ಬಸವಕಲ್ಯಾಣ: ಮರಾಠರು ಪಕ್ಷಾತೀತವಾಗಿ ಒಗ್ಗಟ್ಟಿನಿಂದ ಪ್ರಯತ್ನಿಸಿದಾಗ ಮಾತ್ರ ಸಮಾಜದ ಪ್ರಗತಿ ಸಾಧ್ಯ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ನಗರದ ವರ್ಷ ಫಂಕ್ಷನ್ ಹಾಲ್‌ನಲ್ಲಿ ಸಕಲ ಮರಾಠಾ ಸಮಾಜ ಸೋಮವಾರ ಆಯೋಜಿಸಿದ್ದ ಮರಾಠಾ ಸಮಾಜ ಮೇಳಾವಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಸರ್ವಾಂಗೀಣ ಪ್ರಗತಿಗಾಗಿ ಪ್ರಮುಖರು, ಯುವಕರು ಸ್ವಯಂಪ್ರೇರಿತವಾಗಿ ಮುಂದೆ ಬರಬೇಕು ಎಂದರು.
ಸಾಮಾಜಿಕ, ಶೈಕ್ಷಣಿಕೆ, ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದುಳಿದ ಮರಾಠ ಸಮಾಜದ ಅಭಿವೃದ್ಧಿಗಾಗಿ ಹೊಸ ಸಂಘಟನೆಯೊಂದು ಅಸ್ತಿತ್ವಕ್ಕೆ ತರಲು ನಿರ್ಧರಿಸಲಾಗಿದೆ. ನೀವು ಯಾವುದೇ ಪಕ್ಷದಲ್ಲಿರಲಿ, ಮುಖಂಡರ ಅಭಿಮಾನಿಗಳಾಗಿರಲಿ ನಮ್ಮ ಅಭ್ಯಂತರವಿಲ್ಲ. ಪಕ್ಷಾತೀತವಾಗಿರುವ ಈ ಸಂಘಟನೆಯಲ್ಲಿ ಗುರುತಿಸಿಕೊಂಡು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ನ.೩೦ರಂದು ಜಿಲ್ಲಾ ಮಟ್ಟದ ಬೃಹತ್ ಸಮಾವೇಶ ಹಮ್ಮಿಕೊಳ್ಳಲು ತೀರ್ಮಾನಿಸಿದ್ದು, ಪ್ರತಿ ತಾಲೂಕಿನಿಂದ ಕನಿಷ್ಠ ೨೦೦೦ ಸೇರಿ ಜಿಲ್ಲಾ ಮಟ್ಟದಲ್ಲಿ ೧೦ ಸಾವಿರ ಜನರು ಒಗ್ಗೂಡುವ ಮೂಲಕ ಸಂಘಟನೆಗೆ ಬಲ ನೀಡಬೇಕು. ಈ ನಿಟ್ಟಿನಿಂದ ಪ್ರತಿ ತಾಲೂಕು ಹಾಗೂ ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಇಂದಿನಿಂದಲೇ ಜನಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಹೇಳಿದರು.
ಕರ್ನಾಟಕ ಮರಾಠ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎನ್. ಮರಿಯೋಜಿರಾವ ಮಾತನಾಡಿ, ಹಿಂದುಳಿದ ಸಮಾಜದ ಪ್ರಗತಿಗಾಗಿ ಜನಜಾಗೃತಿ ಮೂಡಿಸುವ ಕೆಲಸ ಸಚಿವ ಸಂತೋಷ ಲಾಡ್ ಅವರಿಂದ ನಡೆಯುತ್ತಿದ್ದು, ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಅನೀಲ ಭುಸಾರೆ, ಪದ್ಮಾಕರ ಪಾಟೀಲ, ಮಾಜಿ ಉಪಾಧ್ಯಕ್ಷ ಡಾ.ಪ್ರಕಾಶ ಪಾಟೀಲ, ಮಾಜಿ ಸದಸ್ಯ ಆನಂದ ಪಾಟೀಲ, ಸಮಾಜದ ಪ್ರಮುಖರಾದ ಸತೀಶ ಮುಳೆ, ಶಂಕರ ನಾಗದೆ, ಶ್ರೀನಿವಾಸ ಪಾಟೀಲ, ಸದಾನಂದ ಬಿರಾದಾರ, ಮಹೇಶ ಪಾಟೀಲ, ಮಾಧವರಾವ್ ಹಸೂರೆ, ದತ್ತು ಧೂಳೆ ಪಾಟೀಲ ಇತರರಿದ್ದರು. ತಾತ್ಯಾರಾವ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಅಂಗದರಾವ ಜಗತಾಪ ಸ್ವಾಗತಿಸಿದರು. ವಿಟಿ ಸಿಂಧೆ ನಿರೂಪಣೆ ಮಾಡಿದರು.
"
ಮುಂಬರುವ ದಿನಗಳಲ್ಲಿ ತಾಲೂಕು, ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಲಾಗುವುದು. ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಆಸಕ್ತ ಯುವಕರು, ಪ್ರಮುಖರನ್ನು ಗುರುತಿಸಿ ಒಗ್ಗೂಡಿಸಬೇಕು. ಯಾವುದೇ ಪಕ್ಷದ ಸರ್ಕಾರ ಇರಲಿ, ಸಮಾಜದ ಜನರಿಗೋಸ್ಕರ ಹೋರಾಟ ನಡೆಸಬೇಕು.| ಸಂತೋಷ ಲಾಡ್ ಕಾರ್ಮಿಕ ಸಚಿವ