

ಬಸವಕಲ್ಯಾಣ: ಪ್ರವಚನ ಅನುಭಾವ ಸತ್ಸಂಗದ ಕಾರ್ಯಕ್ರಮಗಳು ಮನುಷ್ಯನ ಸಚ್ಚಾರಿತ್ರ್ಯ ನಿಮಾರ್ಣಕ್ಕೆ ಪ್ರೇರಣೆ ನೀಡುತ್ತವೆ. ಇವುಗಳು ನಿಜವಾದ ಅರ್ಥದಲ್ಲಿ ಸದ್ಗುಣಗಳು ಬೆಳೆಸುವ ವಿಶ್ವವಿದ್ಯಾಲಯಗಖಂತೆ ಎಂದು ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.
ನಗರದ ಅನುಭವ ಮಂಟಪದಲ್ಲಿ ನ.28ರಿಂದ ನಡೆಯಲಿರುವ 47ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ- 2026 ನಿಮಿತ್ತ ಅಕ್ಕಮಹಾದೇವಿ ಕಾಲೇಜು ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಜನಪದದಲ್ಲಿ ಬಸವದರ್ಶನ ಪ್ರವಚನ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಅಂತರಂಗದ ಎಲ್ಲ ಕಲ್ಮಶಗಳನ್ನು ತೊಳೆಯುವ ಶಕ್ತಿ ಪ್ರವಚನದಲ್ಲಿದೆ ಎಂದರು.
ಜನಪದಕಾರರು ಬಸವಣ್ಣನವರ ಜಗದಗಲವಾದ ವ್ಯಕ್ತಿತ್ವವನ್ನು ತುಂಬಾ ಅರ್ಥಪೂರ್ಣವಾಗಿ ಚಿತ್ರಿಸಿದ್ದಾರೆ. ಅವರ ಸಾಹಿತ್ಯದಲ್ಲಿ ಮಾಡಿರುವ ಬಸವದರ್ಶನ ಮಾಡಿಸಲು ಶ್ರೀ ಚನ್ನಬಸವಾನಂದ ಸ್ವಾಮೀಜಿ ಆಗಿಮಿಸಿದ್ದು, ಪ್ರವಚನ ಶ್ರವಣ ಮಾಡಲು ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿನಿತ್ಯ ಆಗಮಿಸಬೇಕು ಎಂದು ಕೇಳಿಕೊಂಡರು.
ನೇತೃತ್ವ ವಹಿಸಿದದ್ದ ಹುಲಸೂರಿನ ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ ಮಾತನಾಡಿ, ಶರಣರ ವಚನಗಳನ್ನು ಕೇಳುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. ವಚನಗಳಲ್ಲಿ ಸಂದೇಶ ಅರಿತು ಜೀವನದಲ್ಲಿ ಆಚರಣೆಗೆ ತಂದೆ ನೆಮ್ಮದಿಯಿಂದ ಕೂಡಿದ ಸಾರ್ಥಕ ಬದುಕು ಕಾಣಲು ಸಾಧ್ಯವಾಗುತ್ತದೆ ಎಂದರು.
ಧಾರವಾಡದ ಪ್ರವಚನಕಾರ ಶ್ರೀ ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ, ಕಲ್ಯಾಣ ಅವಿಮುಕ್ತ ಕ್ಷೇತ್ರವಾಗಿದೆ. ಶರಣರು ಹೋಡಾಡಿದ ಈ ನಾಡು ಪಾವನವಾಗಿದೆ. ಈ ನೆಲ, ಜಗತ್ತಿಗೆ ಸಮಾನತೆ, ಪ್ರಜಾಪ್ರಭುತ್ವ ನೀಡಿದೆ. ಕಾಯಕ ಜೀವಿಗಳು ಯಾವುದೇ ಆಮಿಷಗಳಿಗೆ ಎಡೆಯಾಗದೆ ನಿಸ್ವಾರ್ಥ ಬದುಕನ್ನು ಬದುಕಿದ ಕ್ಷೇತ್ರ. ಬಸವಣ್ಣನವರ ಸಮಗ್ರ ಕ್ರಾಂತಿಯ ಚಿತ್ರಣ ಜನಪದಕಾರರು ನಮಗೆ ನೀಡಿದ್ದಾರೆ. ಅದನ್ನು ನಾವು ಅರ್ಥೈಸಿಕೊಳ್ಳಬೇಕಿದೆ ಎಂದು ಹೇಳಿದರು.
ಭಾಲ್ಕಿಯ ಶ್ರೀ ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸಿದ್ದರು. ನಿವೃತ್ತ ನ್ಯಾಯಾಧೀಶ ಸುಭಾಷಚಂದ್ರ ನಾಗರಾಳೆ ಕಾರ್ಯಕ್ರಮ ಉದ್ಘಾಟಿಸಿದರು. ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ, ಬಿಡಿಪಿಸಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಕುರಕುಂಟೆ, ಶ್ರೀ ಬಸವೇಶ್ವರ ಹಿರಿಯ ನಾಗರಿಕ ಒಕ್ಕೂಟದ ಅಧ್ಯಕ್ಷ ಚನ್ನಪ್ಪ ಪ್ರತಾಪುರೆ, ರಾಹುಲ್ ಇಜಾರೆ ಇತರರಿದ್ದರು.
ಜೆಸ್ಕಾಂ ಎಇಇ ರಾಹುಲ ಇಜಾರೆ ಬಸವಗುರು ಪೂಜೆ ನೆರವೆರಿಸಿದರು. ಪ್ರವಚನ ಸೇವಾ ಸಮಿತಿ ಅಧ್ಯಕ್ಷ ಪ್ರೊ.ಶಂಕರ ಕರಣೆ ಸ್ವಾಗತಿಸಿದರು. ರಾಜಶೇಖರ ಬಿರಾದಾರ ವಂದಿಸಿದರು. ಪ್ರೊ.ಮೀನಾಕ್ಷಿ ಬಿರಾದಾರ ನಿರೂಪಣೆ ಮಾಡಿದರು. ರಾಜಕುಮಾರ ಹೂಗಾರ ವಚನ ಪ್ರಾರ್ಥನೆ ನಡೆಸಿಕೊಟ್ಟರು.