ಕಚೇರಿಯಿಂದ ಮನೆಗೆ ಹೋಗುತ್ತಿದ್ದ ಯುವಕನನ್ನೇ ಹಿಂಬಾಲಿಸಿ ಬಂದ 'ಯಮ'!

kiran death
Published on

ಬೆಂಗಳೂರು: ಕೆಲಸ ಮುಗಿಸಿಕೊಂಡು ಗುರುವಾರ ರಾತ್ರಿ ಮನೆಗೆ ಹೋಗುತ್ತಿದ್ದ ಯುವಕ ಮಾರ್ಗ ಮಧ್ಯೆ ಸಂಭವಿಸಿದ ಸರಣಿ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಈತನ ಮೃತ ದೇಹ ಎರಡು ಕಾರುಗಳ ಮಧ್ಯೆ ಸಿಲುಕಿ ನಜ್ಜುಗುಜ್ಜಾಗಿತ್ತು.

ಕನಕಮಪಾಳ್ಯದ ನಿವಾಸಿ ಕಿರಣ್ ಮೃತ ಯುಕವ. ಈತ ಬೈಕ್​ನಲ್ಲಿ ಮನೆಗೆ ಹೋಗುತ್ತಿದ್ದಾಗ ರಿಚ್ಮಂಡ್​ ಸರ್ಕಲ್ ಬಳಿ ಹಿಂದಿನಿಂದ ಬಂದ ಕಾರು ಗುದ್ದಿದೆ. ಕಾರು ಡಿಕ್ಕಿಯಾದ ರಭಸಕ್ಕೆ ಕಿರಣ್​ ಇದ್ದ ಬೈಕ್​, ಮುಂಬದಿ ಇದ್ದ ಮತ್ತೊಂದು ಕಾರಿಗೆ ಗುದ್ದಿದೆ. ಎರಡೂ ಕಾರಿನ ನಡುವೆ ಸಿಕ್ಕ ಕಿರಣ್​ ಭೀಕರವಾಗಿ ಸ್ಥಳದಲ್ಲೇ ಅಸುನೀಗಿದ. ಅಷ್ಟಕ್ಕೂ ಈ ದುರಂತ ಸಾವಿಗೆ ಕಾರಣವಾಗಿದ್ದು ಕಂಠಪೂರ್ತಿ ಕುಡಿದಿದ್ದವ!

ಹೌದು, ಕಂಠಪೂರ್ತಿ ಕುಡಿದು ಕಾರು ಓಡಿಸುತ್ತಿದ್ದ ರೋಹಿತ್ ಎಂಬಾತನೇ ಈ ಸರಣಿ ಅಪಘಾತಕ್ಕೆ ಕಾರಣ. ಕುಡಿದ ಅಮಲಿನಲ್ಲೇ

ಇದ್ದ ರೋಹಿತ್​, ಕಾರು ಚಲಾಯಿಸಿಕೊಂಡು ಬಂದಿದ್ದ. ಕಿರಣ್​ ಹೋಗುತ್ತಿದ್ದ ಬೈಕ್​ಗೆ ಡಿಕ್ಕಿ ಹೊಡೆದು ಆತನ ಸಾವಿಗೂ ಕಾರಣನಾದ. ಎರಡೂ ಕಾರಿನ ಮಧ್ಯೆ ಸಿಲುಕ್ಕಿದ್ದ ಕಿರಣ್​ನನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಲು ಸ್ಥಳೀಯರು ಯತ್ನಿಸಿದರಾದರೂ ಅಷ್ಟರಲ್ಲಿ ಆತ ಕೊನೆಯುಸಿರೆಳೆದಿದ್ದ. ಸ್ಥಳಕ್ಕೆ ಭೇಟಿ ನೀಡಿದ ವಿಲ್ಸನ್ ಗಾರ್ಡನ್ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ರೋಹಿತ್​ನನ್ನು ವಶಕ್ಕೆ ಪಡೆದರು.

ಇದೇ ತಿಂಗಳಲ್ಲಿ ಕಿರಣ್ ಬರ್ತ್ ಡೇ ಇತ್ತು. ಗೆಳೆಯರ ಜೊತೆ ಹುಟ್ಟುಹಬ್ಬ ಆಚರಿಸುವ ಖುಷಿಯಲ್ಲಿದ್ದ ಕಿರಣ್​ ದುರಂತ ಸಾವಿಗೀಡಾಗಿದ್ದಾನೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net