

ನಾಗಮಂಗಲ: ತಾಲೂಕಿನ ಬಿಂಡಿಗನವಿಲೆ ಹೋಬಳಿಯ ಕಂಬದಹಳ್ಳಿ ಆಂಜನೇಯಸ್ವಾಮಿ ಬೆಟ್ಟದ ಮುಖ್ಯದ್ವಾರದ ಬಳಿ ಗುರುವಾರ ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಜಿನ್ನನಾಥಪುರ ಗ್ರಾಮದ ಅವಿನಾಶ್ (25) ಮೃತ ಸವಾರ. ಅದೇ ಗ್ರಾಮದ ಅಭಿ ಎಂಬ ಯುವಕನ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.
ಅವಿನಾಶ್ ಹಾಗೂ ಅಭಿ ಇಬ್ಬರು ಬೈಕ್‌ನಲ್ಲಿ ತಾಲೂಕಿನ ಅದ್ದಿಹಳ್ಳಿ ಕಡೆಯಿಂದ ಶ್ರವಣಬೆಳಗೊಳ ಕಡೆಗೆ ಹೋಗುತ್ತಿದ್ದಾಗ ಎದುರಿನಿಂದ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ. ಬೈಕ್ ಸವಾರ ಅವಿನಾಶ್ ಸ್ಥಳದಲ್ಲೇ ಮೃತಪಟ್ಟಿದ್ದು, ಅಭಿ ರಕ್ತಸ್ರಾವದ ನಡುವೆ ನರಳುತ್ತಿರುವುದನ್ನು ಸಾರ್ವಜನಿಕರು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇಬ್ಬರು ಯುವಕರು ಎಳನೀರು ಕುಯ್ಯುವ ಕೆಲಸಕ್ಕೆ ಹೋಗುತ್ತಿದ್ದರು ಎನ್ನಲಾಗಿದೆ. ಮೃತ ದೇಹವನ್ನು ಆದಿಚುಂಚನಗಿರಿ ಶವಾಗಾರದಲ್ಲಿ ನಡೆದ ಮರಣೋತ್ತರ ಪರೀಕ್ಷೆಯ ನಂತರ ವಾರಸುದಾರರಿಗೆ ಮೃತದೇಹವನ್ನು ಹಸ್ತಾಂತರಿಸಲಾಯಿತು.
ಗಾಯಾಳು ಅಭಿ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸ್ಥಳಕ್ಕೆ ಬಿಂಡಿಗನವಿಲೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವ ಮೂಲಕ ಅಪರಿಚಿತ ವಾಹನ ಪತ್ತೆಹಚ್ಚುವಲ್ಲಿ ನಿರತರಾಗಿದ್ದಾರೆ.
ಸ್ಥಳಕ್ಕೆ ಸಿಪಿಐ ನಿರಂಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.