

ಬೀದರ್: ಬೀದರ್ ಮೂಲದ ಸಾಫ್ಟವೇರ್ ಎಂಜಿನಿಯರ್ ದಂಪತಿ ಸಚಿನ್ ಜಾಬಶೆಟ್ಟಿ ಹಾಗೂ ಮಂಗಳಾ ಗೌರಿ ಜಾಬಶೆಟ್ಟಿ ಅತಿ ಕಡಿಮೆ ಅವಧಿಯಲ್ಲಿ ಹೈದರಾಬಾದ್‍ನ 57 ಮೆಟ್ರೊ ರೈಲು ನಿಲ್ದಾಣಗಳನ್ನು ತಲುಪಿ ಹೊಸ ಗಿನ್ನಿಸ್ ವಿಶ್ವ ದಾಖಲೆ ಬರೆದಿದ್ದಾರೆ.
ಕಳೆದ ಡಿಸೆಂಬರ್ 14 ರಂದು ನವದೆಹಲಿಯ ಸುಜಯಕುಮಾರ ಮಿತ್ರಾ 2 ಗಂಟೆ 35 ನಿಮಿಷದ 32 ಸೆಕೆಂಡ್‍ಗಳಲ್ಲಿ ಹೈದರಾಬಾದ್‍ನ ಎಲ್ಲ ಮೆಟ್ರೊ ರೈಲು ನಿಲ್ದಾಣಗಳಿಗೆ ಭೇಟಿ ಕೊಟ್ಟು ಹಿಂದಿನ ದಾಖಲೆಯನ್ನು ಹಿಂದಿಕ್ಕಿದರು. ಸಚಿನ್ ಜಾಬಶೆಟ್ಟಿ ಹಾಗೂ ಮಂಗಳಾ ಗೌರಿ ಜಾಬಶೆಟ್ಟಿ ದಂಪತಿ ಡಿಸೆಂಬರ್ 24 ರಂದು 2 ಗಂಟೆ 32 ನಿಮಿಷದ 45 ಸೆಕೆಂಡ್‍ಗಳಲ್ಲೇ ಎಲ್ಲ ಮೆಟ್ರೊ ರೈಲು ನಿಲ್ದಾಣಗಳಿಗೆ ಭೇಟಿ ನೀಡಿ ಹತ್ತು ದಿನಗಳ ಅಂತರದಲ್ಲೇ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ.
ಮಿಯಾಪುರದಿಂದ ರಾಯದುರ್ಗ ವರೆಗಿನ 57 ಮೆಟ್ರೊ ರೈಲು ನಿಲ್ದಾಣಗಳನ್ನು ತಲುಪುವಾಗ ಅವರು 27 ಕೆಂಪು, 9 ಹಸಿರು ಹಾಗೂ 21 ನೀಲಿ ಗೆರೆ ಮೆಟ್ರೊ ರೈಲು ನಿಲ್ದಾಣಗಳನ್ನು ದಾಟಿದ್ದಾರೆ. ತಮ್ಮ ಇಡೀ ಪಯಣದ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಪ್ರತಿ ನಿಲ್ದಾಣಗಳಲ್ಲಿ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಸಾಕ್ಷಿಗಳ ಸಹಿ ಕೂಡ ಪಡೆದುಕೊಂಡಿದ್ದಾರೆ. ಇವರ ದಾಖಲೆಗೆ ಬೀದರ್‍ನ ಶಿವಕುಮಾರ ಲದ್ದೆ ಹಾಗೂ ಬೆಂಗಳೂರಿನ ಸಂಗಮೇಶ ನೈನೆಗಲಿ ಸಾಕ್ಷಿಯಾಗಿದ್ದಾರೆ.
ಮೊದಲಿಗೆ ಮೆಟ್ರೊ ರೈಲು ಏರಿ ಒಂದು ಲೈನಿನ ಕೊನೆವರೆಗೆ ಪಯಣಿಸಿ, ನಂತರ ಇಳಿದು ಓಡುತ್ತ ಇನ್ನೊಂದು ಲೈನಿನ ರೈಲು ಹತ್ತಿ ಅದರ ಕೊನೆಯಲ್ಲಿ ಇಳಿದು, ಬಳಿಕ ಪುನಃ ಓಡುತ್ತ ಹೋಗಿ, ಮತ್ತೊಂದು ಲೈನಿನ ರೈಲು ಹತ್ತಿ ಕೊನೆವರೆಗೆ ಪ್ರಯಾಣಿಸಲು ಮೂರು ತಿಂಗಳ ಮೊದಲೇ ಯೋಜನೆ ರೂಪಿಸಿದೇವು. ಅದಕ್ಕೆ ಬಹಳಷ್ಟು ಪೂರ್ವ ತಯಾರಿಯನ್ನೂ ನಡೆಸಿದೇವು. ಕೊನೆಗೆ ಪಯಣ ಆರಂಭಿಸಿ ಯಶ ಕಂಡೇವು ಎಂದು ಜಾಬಶೆಟ್ಟಿ ದಂಪತಿ ಸಂತಸ ಹಂಚಿಕೊಂಡರು.
ಪತಿ-ಪತ್ನಿ ಒಟ್ಟಾಗಿ ಮಾಡಿದ್ದರಿಂದ ಈ ಗಿನ್ನಿಸ್ ವಿಶ್ವ ದಾಖಲೆ ಹೆಚ್ಚು ಅರ್ಥಪೂರ್ಣವಾಗಿದೆ. ಸಂಕಲ್ಪ ತೊಟ್ಟು, ಪರಿಶ್ರಮ ವಹಿಸಿದರೆ ಎಂತಹ ಕಠಿಣ ಸವಾಲನ್ನು ಸಹ ಜಯಿಸಬಹುದು ಎನ್ನುವುದಕ್ಕೆ ನಮ್ಮ ಸಾಧನೆಯೇ ನಿದರ್ಶನವಾಗಿದೆ ಎಂದು ಸಚಿನ್ ಜಾಬಶೆಟ್ಟಿ ಪ್ರತಿಕ್ರಿಯಿಸಿದರು.
ಬೀದರ್‍ನವರಾದ ನಾವು ಕಳೆದ 17 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದೇವೆ ಎಂದು ತಿಳಿಸಿದರು.