ್ಷಿಸಬೇಕು ಎಂದು ಮನವಿ ಮಾಡಲಾಗಿದೆ.