ರಾಜ್ಯದಲ್ಲಿ ಮತ್ತೆ ಬೈಕ್​ ಟ್ಯಾಕ್ಸಿ ಸದ್ದು!

Bike_Taxi_02
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ರಾಜ್ಯದಲ್ಲಿ ಬೈಕ್​ ಟ್ಯಾಕ್ಸಿಗೆ ನಿಷೇಧವಿದ್ದರೂ, ಹೈಕೋರ್ಟ್​ ಆದೇಶಕ್ಕೆ ಸೆಡ್ಡು ಹೊಡೆದು ರ್ಯಾಪಿಡೋ "ಬೈಕ್​ ಡೈರೆಕ್ಟ್​' ಎಂಬ ನೂತನ ಫೀಚರ್​ ಅನ್ನು ಅಳವಡಿಸಿಕೊಂಡಿದ್ದು, ಬೈಕ್​ ಟ್ಯಾಕ್ಸಿ ಕ್ಯಾಪ್ಟನ್​ಗಳು ನೇರವಾಗಿ ಗ್ರಾಹಕರನ್ನು ಸಂಪರ್ಕಿಸಲು ಹಾಗೂ ಸೇವೆ ನೀಡಲು ಅನುವು ಮಾಡಿಕೊಟ್ಟಿದೆ. ಇದರಿಂದ ನಿಷೇಧದ ಮಧ್ಯೆಯೂ ರಾಜ್ಯದಲ್ಲಿ ಮತ್ತೆ ಬೈಕ್​ ಟ್ಯಾಕ್ಸಿ ಸದ್ದು ಮಾಡುವಂತಾಗಿದೆ.

ಬ್ಯಾನ್​ನಿಂದ ಕಷ್ಟಪಡುತ್ತಿರುವ ಕ್ಯಾಪ್ಟನ್​ಗಳಿಗೆ ಸಹಾಯವಾಗಲು ಎಂದು ಕಂಪನಿ ಹೇಳುತ್ತಿದೆಯಾದರೂ, ಈ ಉಪಕ್ರಮವು ಹೈಕೋರ್ಟ್​ ಆದೇಶದ ವಿರುದ್ಧವಾಗಿದೆ. ರ್ಯಾಪಿಡೋ ಮಾತ್ರ ಇಂತಹ ಹೊಸ ಯೋಜನೆಯೊಂದಿಗೆ ಮುನ್ನೆಲೆಗೆ ಬಂದಿದ್ದು, ಉಳಿದಂತೆ ಉಬರ್​ ಮತ್ತು ಓಲಾ ತಮ್ಮ ಆ್ಯಪ್​ಗಳಿಂದ ಬೈಕ್​ ಟ್ಯಾಕ್ಸಿ ಆಯ್ಕೆಯನ್ನು ತೆಗೆದುಹಾಕಿವೆ.

ಹೈಕೋರ್ಟ್​ನ ಆದೇಶವು ವೈಯಕ್ತಿಕ ಬೈಕ್​ ಟ್ಯಾಕ್ಸಿ ಮಾಲೀಕರಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಿದೆ. ಆದರೆ, ಹಲವರು ಅದಕ್ಕೆ ಸರಿಯಾದ ವೇದಿಕೆ ಇಲ್ಲದೆ ಬುಕಿಂಗ್​ಗಳನ್ನು ಪಡೆಯಲು ಕಷ್ಟಪಡುತ್ತಿದ್ದಾರೆ. ಇದನ್ನೇ ಅಸ್ತ್ರವಾಗಿಸಿದ ರ್ಯಾಪಿಡೋ ನೂತನ ಉಮಕ್ರಮದೊಂದಿಗೆ ಮತ್ತೆ ಬೈಕ್​ ಟ್ಯಾಕ್ಸಿಯನ್ನು ಪ್ರೋತ್ಸಾಹಿಸಲು ಹೆಣಗಾಡುತ್ತಿದೆ.

ಕ್ಯಾಪ್ಟನ್​ ಸಬಲೀಕರಣದ ನೆಪ: "ಬೈಕ್​ ಡೈರೆಕ್ಟ್​' ಕ್ಯಾಪ್ಟನ್​ಗಳಿಗೆ ಉಚಿತವಾಗಿದ್ದು, ಇದು ಆ್ಯಪ್​ನ ಪಾಲಿಗೆ ವಾಣಿಜ್ಯ ಸೇವೆ ಅಲ್ಲ ಎಂದು ರ್ಯಾಪಿಡೋ ಹೇಳಿಕೊಂಡಿದೆ. ಆದಾಯ ಗಳಿಸಲು ಅಗತ್ಯವಿರುವ ಸಾಧನಗಳೊಂದಿಗೆ ಕ್ಯಾಪ್ಟನ್​ಗಳನ್ನು ಸಬಲೀಕರಣಗೊಳಿಸುವ ಮಾನವೀಯ ಪ್ರಯತ್ನ ಎಂದು ಕಂಪನಿ ಸ್ಪಷ್ಟೀಕರಣ ನೀಡಿದೆ. ಅಗ್ರಿಗೇಟರ್​ಗಳಿಗೆ ಸೇವೆಗಳನ್ನು ಮರುಪ್ರಾರಂಭಿಸಲು ಈಗಲೂ ಅನುಮತಿ ಲಭಿಸಿಲ್ಲ. ಆದರೆ, ಸದ್ಯಕ್ಕೆ ಇದು ಲಾಭರಹಿತ ಸೇವೆ ಎಂದು "ಬೈಕ್​ ಡೈರೆಕ್ಟ್​' ಉಪಕ್ರಮವನ್ನು ಪ್ರೋತ್ಸಾಹಿಸುವ ರ್ಯಾಪಿಡೋ ಮುಂದೊಂದು ದಿನ ನಿಯಮಗಳು ಅನುಕೂಲವಾದರೆ ಮತ್ತೆ ವಾಣಿಜ್ಯ ಸೇವೆಯತ್ತ ಹೊರಳುವುದರಲ್ಲಿ ಅನುಮಾನವಿಲ್ಲ. ನಿಯಂತ್ರಕರು ಮತ್ತು ಉದ್ದಿಮೆದಾರರು ರ್ಯಾಪಿಡೋದ ಈ ನೂತನ ಯೋಜನೆಯತ್ತ ಸೂಕ್ಷ್ಮವಾಗಿ ಗಮನಹರಿಸಿದ್ದಾರೆ.

ನಿಯಮ ರೂಪಿಸಲು ಸಲಹೆ

ಬೈಕ್​ ಟ್ಯಾಕ್ಸಿಗಳ ಸೇವೆ ಕಾರ್ಯಚರಣೆ ಮುಂದುವರೆಸುವ ಸಂಬಂಧ ನಿಯಮ ರೂಪಿಸುವ ಬಗ್ಗೆ

ಒಂದು ತಿಂಗಳಲ್ಲಿ ನಿಲುವು ತಿಳಿಸಲು ಸರ್ಕಾರಕ್ಕೆ ಹೈಕೋರ್ಟ್​ ಸೂಚಿನೆ ನೀಡಿತ್ತು. ನಗರ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ಓಲಾ, ಉಬರ್​, ರ್ಯಾಪಿಡೋ ಬೈಕ್​ ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸಲಾಗಿತ್ತು. ದೇಶದಲ್ಲಿ ಪ್ರತಿಯೊಬ್ಬರಿಗೆ ನ್ಯಾಯಯುತವಾಗಿ ವ್ಯವಾಹರ ನಡೆಸುವ ಸಂವಿಧಾನಬದ್ಧ ಹಕ್ಕಿದೆ. ಆದ್ದರಿಂದ ಬೈಕ್​-ಟ್ಯಾಕ್ಸಿ ಸೇವೆ ವಿಚಾರವಾಗಿ ಸರ್ಕಾರ ನಿಯಮ ರೂಪಿಸುವತ್ತ ಚಿತ್ತ ಹರಿಸಬಹುದು. ಈಗಾಗಲೇ 13 ರಾಜ್ಯಗಳು ನಿಯಮ ರೂಪಿಸಿವೆ. ಆದರೆ ಕರ್ನಾಟಕ ನಿಷೇಧ ಹೇರಿದ್ದು, ಈ ಕುರಿತು ಯೋಚಿಸುವಂತೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net