ಬೀದರ್: ಶಾಸಕ ರಹೀಂಖಾನ್ ಅವರಿಗೆ ಸಚಿವ ಸ್ಥಾನ ನೀಡಲು ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ತಾಲ್ಲೂಕಿನ ಜನವಾಡ ಗ್ರಾಮದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಗ್ರಾಮದ ಬೀದರ್-ಔರಾದ್ ಮುಖ್ಯರಸ್ತೆಯಲ್ಲಿ ಇರುವ ಬಸವೇಶ್ವರ ವೃತ್ತದ ಬಳಿ ರಹೀಂಖಾನ್ ಅವರ ಭಾವಚಿತ್ರ ಹಿಡಿದು ಘೋಷಣೆಗಳನ್ನು ಕೂಗಿದರು.
ರಹೀಂಖಾನ್ ಅವರು ನಾಲ್ಕು ಸಲ ಶಾಸಕ, ಎರಡು ಬಾರಿ ಸಚಿವರಾಗಿ ಅನೇಕ ಜನ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಅವಿತರ ಶ್ರಮಿಸಿದ್ದಾರೆ ಎಂದು ಹೇಳಿದರು.
ಎಲ್ಲ ಜಾತಿ, ಧರ್ಮದವರ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಜನ ಪರ ಕಾಳಜಿಯ ನಾಯಕರಾಗಿದ್ದಾರೆ. ಹೀಗಾಗಿ ಅವರಿಗೆ ಸಚಿವ ಸ್ಥಾನ ನೀಡಿದರೆ ರಾಜ್ಯದ ಅಭಿವೃದ್ಧಿ ಹಾಗೂ ಪಕ್ಷದ ಸಂಘಟನೆ ಇನ್ನಷ್ಟು ಗಟ್ಟಿಗೊಳಿಸಲು ಅನುಕೂಲವಾಗಲಿದೆ ಎಂದು ಹೇಳಿದರು.
ಪ್ರಮುಖರಾದ ಚಾಂದಪಾಶಾ, ಕೃಷ್ಣಾ, ಜೈರಾಜ್ ಪಾಟೀಲ, ಶೇರ್‍ಖಾನ್, ಪರಮೇಶ್ ಬಂಬಳ್ಳಿ, ಖಯುಮ್ ಅಲಿಯಂಬರ್, ವೀರಶೆಟ್ಟಿ ಬುಯ್ಯಾ ಮರಕಲ್, ಜೈರಾಜ್ ಮರಕಲ್, ಶಫಿ ಪಟೇಲ್, ತಾಜ್ ಪಟೇಲ್ ಮತ್ತಿತರರು ಪಾಲ್ಗೊಂಡಿದ್ದರು.