ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಆಸ್ಪತ್ರೆಗೆ ಸೇರಿದ; ಬೈಕ್​ನಿಂದ ಬಿದ್ದ ಯುವಕನ ಬ್ರೇನ್​ಡೆತ್​; ಪೊಲೀಸರ ವಿರುದ್ಧ ಪಾಲಕರ ಆರೋಪ

Bike accident
Published on

ಬೆಂಗಳೂರು: ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಬೈಕ್​ ಸವಾರನೊಬ್ಬ ಆಸ್ಪತ್ರೆಗೆ ಸೇರುವಂತಾಗಿದೆ. ತಪ್ಪಿಸಿಕೊಳ್ಳುವ ಭರದಲ್ಲಿ ಬೈಕ್ ಅಪಘಾತಕ್ಕೀಡಾಗಿದ್ದಲ್ಲದೆ ಯುವಕನ ತಲೆಗೆ ಗಂಭೀರವಾಗ ಗಾಯವಾಗಿದ್ದು, ಬ್ರೇನ್​ಡೆತ್​ ಆಗಿದೆ ಎನ್ನಲಾಗಿದೆ.

ಬೈಕ್​ ಸವಾರ ಕೌಸಿಕ್ (18) ಗಾಯಾಳು. ಬೆಂಗಳೂರಿನ ವಿಜಯನಗರದ ಅತ್ತಿಗುಪ್ಪೆಯಲ್ಲಿ ಈ ಘಟನೆ ನಡೆದಿದೆ. ವಿಜಯನಗರ ಸಂಚಾರ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದಾಗ ಕೌಸಿಕ್ ಹೆಲ್ಮೆಟ್ ಧರಿಸದೆ ಬೈಕ್​ನಲ್ಲಿ ಬರುತ್ತಿದ್ದ. ಆಗ ಪೊಲೀಸರನ್ನು ಕಂಡ ಕೌಸಿಕ್ ತಕ್ಷಣ ಬೈಕ್ ಯೂ-ಟರ್ನ್ ತೆಗೆದುಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ.

ಹೀಗೆ ತಪ್ಪಿಸಿಕೊಳ್ಳುವಾಗ ಬೈಕ್ ರಸ್ತೆ ವಿಭಜಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಆತನ ತಲೆಗೆ ಗಂಭೀರ ಗಾಯವಾಗಿದೆ. ಯುವಕನ ಬ್ರೇನ್​ ಡೆತ್​ ಆಗಿದೆ ಎನ್ನಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಮತ್ತೊಂದೆಡೆ ಗಾಯಾಳುವಿನ ಪಾಲಕರು ಪೊಲೀಸರ ವಿರುದ್ಧ ಆರೋಪ ಮಾಡಿದ್ದಾರೆ.

ಪೊಲೀಸರು ಕೌಸಿಕ್​ನನ್ನು ಅಟ್ಟಿಸಿಕೊಂಡು ಹೋಗಿ ಹಿಡಿಯಲು ಯತ್ನಿಸಿದ್ದಾರೆ. ಇದರಿಂದಾಗಿಯೇ ಆತ ಗಾಬರಿಗೊಂಡು ಅಪಘಾತಕ್ಕೆ ಈಡಾಗಿದ್ದಾನೆ ಎಂಬುದಾಗಿ ಕೌಸಿಕ್ ಪಾಲಕರು ಪೊಲೀಸರ ವಿರುದ್ಧ ಆರೋಪ ಹೊರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net