

ಚಾಮರಾಜನಗರ: ಬೈಕ್‌ನಲ್ಲಿ ಟ್ರಿಪಲ್ ರೈಡ್ ಹೋಗಿದ್ದವರ ಪೈಕಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ಮೂವರೂ ಪ್ರಯಾಣಿಸುತ್ತಿದ್ದ ಬೈಕ್ ಹಳ್ಳಕ್ಕೆ ಮಗುಚಿ ಬಿದ್ದು ಅಪಘಾತ ಸಂಭವಿಸಿದೆ. ಚಾಮರಾಜನಗರದ ಅರಕಲವಾಡಿ ಸಮೀಪದ ಮೂಡಲ ಹೊಸಹಳ್ಳಿ ಗ್ರಾಮದಲ್ಲಿ ಭಾನುವಾರ ಸಂಜೆ ಈ ದುರ್ಘಟನೆ ನಡೆದಿದೆ.
ತಮಿಳುನಾಡು ಮೂಲದ ಕುಮಾರ (45), ಮೂಡಲ ಹೊಸಹಳ್ಳಿ ಗ್ರಾಮದ ಬಸವಯ್ಯ (65) ಮೃತಪಟ್ಟವರು. ಮೂಡಲ ಹೊಸಹಳ್ಳಿಯ ಮಹದೇವಯ್ಯ ಗಾಯಗೊಂಡು ನಗರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಮಿಳುನಾಡಿನವರಾದ ಕುಮಾರ್ ಹೊಸಹಳ್ಳಿ ಗ್ರಾಮದ ಜಮೀನಿನಲ್ಲಿ ಕೆಲಸ ಮಾಡಿಕೊಂಡಿದ್ದರು. ಬಸವಯ್ಯ, ಮಹದೇವಯ್ಯ ಸ್ನೇಹಿತರಾಗಿದ್ದು, ಮೂವರೂ ಒಂದೇ ಬೈಕ್‌ನಲ್ಲಿ ವಡ್ಡರಹಳ್ಳಿಗೆ ಹೋಗುತ್ತಿದ್ದರು. ಆಗ ಮಾರ್ಗಮಧ್ಯೆ ಬೈಕ್ ನಿಯಂತ್ರಣ ತಪ್ಪಿ, ಹಳ್ಳಕ್ಕೆ ಬಿದ್ದಿದೆ. ಬೈಕ್ ಚಾಲನೆ ಮಾಡುತ್ತಿದ್ದ ಕುಮಾರ ಹಾಗೂ ಮಧ್ಯದಲ್ಲಿ ಕುಳಿತಿದ್ದ ಬಸವಯ್ಯ ತೀವ್ರ ಗಾಯಗಳಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಿಂಬದಿ ಕುಳಿತಿದ್ದ ಮಹದೇವಯ್ಯ ಅವರಿಗೆ ಗಾಯಗಳಾಗಿವೆ.