ಬೈಕ್​ ವೀಲಿಂಗ್​: ಶೋಕಿ ಮಾಡುವ ಪುಂಡರಿಗೆ ಚುರುಕು ಮುಟ್ಟಿಸಿದ ಪೊಲೀಸರು, 5 ಬೈಕ್​ಗಳು ಸೀಜ್​

Bike wheeling
Published on

ಚಿಕ್ಕಮಗಳೂರು: ಸಂಚಾರಿ ನಿಯಮ ಪಾಲಿಸದೇ ಬೈಕ್​ನಲ್ಲಿ ಶೋಕಿ ಮಾಡುವ ಪುಂಡರಿಗೆ ಪೊಲೀಸರು ಚುರುಕು ಮುಟ್ಟಿಸಿದ್ದಾರೆ. ರಸ್ತೆಯಲ್ಲಿ ವೀಲಿಂಗ್​ ಮಾಡಲು ಹೋಗಿ ಎಷ್ಟೋ ಯುವಕರು ತಮ್ಮ ಪ್ರಾಣ ಕಳೆದುಕೊಂಡಿರುವ ದೃಶ್ಯಗಳು ಆಗ್ಗಾಗ್ಗ ನಮ್ಮ ಕಣ್ಣ ಮುಂದೆ ಜರುಗಿದರೂ ಕೂಡ ಯುವ ಜನತೆ ಇನ್ನೂ ಎಚ್ಚೆತ್ತುಕೊಂಡಿರುವಂತೆ ಕಾಣುತ್ತಿಲ್ಲ.

ಚಿಕ್ಕಮಗಳೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಯುವಕರು ಬೈಕ್ ವೀಲಿಂಗ್ ಮಾಡಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಐದು ಬೈಕ್​ಗಳಲ್ಲಿ 10 ಯುವಕರು ವೀಲಿಂಗ್​ ಮಾಡುತ್ತಿದ್ದರು. ಮಾಹಿತಿ ತಿಳಿದು ಆಗಮಿಸಿದ ಪೊಲೀಸರು ಯುವಕರಿಂದ ಬೈಕ್​ ಸೀಜ್​ ಮಾಡಿದ್ದಾರೆ.

ದಂಟರಮಕ್ಕಿ ಕೆರೆ ಏರಿ, ಎಐಟಿ ವೃತ್ತ, ಜಿಲ್ಲಾ ಪಂಚಾಯಿತಿವರೆಗೂ ರಸ್ತೆ ಮಧ್ಯೆಯೇ ರೇಸ್‍ನಲ್ಲಿ ವೀಲಿಂಗ್ ಮಾಡಿದ್ದ ಯುವಕರ ಬೈಕ್​ಗಳ ವೇಗ ಕಂಡು ಇತರೆ ವಾಹನ ಸವಾರರು ಕಂಗಾಲಾಗಿದ್ದರು.

ಸದ್ಯ ಯುವಕರ ಬೈಕ್​ಗಳು ಸಖರಾಯಪಟ್ಟಣ ಪೊಲೀಸ್ ಠಾಣೆ ಮುಂಭಾಗ ಇದ್ದು, ಯುವಕರು ಮಾತ್ರ ಬರಿಗೈಯಲ್ಲಿ ವಾಪಸ್ಸಾಗಿದ್ದಾರೆ. ಬೈಕ್​ ವೀಲಿಂಗ್​ ಮಾಡಬಾರದೆಂದು ಯುವಕರಿಗೆ ಪೊಲೀಸರು ಹೇಳಿದ ಬುದ್ಧಿವಾದ ಎಷ್ಟರಮಟ್ಟಿಗೆ ಅರ್ಥವಾಯಿತು ಎಂಬುದು ಮಾತ್ರ ಗೊತ್ತಿಲ್ಲ. ಆದರೆ ಬೈಕ್​ ಸೀಜ್​ ಮಾಡುವ ಮೂಲಕ ಎಚ್ಚರಿಕೆಯನ್ನೂ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net