

ಬಸವಕಲ್ಯಾಣ: ಹಳ್ಳಿಗಳ ಸಂವರ್ಧನೆಯಿಂದಲೇ ದೇಶದ ಪ್ರಗತಿಯಿದೆ. ಆಹಾರ ಉತ್ಪಾದನಾ ಕೇಂದ್ರವಾದ ಹಳ್ಳಿಗಳಲ್ಲಿ ಶ್ರಮ ಸಂಸ್ಕೃತಿಯಿದೆ. ದುಡಿಯುವವರ ದುಡಿಮೆಯ ಮೌಲ್ಯ ಯುವಕರು ಅರಿಯಬೇಕು ಎಂದು ಶ್ರೀ ಬಸವೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಹೇಳಿದರು.
ನಗರದ ಎಸ್ಎಸ್ಕೆ ಬಸವೇಶ್ವರ ಕಲಾ ವಿಜ್ಞಾನ ವಾಣಿಜ್ಯ ಸ್ನಾತಕ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ಶನಿವಾರ ಎನ್ಎಸ್ಎಸ್ ಸಂಸ್ಥಾಪನಾ ದಿನದ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕ ಪ್ರಜ್ಞೆ, ಆರೋಗ್ಯದ ಅರಿವು, ಪರಿಸರ ಕಾಳಜಿ ರಾಷ್ಟ್ರೀಯ ಸೇವಾ ಯೋಜನೆಯ ಪ್ರಧಾನ ಧೋರಣೆಯಾಗಿದೆ. ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುವವರೂ ಸಮಾಜಮುಖಿಯಾಗಲು ಪ್ರೇರಣೆ ನೀಡುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ರಮೇಶ ಕೆ.ಬಿ.ಮಾತನಾಡಿ, ಕೇವಲ ಶಿಬಿರಗಳಿಗೆ ಮಾತ್ರ ಸೀಮಿತವಾಗಿರದೆ ಅದರಿಂದ ಕಲಿತ ಪಾಠಗಳನ್ನು ತಮ್ಮ ನಿಜ ಜೀವನದಲ್ಲಿ ಅಳವಡಿಸಿಕೊಂಡು ಮೌಲ್ಯಯುತ ಜೀವನ ನಡೆಸಬೇಕು. ದೇಶಕ್ಕೆ ಮತ್ತು ಸಮಾಜಕ್ಕೆ ತಮ್ಮ ಕೊಡುಗೆ ನೀಡಬೇಕು ಎಂದು ಹೇಳಿದರು.
ಐಕ್ಯೂಎಸಿ ಸಂಯೋಜಕ ಡಾ.ವಿಜಯಕುಮಾರ ಬಿ.ಮಾತನಾಡಿ, ಎನ್ಎಸ್ಎಸ್ ಶಿಬಿರಾರ್ಥಿಗಳು ಶಿಸ್ತಿನ ಸಿಪಾಯಿಗಳಂತೆ ಶಿಬಿರಗಳಲ್ಲಿ ಮಾತ್ರವಲ್ಲದೆ ಇತರ ಸಾಮಾಜಿಕ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ತಮ್ಮ ನಿಸ್ವಾರ್ಥ ಸೇವೆ ನೀಡಬೇಕು ಎಂದರು.
ಎನ್ಎಸ್ಎಸ್ ಸಂಯೋಜಕ ಡಾ. ಸುರೇಶ ಎಚ್.ಆರ್., ಮಹದೇವ ದೇಗಾಂವ ಇತರರು ಭಾಗವಹಿಸಿದ್ದರು. ಅರ್ಪಿತಾ ನಿರೂಪಣೆ ಮಾಡಿದರು. ಪಾರ್ವತಿ ವಂದಿಸಿದರು. ವೀಣಾ ಮತ್ತು ದೀಪಿಕಾ ಪ್ರಾರ್ಥನೆ ಗೀತೆ ಹಾಡಿದರು.