ಅಪ್ರಾಪ್ತರಿಗೆ ಬೈಕ್ ಓಡಿಸಲು ಕೊಟ್ರೆ ಜೈಲ್ ಸೇರುತ್ತೀರಾ ಹುಷಾರ್!

bike
Published on

ವಿಜಯವಾಣಿ ಸುದ್ದಿಜಾಲ

ಚನ್ನಪಟ್ಟಣ: ಬಾಲಕನಿಗೆ ಬೈಕ್ ಚಲಾಯಿಸಲು ನೀಡಿದವನಿಗೆ 34 ಸಾವಿರ ರೂ. ದಂಡ ಮತ್ತು ಒಂದು ದಿನ ಸಜೆ ವಿಧಿಸಿ ಜೆಎಂಎಫ್‌ಸಿ ನ್ಯಾಯಾಲಯ ಆದೇಶ ನೀಡುವ ಮೂಲಕ ಎಚ್ಚರಿಕೆ ಸಂದೇಶ ರವಾನಿಸಿದೆ.

ನಗರದ ನಿವಾಸಿ ಅನ್ವರ್ ಖಾನ್ ದಂಡನೆಗೊಳಗಾದ ವ್ಯಕ್ತಿ. ಈತ ನಾಲ್ಕು ತಿಂಗಳ ಹಿಂದೆ ಸಂಬಂಧಿಕರ ಮಗನಿಗೆ ಬೈಕ್ ಚಾಲನೆ ವಾಡಲು ನೀಡಿದ್ದರು. ಆತ ಬೈಕ್ ಚಲಾಯಿಸುವಾಗ ನಗರದ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಎದುರು ಆಯತಪ್ಪಿ ಬಿದ್ದು ಮೃತಪಟ್ಟಿದ್ದ. ಈ ಸಂಬಂಧ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಜೆಎಂಎಫ್‌ಸಿ ಪ್ರಧಾನ ಸಿವಿಲ್ ನ್ಯಾಯಾಧೀಶ ನ್ಯಾ. ಮಹೇಂದ್ರಕುವಾರ್ ಅವರು, ಬಾಲಕನಿಗೆ ವಾಹನ ಚಲಾಯಿಸಲು ನೀಡಿದ್ದಕ್ಕೆ ಬೈಕ್ ವಾಲೀಕನಿಗೆ 25 ಸಾವಿರ ರೂ. ದಂಡ, ವಾಹನಕ್ಕೆ ವಿಮೆ ಇಲ್ಲದ್ದಕ್ಕೆ 5 ಸಾವಿರ ರೂ. ದಂಡ ಹಾಗೂ ಚಾಲನಾ ಪರವಾನಗಿ ಇಲ್ಲದಕ್ಕೆ 4 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಜತೆಗೆ ಒಂದು ದಿನ ಸಜೆಯನ್ನೂ ವಿಧಿಸಿದ್ದಾರೆ. ಈ ತೀರ್ಪು ಅಪ್ರಾಪ್ತರಿಗೆ ವಾಹನಗಳನ್ನು ನೀಡುವ ಪಾಲಕರು ಹಾಗೂ ಸಂಬಂಧಿಕರಿಗೆ ಎಚ್ಚರಿಕೆ ಗಂಟೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net