ಕನ್ನಡ ಭಾಷೆ ಬೆಳವಣಿಗೆಗಾಗಿ ಜಾಗೃತರಾಗಿ

ಬೀದರ್ ನಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆಯನ್ನು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಉದ್ಘಾಟಿಸಿದರು. ಶ್ರೀ ಡಾ.ಶಿವಾನಂದ ಸ್ವಾಮೀಜಿ, ಸೂರ್ಯಕಾಂತ ನಾಗಮಾರಪಳ್ಳಿ, ಡಾ.ರಜನೀಶ್ ವಾಲಿ, ಡಾ.ಪೂರ್ಣಿಮಾ ಜಿ., ಸುರೇಶ ಚನ್ನಶೆಟ್ಟಿ, ರೇವಣಸಿದ್ದಪ್ಪ ಜಲಾದೆ ಇತರರಿದ್ದರು.
ಬೀದರ್ ನಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆಯನ್ನು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಉದ್ಘಾಟಿಸಿದರು. ಶ್ರೀ ಡಾ.ಶಿವಾನಂದ ಸ್ವಾಮೀಜಿ, ಸೂರ್ಯಕಾಂತ ನಾಗಮಾರಪಳ್ಳಿ, ಡಾ.ರಜನೀಶ್ ವಾಲಿ, ಡಾ.ಪೂರ್ಣಿಮಾ ಜಿ., ಸುರೇಶ ಚನ್ನಶೆಟ್ಟಿ, ರೇವಣಸಿದ್ದಪ್ಪ ಜಲಾದೆ ಇತರರಿದ್ದರು.
Published on
ಬೀದರ್: ಕನ್ನಡಿಗರು ಕೇವಲ ಕನ್ನಡ ಮಾತನಾಡಿದರೆ ಸಾಲದು. ಕನ್ನಡದ ನೆಲ-ಜಲ, ಸಂಸ್ಕೃತಿ, ಪರಂಪರೆ ಮತ್ತು ಭಾಷೆಯ ಉಳಿವು, ಬೆಳವಣಿಗೆಗಾಗಿ ಸದಾ ಜಾಗೃತರಾಗಿರಬೇಕು ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ರೋಟರಿ ಕ್ಲಬ್ ಸಹಯೋಗದಡಿ ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಕಸಾಪ 112ನೇ ಸಂಸ್ಥಾಪನಾ ದಿನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮಾತೃಭಾಷೆ ಕನ್ನಡದ ಇತಿಹಾಸ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಮಹತ್ತರ ಕಾರ್ಯವನ್ನು ಪ್ರತಿಯೊಬ್ಬ ಕನ್ನಡಿಗ ಕರ್ತವ್ಯವೆಂದು ಭಾವಿಸಿ ಮಾಡಬೇಕು ಎಂದು ಸಲಹೆ ನೀಡಿದರು.

ನಿರಂತರ ಕನ್ನಡ ಚಟುವಟಿಕೆ, ಸಾಹಿತ್ಯ, ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳಿಂದ ಕಸಾಪ ಜನರಲ್ಲಿ ನೆಮ್ಮದಿ ಹೆಚ್ವಿಸಿದೆ. ಕನ್ನಡ ಭಾಷೆ, ಬಾಂಧವ್ಯ, ಏಳಿಗೆಗಾಗಿ ಮಿಡಿಯುವ ಪರಿಷತ್ ನಮ್ಮೆಲ್ಲರ ಹೆಮ್ಮೆ. ಕನ್ನಡಪರ ಸಂಘಟನೆಗಳ ತಾಯಿ ಕಸಾಪ. ಕನ್ನಡ ಬೆಳೆದರೆ ನಾವು ಬೆಳೆದಂತೆ ಎಂದರು.
ಒಂದು ಸಂಸ್ಥೆ ಸ್ಥಾಪನೆ ಮಾಡಬೇಕಾದರೆ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಬಹುತೇಕ ಸಂಸ್ಥೆಗಳು ಕೆಲ ವರ್ಷದಲ್ಲಿ ಮುಚ್ಚಿ ಹೋಗುತ್ತವೆ. ಸಾಹಿತಿಗಳು, ಬುದ್ಧಿಜೀವಿಗಳೆಲ್ಲರೂ ಸೇರಿ ಸ್ಥಾಪಿಸಿರುವ ಕನ್ನಡ ಸಾಹಿತ್ಯ ಪರಿಷತ್ ನೂರು ವರ್ಷ ಪೂರೈಸಿ ಗಟ್ಟಿಯಾಗಿ ನಿಂತಿದೆ. ಇಂದಿನ ಆಂಗ್ಲಮಯ ವಾತಾವರಣದಲ್ಲೂ ಕನ್ನಡಕ್ಕೆ ತೊಂದರೆ ಆಗದಂತೆ ಕಸಾಪ ಸೇವೆ ಸಲ್ಲಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜ್ಞಾನಸುಧಾ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಡಾ.ಪೂರ್ಣಿಮಾ ಜಿ. ಉಪನ್ಯಾಸ ನೀಡಿ, ನಾವು ಎಲ್ಲೇ ಇರಲಿ, ನಿತ್ಯ ಕನ್ನಡ ಬಳಸುವುದನ್ನು ಮರೆಯಬಾರದು. ಭಾಷೆ ಯಾವುದೇ ಇರಲಿ, ಅದರ ಆಳ, ಇತಿಹಾಸ ಅರ್ಥೈಸಿಕೊಳ್ಳಬೇಕು. ಕನ್ನಡ ತಾಯಿ ಭಾಷೆ. ಇದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಸಂಘ-ಸಂಸ್ಥೆಗಳಿಗಿಂತ ನಮ್ಮೆಲ್ಲರ ಮೇಲೂ ಇದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿ, ಎಸ್ಸೆಸ್ಸೆಲ್ಸಿಯಲ್ಲಿ 100ಕ್ಕೆ ನೂರರಷ್ಟು ಫಲಿತಾಂಶ ಪಡೆದ ಜಿಲ್ಲೆಯ 132 ಪ್ರೌಢಶಾಲೆ ಮುಖ್ಯಗುರು, 125ಕ್ಕೆ 125 ಅಂಕ ಪಡೆದ 81 ಮಕ್ಕಳು, ಕನ್ನಡ ಭಾಷೆ ಶಿಕ್ಷಕರು ಹಾಗೂ ಶೇ.95 ಅಂಕ ಪಡೆದ 72 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗಿದೆ ಎಂದು ತಿಳಿಸಿದರು.
ಶ್ರೀ ಡಾ.ಶಿವಾನಂದ ಸ್ವಾಮೀಜಿ ಹುಲಸೂರು ಸಾನ್ನಿಧ್ಯ ವಹಿಸಿದ್ದರು. ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ್ ಎಚ್.ಜಿ., ಶಾಹೀನ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಅಬ್ದುಲ್ ಖದೀರ್ ಮಾತನಾಡಿದರು.
ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಸದಸ್ಯ ಡಾ.ರಜನೀಶ್ ವಾಲಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ ಬಿರಾದಾರ್ ಚಿದ್ರಿ, ಪ್ರಮುಖರಾದ ರೇವಣಸಿದ್ದಪ್ಪ ಜಲಾದೆ, ಬಸವರಾಜ ಧನ್ನೂರ, ಡಾ.ರಘು ಕೃಷ್ಣಮೂರ್ತಿ, ಡಾ.ಶಿವಶಂಕರ ಟೋಕರೆ, ನಿತಿನ್ ಕರ್ಪೂರ, ಮಹೇಶ್ವರಿ ಪಾಂಚಾಳ, ಭಾನುಪ್ರಿಯಾ ಅರಳಿ ಇತರರಿದ್ದರು.
ಹಾವಶೆಟ್ಟಿ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ರೋಟರಿ ಕ್ಲಬ್ ಬೀದರ್ ಅಧ್ಯಕ್ಷ ಬಸವಕುಮಾರ ಪಾಟೀಲ್ ಸ್ವಾಗತಿಸಿದರು. ಅನೀಲಕುಮಾರ ಬಿರಾದಾರ್ ವಂದಿಸಿದರು.
"

ಕನ್ನಡಿಗರಲ್ಲಿನ ಮಾತೃಭಾಷೆ ಪ್ರೇಮ ಜಾಗೃತಿ ಮೂಡಿಸುವ ಜತೆಗೆ ಸಾಹಿತ್ಯ ಲೋಕದಲ್ಲಿ ಕೆಲಸ ಮಾಡುವವರನ್ನು ಪರಿಚಯಿಸುವ ಕೆಲಸ ಕಸಾಪ ಮಾಡುತ್ತಿದೆ. ನಾಡಿನಲ್ಲಿ ವಾಸ ಮಾಡುತ್ತಿರುವ ಅನ್ಯ ಭಾಷಿಕರಿಗೆ ಕನ್ನಡ ಕಲಿಯುವಂತೆ ಮಾಡುವ ಕೆಲಸ ನಾವೆಲ್ಲರೂ ಮಾಡಬೇಕಾಗಿದೆ.

| ಸುರೇಶ ಚನ್ನಶೆಟ್ಟಿಜಿಲ್ಲಾ ಕಸಾಪ ಅಧ್ಯಕ್ಷ


"

ಕಸಾಪ 112ನೇ ಸಂಸ್ಥಾಪನಾ ದಿನ ನಿಮಿತ್ತ 112 ಮಕ್ಕಳಿಗೆ ಸಂಸ್ಥೆಯಿಂದ ಉಚಿತ ಪಿಯು ಶಿಕ್ಷಣ ಕೊಡಲು ನಿರ್ಧರಿಸಲಾಗಿದೆ. ಕನ್ನಡ ಮಾಧ್ಯಮದಲ್ಲಿ ಓದಿ ಎಸ್ಸೆಸ್ಸೆಲ್ಸಿಯಲ್ಲಿ ಶೇ.95 ಅಂಕ ಪಡೆದ ಗ್ರಾಮೀಣ ಭಾಗದ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುವುದು.

| ಡಾ.ಅಬ್ದುಲ್ ಖದೀರ್ಶಾಹೀನ್ ಶಿಕ್ಷಣ ಸಂಸ್ಥೆ ಅಧ್ಯಕ್ಷ



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net