

ಹಿರಿಕರ ರವಿ ಸೋಮವಾರಪೇಟೆ
ಬೆಟ್ಟಗುಡ್ಡಗಳಿಂದ ಕೂಡಿದ ವಿಪರೀತ ಮಂಜು ಬಿದ್ದು, ಇಡೀ ಪ್ರದೇಶ ಬಿಳಿ ಬಣ್ಣದಿಂದ ಕಂಗೊಳಿಸುತ್ತಿದ್ದ ಕಾರಣ, ತಾಲೂಕಿನ ಈ ಗ್ರಾಮಕ್ಕೆ ಬಿಳಿಗೇರಿ ಎಂತಲೇ ಹೆಸರು ಬಂದಿದೆ.
ಈ ಗ್ರಾಮ ಹಚ್ಚಹಸಿರಿನ ಬೆಟ್ಟಗುಡ್ಡಗಳ ನಡುವೆ ಇದ್ದು, ಋಷಿಮುನಿಗಳು ವಾಸ ಮಾಡಿದ ಸ್ಥಳವೆಂದೇ ಜನರು ನಂಬಿದ್ದಾರೆ. ಈ ಕಾರಣದಿಂದ ಬಿಳಿಗೇರಿ ಗ್ರಾಮ ಧಾರ್ಮಿಕ ಆಚರಣೆಗಳಿಗೆ ಮಹತ್ವ ಪಡೆದುಕೊಂಡಿದೆ.
ಕಟ್ಟೆ ನ್ಯಾಯ: ಗ್ರಾಮದಲ್ಲಿ ಗ್ರಾಮ ಅರಳಿಕಟ್ಟೆಯಲ್ಲೇ ತೀರ್ಮಾನಗಳು ನಡೆಯುತ್ತವೆ. ಕೊಲೆ ಪ್ರಕರಣದಂತಹ ಗಂಭೀರ ಪ್ರಕರಣ ಹೊರತುಪಡಿಸಿ, ಇನ್ನಿತರ ಪ್ರಕರಣಗಳನ್ನು ಗ್ರಾಮಸ್ಥರು ಅರಳಿಕಟ್ಟೆಯಲ್ಲೇ ತೀರ್ಮಾನ ಮಾಡುತ್ತಾರೆ. ತಪ್ಪಿತಸ್ಥರಿಗೆ ಗ್ರಾಮ ಸಮಿತಿಯ ಆದೇಶವನ್ನು ಪಾಲಿಸಬೇಕು.
ಪಾಂಡವರ ಅಜ್ಞಾತವಾಸದ ಸಂದರ್ಭ ಬಿಳಿಗೇರಿ ಗ್ರಾಮದಲ್ಲಿ ಬಿಲ್ಲುಬಾಣಗಳನ್ನು ಅಡಗಿಸಿಟ್ಟು, ಕೋಟೆಬೆಟ್ಟದಲ್ಲಿ ವಾಸವಿದ್ದರು ಎಂಬ ನಂಬಿಕೆ ಇವತ್ತಿಗೂ ಗ್ರಾಮ ನಿವಾಸಿಗಳಲ್ಲಿದೆ. ಈ ನಂಬಿಕೆಯಿಂದ ಪ್ರತಿವರ್ಷ ಕೈಲ್‌ಮುಹೂರ್ತ ಹಬ್ಬದಂದು ಗ್ರಾಮದಲ್ಲಿರುವ ಅರಳಿ ಮರಕ್ಕೆ ಬಿಲ್ಲಿನಿಂದ ಹೊಡೆದು ಪೂಜೆ ಸಲ್ಲಿಸಿದ ನಂತರ, ಮನೆಯಲ್ಲಿ ಹಬ್ಬವನ್ನು ಆಚರಿಸಲಾಗುತ್ತದೆ.
ವಾರ್ಷಿಕ ಉತ್ಸವ: ಈಶ್ವರ, ಪಾರ್ವತಿ, ಗಂಗೆ, ಭದ್ರಕಾಳಿ, ಬಸವೇಶ್ವರ, ದೇವರುಗಳು ಒಂದೇ ಕಡೆ ನೆಲೆ ನಿಂತಿರುವ ಧಾರ್ಮಿಕ ಗ್ರಾಮ ಇದಾಗಿದ್ದು, ಚೌಂಡಿ, ಅಡ್ನಳ್ಳಿ-ಹೊಸಳ್ಳಿ ಬೂತಪ್ಪ, ಬೀರೆದೇವರು, ಬ್ರಹ್ಮ ದೇವರನ್ನು ಪೂಜಿಸಲಾಗುತ್ತದೆ. ಕರಡಿ ಮರದ ಬುಡದಲ್ಲಿ ಚೌಂಡಿಯಮ್ಮನ ಪೂಜೆ ಹಾಗೂ ವಾರ್ಷಿಕ ಹಬ್ಬದಲ್ಲಿ ಕೊಡವ ಸಂಸ್ಕೃತಿಯ ಉಮ್ಮತಾಟ್ ನಡೆಸಲಾಗುತ್ತದೆ. ಮಹಿಳೆಯರು ಒಂದು ಕಿ.ಮೀ.ದೂರದಲ್ಲಿರುವ ಹೊಳೆಯಲ್ಲಿ ಗಂಗೆಯನ್ನು ಪೂಜಿಸಿ, ಅದನ್ನು ತಂದು ದೇವಾಲಯದಲ್ಲಿ ದೇವರಿಗೆ ಅರ್ಪಿಸುತ್ತಾರೆ.
ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೀರಗಲ್ಲುಗಳು ಕಾಣಸಿಗುತ್ತವೆ. ಯುದ್ಧದಲ್ಲಿ ವೀರಮರಣ ಹೊಂದಿದವರು, ಧೈರ್ಯಶಾಲಿಗಳು, ಗ್ರಾಮದ ನಾಯಕರು ಮರಣ ಹೊಂದಿದಾಗ ಅವರ ಹೆಸರಿನಲ್ಲಿ ಕೆತ್ತನೆಯ ಕಲ್ಲುಗಳನ್ನು ನಿರ್ಮಿಸಲಾಗಿದೆ.
ಬಿಳಿಗೇರಿ ಗ್ರಾಮದಲ್ಲಿ ಸುಮಾರು 800 ಜನಸಂಖ್ಯೆಯಿದೆ. 100ರಿಂದ 150 ಇಂಚು ಮಳೆ ಸುರಿಯುತ್ತದೆ. ಬಾಚಿನಾಡಂಡ, ಬೈರಾಜಂಡ, ಮರುವಂಡ, ಮಲ್ಲಜ್ಜಿರ, ಅಲ್ಲತಂಡ, ಗೌಡಂಡ ಕುಟುಂಬಗಳು ವಾಸ ಮಾಡುತ್ತಿವೆ. 2006ರಲ್ಲಿ ಮೊದಲ ಬಾರಿಗೆ ಗ್ರಾಮದಲ್ಲಿ ಕುಶಾಲಪ್ಪ ಅವರ ಮನೆಗೆ ಮಳೆಯಿಂದ ಹಾನಿಯಾಯಿತು. ಬೋಪಣ್ಣ ಅವರ ಕಾಫಿ ಪಲ್ಪರ್ ಕೊಚ್ಚಿಹೋಯಿತು. 2018ರಲ್ಲೂ ಧಾರಾಕಾರ ಮಳೆಯಿಂದ ಮತ್ತೊಮ್ಮೆ ಭೂಕುಸಿತದ ಆತಂಕ ಎದುರಾಗಿತ್ತು. ಆದರೆ ಹೆಚ್ಚಿನ ಅನಾಹುತ ಸಂಭವಿಸಲಿಲ್ಲ.
ರಾಜಕೀಯ ಮುತ್ಸದ್ದಿ, ಮಾಜಿ ಸಚಿವ ಬಿ.ಎ.ಜೀವಿಜಯ ಅವರು ಕೂಡ ಇದೇ ಗ್ರಾಮದ ನಿವಾಸಿಯಾಗಿದ್ದಾರೆ. ಕಾಫಿ, ಕಾಳುಮೆಣಸು, ಕಿತ್ತಳೆ, ಏಲಕ್ಕಿ, ಭತ್ತ ಇಲ್ಲಿನ ಪ್ರಮುಖ ಬೆಳೆಗಳು. ಪ್ರಗತಿಪರ ಕೃಷಿಕರ ನಾಡಾಗಿದೆ. ಗ್ರಾಮದಲ್ಲಿ ಪ್ರಾಥಮಿಕ ಶಾಲೆ, ಆರೋಗ್ಯ ಕೇಂದ್ರ ಇದೆ.
ಸಮಸ್ಯೆಗಳು ಸಾಕಾಷ್ಟಿವೆ: ಚಿಕ್ಕ ಕಡಿದಾದ ರಸ್ತೆಯನ್ನು ಬಿಳಿಗೇರಿ ಗ್ರಾಮ ಹೊಂದಿದೆ. ಸಾರಿಗೆ ಬಸ್ ಸಂಚಾರವಿಲ್ಲ. ಬಾಡಿಗೆ ವಾಹನಗಳನ್ನೇ ಗ್ರಾಮಸ್ಥರು ಅವಲಂಬಿಸಬೇಕಿದೆ. ಕುಡಿಯುವ ನೀರಿನ ಸಮಸ್ಯೆಯೂ ಇದೆ ಎಂದು ಗ್ರಾಮಸ್ಥರು ಹೇಳಿದರು.