ವಿಶ್ವ ಶಾಂತಿಗೆ ವಚನಗಳು ಮಾರ್ಗದರ್ಶಿ

ಬಸವಕಲ್ಯಾಣದಲ್ಲಿ ಶನಿವಾರ ಆಯೋಜಿಸಿದ್ದ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವವನ್ನು ಆಂಧ್ರಪ್ರದೇಶ ರಾಜ್ಯಪಾಲ ಎಸ್. ಅಬ್ದುಲ್ ನಜೀರ್ ಉದ್ಘಾಟಿಸಿದರು. ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಶ್ರೀ ಡಾ.ಚನ್ನವೀರ ಶಿವಾಚಾರ್ಯ, ಶ್ರೀ ಡಾ.ಶಿವಾನಂದ ಸ್ವಾಮೀಜಿ, ಪೂಜ್ಯ ಡಾ.ಗಂಗಾಂಬಿಕೆ ಅಕ್ಕ, ಸಚಿವ ಈಶ್ವರ ಖಂಡ್ರೆ, ಶಾಸಕ ಶರಣು ಸಲಗರ, ಅರುಣಕುಮಾರ ಪಾಟೀಲ್ ಇತರರಿದ್ದರು.
ಬಸವಕಲ್ಯಾಣದಲ್ಲಿ ಶನಿವಾರ ಆಯೋಜಿಸಿದ್ದ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವವನ್ನು ಆಂಧ್ರಪ್ರದೇಶ ರಾಜ್ಯಪಾಲ ಎಸ್. ಅಬ್ದುಲ್ ನಜೀರ್ ಉದ್ಘಾಟಿಸಿದರು. ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಶ್ರೀ ಡಾ.ಚನ್ನವೀರ ಶಿವಾಚಾರ್ಯ, ಶ್ರೀ ಡಾ.ಶಿವಾನಂದ ಸ್ವಾಮೀಜಿ, ಪೂಜ್ಯ ಡಾ.ಗಂಗಾಂಬಿಕೆ ಅಕ್ಕ, ಸಚಿವ ಈಶ್ವರ ಖಂಡ್ರೆ, ಶಾಸಕ ಶರಣು ಸಲಗರ, ಅರುಣಕುಮಾರ ಪಾಟೀಲ್ ಇತರರಿದ್ದರು.
Published on
===
ಆಂಧ್ರ ರಾಜ್ಯಪಾಲ ಅಬ್ದುಲ್ ನಜೀರ್ ಪ್ರತಿಪಾದನೆ |
ಬಸವಕಲ್ಯಾಣ: ಬಸವಣ್ಣನವರ ಕಾಲಘಟ್ಟ ೧೨ನೇ ಶತಮಾನದಲ್ಲಿ ಪರಿಸ್ಥಿತಿ ಕಠಿಣವಾಗಿತ್ತು. ಆಗ ಅವರು ಸಮಾನತೆಯ ಸಂದೇಶ ಸಾರಿ, ದೊಡ್ಡ ಕ್ರಾಂತಿಯನ್ನೇ ಮಾಡಿದರು. ವಿಶ್ವದಲ್ಲಿ ಶಾಂತಿ ನೆಲೆಸಲು ಹಾಗೂ ನಮ್ಮೆಲ್ಲರ ನೆಮ್ಮದಿ ಜೀವನಕ್ಕೆ ವಚನ ಸಾಹಿತ್ಯ ಮಾರ್ಗದರ್ಶಿಯಾಗಿದೆ ಎಂದು ಆಂಧ್ರಪ್ರದೇಶ ರಾಜ್ಯಪಾಲ ಎಸ್. ಅಬ್ದುಲ್ ನಜೀರ್ ಪ್ರತಿಪಾದಿಸಿದರು.
ವಿಶ್ವ ಬಸವ ಧರ್ಮ ಟ್ರಸ್ಟ್ನಿಂದ ನಗರದ ಅನುಭವ ಮಂಟಪ ಪರಿಸರದಲ್ಲಿ ಎರಡು ದಿನ ಆಯೋಜಿಸಿದ್ದ ೪೬ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವಕ್ಕೆ ಶನಿವಾರ ಚಾಲನೆ ನೀಡಿ ಓಂ ಶ್ರೀಗುರು ಬಸವ ಲಿಂಗಾಯ ನಮಃ, ಎಲ್ಲರಿಗೂ ನಮಸ್ಕಾರ ಎಂದು ಮಾತು ಆರಂಭಿಸಿದ ರಾಜ್ಯಪಾಲರು, ಭಾರತೀಯ ಸಂಸ್ಕೃತಿ ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠವಾಗಿದೆ. ದಾರ್ಶನಿಕರು ಭಾರತೀಯ ಸಂಸ್ಕೃತಿಯನ್ನು ಪ್ರೋತ್ಸಾಹಿಸಿ, ಬೆಳೆಸಿದ್ದಾರೆ ಎಂದರು.
೧೨ನೇ ಶತಮಾನದಲ್ಲಿ ಅಜ್ಞಾನದ ಕತ್ತಲೆ ಆವರಿಸಿದ ಕಾಲದಲ್ಲಿ ಅಂದು ಪ್ರಜಾಪ್ರಭುತ್ವ ಎಂದರೆ ಏನು ಎನ್ನುವ ಕಲ್ಪನೆಯೂ ಇಲ್ಲದ ಸಮಯದಲ್ಲಿ ಬಸವಣ್ಣನವರು ಜಗತ್ತಿನ ಪ್ರಥಮ ಸಂಸತ್ ಅನುಭವ ಮಂಟಪ ಸ್ಥಾಪನೆ ಮಾಡಿದರು. ಅಲ್ಲಿ ೭೭೦ ಶರಣರಿದ್ದರು. ಎಲ್ಲರಿಗೂ ಸ್ವಾತಂತ್ರ್ಯ ಕೊಟ್ಟು, ಜಾತಿ, ಧರ್ಮ, ವರ್ಣ, ವರ್ಗ, ಲಿಂಗ ಭೇದ ಇಲ್ಲದೆ ಎಲ್ಲರೂ ಒಂದೇ ವೇದಿಕೆಯಲ್ಲಿ ಮುಕ್ತವಾಗಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು. ಅವರು ತಮ್ಮ ಅನುಭಾವದ ನೆಲೆಯಲ್ಲಿ ಚರ್ಚೆ ಮಾಡಿ ವಚನ ಸಾಹಿತ್ಯ ರಚಿಸಿದರು. ಇದು ವಿಶ್ವ ಶಾಂತಿಗೆ ನಿರಂತರ ಮಾರ್ಗದರ್ಶಿಯಾಗಿದೆ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಆದಿಚುಂಚನಗಿರಿಯ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಆಶೀರ್ವಚನ ನೀಡಿದರು. ಹಾರಕೂಡನ ಶ್ರೀ ಡಾ.ಚನ್ನವೀರ ಶಿವಾಚಾರ್ಯ, ಹುಲಸೂರಿನ ಶ್ರೀ ಡಾ.ಶಿವಾನಂದ ಸ್ವಾಮೀಜಿ, ಪೂಜ್ಯ ಡಾ.ಗಂಗಾಂಬಿಕೆ ಅಕ್ಕ, ಶ್ರೀ ಗುರುಬಸವ ಪಟ್ಟದ್ದೇವರು ನೇತೃತ್ವ, ಸ್ವಾಗತ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆ ವಹಿಸಿದ್ದರು.
ಶಾಸಕರಾದ ಸಂಜಯ ಬನಸೋಡೆ, ಪಿ.ಸಂಜೀವರಡ್ಡಿ, ಕೆಕೆಎಂಪಿ ಅಧ್ಯಕ್ಷ ಸುರೇಶರಾವ ಸಾಠೆ, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ ಎಂ.ವೈ. ಪಾಟೀಲ್, ಬಸವರಾಜ ಧನ್ನೂರ ಇತರರಿದ್ದರು. ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ, ಶಾಸಕ ಶರಣು ಸಲಗರ ಸ್ವಗತಿಸಿದರು. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ವಂದಿಸಿದರು. ಕಲಾವಿದ ನವಲಿಂಗ ಪಾಟೀಲ್ ನಿರೂಪಣೆ ಮಾಡಿದರು.
ಇದಕ್ಕೂ ಮುನ್ನ ಷಟ್‌ಸ್ಥಲ ಧ್ವಜಾರೋಹಣ ಪ್ರೊ.ಸಿದ್ಧಣ್ಣ ಲಂಗೋಟಿ ನೆರವೇರಿಸಿದರು. ಸಹಾಯಕ ಆಯುಕ್ತ ಪ್ರಕಾಶ ಕುದರೆ, ತಹಸೀಲ್ದಾರ್ ದತ್ತಾತ್ರೇಯ ಗಾದಾ, ಡಿವೈಎಸ್‌ಪಿ ಮಡೋಳಪ್ಪ ಇತರರಿದ್ದರು.
ನಾಲ್ವರು ಸಾಧಕರಿಗೆ ಪ್ರಶಸ್ತಿ: ಹಿರಿಯ ಚಿತ್ರ ಕಲಾವಿದ ಸಿ.ಬಿ. ಸೋಮಶೆಟ್ಟಿ ಅವರಿಗೆ ಡಾ.ಚನ್ನಬಸವ ಪಟ್ಟದ್ದೇವರು ಅನುಭವ ಮಂಟಪ ರಾಷ್ಟ್ರೀಯ ಪ್ರಶಸ್ತಿ, ಹೋಸಪೇಟೆಯ ಚಿಂತಕ ಡಾ.ಕೆ.ರವೀಂದ್ರನಾಥ ಅವರಿಗೆ ಡಾ.ಎಂ.ಎಂ. ಕಲಬುರಗಿ ಸಾಹಿತ್ಯ ಸಂಶೋಧನ ರಾಷ್ಟ್ರೀಯ ಪ್ರಶಸ್ತಿ, ಶಿರೂರಿನ ರಂಗ ಸಂಘಟಕ ಬಸವರಾಜ ಬೆಂಗೇರಿ ಅವರಿಗೆ ಬಸವಭಾಸ್ಕರ್ ರಾಷ್ಟ್ರೀಯ ಪ್ರಶಸ್ತಿ ಹಾಗೂ ಬೆಂಗಳೂರಿನ ಸುಮಂಗಲಿ ಸೇವಾ ಆಶ್ರಮದ ಸಂಸ್ಥಾಪಕಿ ಡಾ.ಎಸ್.ಜಿ. ಸುಶೀಲಮ್ಮ ಅವರಿಗೆ ಅನುಭವ ಮಂಟಪ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಚನ ಜೀವನದಲ್ಲಿ ಅಳವಡಿಸಿಕೊಳ್ಳಿ: ಶರಣರ ವಚನಗಳು ಎಲ್ಲರಿಗೂ ದಾರಿ ದೀಪ. ವಚನಗಳು ಓದುವುದಷ್ಟೇ ಅಲ್ಲ ಜೀವನದಲ್ಲಿ ಅನುಷ್ಠಾನಗೊಳಿಸಬೇಕು ಎಂದು ಆದಿಚುಂಚನಗಿರಿಯ ಶ್ರೀ ಜಗದ್ಗುರು ಡಾ.ನಿರ್ಮಲಾನಂದ ಸ್ವಾಮೀಜಿ ಹೇಳಿದರು. ಮನಸ್ಸಿನ ಒಳಗೆ ಕತ್ತಲೆ ಇದ್ದವರು ಇವನಾರವ ಎನ್ನುತ್ತಾರೆ. ಆದರೆ ವಿಶ್ವಚೈತನ್ಯ ಶಕ್ತಿ ಇದ್ದರವರು ಇವ ನಮ್ಮವ ಎನ್ನುತ್ತಾರೆ. ಇಂಥ ಮನಸ್ಥಿತಿ ಬರಬೇಕಾದರೆ ಶರಣರ ವಚನಗಳು ಮಾರ್ಗದರ್ಶಿ. ಬಸವಣ್ಣನವರು ಅನುಭವ ಮಂಟಪದ ಮೂಲಕ ಜ್ಞಾನದ ಸುಧೆ ಕೊಟ್ಟಿದ್ದಾರೆ ಎಂದು ತಿಳಿಸಿದರು.
ವರ್ಷದಲ್ಲಿ ಕಾಮಗಾರಿ ಪೂರ್ಣ: ನೂತನ ಅನುಭವ ಮಂಟಪ ಕಾಮಗಾರಿ ವೇಗವಾಗಿ ಹಾಗೂ ಗುಣಮಟ್ಟದಲ್ಲಿ ನಡೆಯುತ್ತಿದೆ. ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಹಿಂದೆ ನಾನು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಅವಧಿಯಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ೬೫೦ ಕೋಟಿ ರೂ.ವೆಚ್ಚದ ಯೋಜನೆ ರೂಪಿಸಲಾಗಿತ್ತು. ನಂತರ ಸರ್ಕಾರ ಬದಲಾಗಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ೨೦೦ ಕೋಟಿ ರೂ. ಅನುದಾನ ಒದಗಿಸಿ ಕಾಮಗಾರಿಗೆ ಚಾಲನೆ ನೀಡಿದ್ದರು. ಮತ್ತೆ ನಮ್ಮ ಸರ್ಕಾರ ಬಂದ ನಂತರ ಈಗ ೭೪೦ ಕೋಟಿ ರೂ ವಿಸ್ತೃತ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಬಜೆಟ್‌ನಲ್ಲಿ ವಚನ ವಿವಿ ಘೋಷಿಸಿ: ನೂತನ ಅನುಭವ ಮಂಟಪದ ಕಾಮಗಾರಿ ಪ್ರಗತಿಯಲ್ಲಿದೆ. ಕಲ್ಯಾಣದಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ರಾಜ್ಯ ಸರ್ಕಾರ ಮುಂದಿನ ಬಜೆಟ್‌ನಲ್ಲಿ ಘೋಷಣೆ ಮಾಡಬೇಕು. ಶ್ರೀಶೈಲ ಬಳಿಯ ಕದಳಿ ವನಕ್ಕೆ ಹೋಗಲು ಸಮರ್ಪಕ ದಾರಿ ಇಲ್ಲ. ಆಂಧ್ರ ಪ್ರದೇಶ ಸರ್ಕಾರ ದಾರಿ ಮಾಡಿಕೊಡಲು ಕ್ರಮ ಕೈಗೊಳ್ಳಬೇಕು ಎಂದು ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮನವಿ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net