ರಹೀಂಖಾನ್‍ಗೆ ಸಚಿವ ಸ್ಥಾನ ನೀಡಲು ಒತ್ತಾಯಿಸಿ ಪ್ರತಿಭಟನೆ

ಬೀದರ್‍ನ ನೌಬಾದ್‍ನ ಆಟೊನಗರದಲ್ಲಿ ಮೆಕ್ಯಾನಿಕ್‍ಗಳು ಶಾಸಕ ರಹೀಂಖಾನ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು
ಬೀದರ್‍ನ ನೌಬಾದ್‍ನ ಆಟೊನಗರದಲ್ಲಿ ಮೆಕ್ಯಾನಿಕ್‍ಗಳು ಶಾಸಕ ರಹೀಂಖಾನ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು
Published on
ಬೀದರ್: ಬೀದರ್ ಶಾಸಕ ರಹೀಂಖಾನ್ ಅವರಿಗೆ ಸಚಿವ ಸ್ಥಾನ ನೀಡಲು ಒತ್ತಾಯಿಸಿ ಮೆಕ್ಯಾನಿಕ್‍ಗಳು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ರಹೀಂಖಾನ್ ಅವರ ಬೆಂಬಲಿಗರು ನಗರದಲ್ಲಿ ಶುಕ್ರವಾರ ಪ್ರತ್ಯೇಕ ಪ್ರತಿಭಟನೆ ನಡೆಸಿದರು.
ನೌಬಾದ್‍ನ ಆಟೊನಗರದಲ್ಲಿ ಮೊಹಮ್ಮದಾಬಾದ್ ಆಟೋ ನಗರ ಅಸೋಸಿಯೇಷನ್ ಮುಂದಾಳತ್ವದಲ್ಲಿ ಮೆಕ್ಯಾನಿಕ್‍ಗಳು ಪ್ರತಿಭಟನೆ ಮಾಡಿದರು.
ರಹೀಂಖಾನ್ ಅವರ ಭಾವಚಿತ್ರ ಹಾಗೂ ರಹೀಂಖಾನ್ ಅವರಿಗೆ ಸಚಿವ ಸ್ಥಾನ ಕೊಡಿ ಎಂಬ ಬರಹವಿದ್ದ ಫಲಕ ಕೈಯಲ್ಲಿ ಹಿಡಿದಿದ್ದರು. ಕೊಡಲೇ ಬೇಕು ಕೊಡಲೇ ಬೇಕು, ರಹೀಂಖಾನ್ ಅವರಿಗೆ ಸಚಿವ ಸ್ಥಾನ ಕೊಡಲೇ ಬೇಕು ಎಂದು ಘೋಷಣೆ ಕೂಗಿದರು.
ರಹೀಂಖಾನ್ ಅವರು ಕಲ್ಯಾಣ ಕರ್ನಾಟಕ ಭಾಗದ ಅಲ್ಪಸಂಖ್ಯಾತರ ಸಮುದಾಯದ ಹಿರಿಯ ಮುಖಂಡರಾಗಿದ್ದಾರೆ. ಹಿಂದೆ ಎರಡು ಬಾರಿ ಸಚಿವರಾಗಿ ಜಿಲ್ಲೆ ಹಾಗೂ ರಾಜ್ಯದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ ಎಂದು ತಿಳಿಸಿದರು.
ನಾಲ್ಕು ಸಲ ಶಾಸಕರಾದ ಅವರು ಜನ ಪರ ಕಾಳಜಿ ಹೊಂದಿದ್ದಾರೆ. ಅವರಂಥ ನಾಯಕರು ಸಚಿವ ಸಂಪುಟದಲ್ಲಿ ಇರುವುದು ಬಹಳ ಅವಶ್ಯಕವಾಗಿದೆ. ಹೀಗಾಗಿ ಎರಡನೇ ಹಂತದ ಸಂಪುಟ ವಿಸ್ತರಣೆಯಲ್ಲಿ ಅವರಿಗೆ ಸಂಪುಟ ದರ್ಜೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.
ಮೊಹಮ್ಮದಾಬಾದ್ ಆಟೋನಗರ ಅಸೋಸಿಯೇಷನ್ ಅಧ್ಯಕ್ಷ ಬಾಬಾಭಾಯಿ ಶೇರಿಕಾರ್, ಉಪಾಧ್ಯಕ್ಷ ಶಬ್ಬರ್, ಕಾರ್ಯದರ್ಶಿ ಮುಬಾಶಿರ್ ಉಲ್ಲಾ, ಖಜಾಂಚಿ ಅಜೀಂಖಾನ್, ಜಂಟಿ ಖಜಾಂಚಿ ಗೋರೆಭಾಯಿ, ನಿರ್ದೇಶಕ ಅಬ್ದುಲ್ ಶಹಬ್ಬಾಸ್ ಮತ್ತಿತರರು ಪಾಲ್ಗೊಂಡಿದ್ದರು.
ಗಾಂಧಿಗಂಜ್: ನಗರದ ಗಾಂಧಿಗಂಜ್‍ನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಚೇರಿ ಎದುರು ಕಾಂಗ್ರೆಸ್ ಕಾರ್ಯಕರ್ತರು, ಕೃಷಿ ಕಾರ್ಮಿಕರು, ಹಮಾಲರು ಹಾಗೂ ಶಾಸಕ ರಹೀಂಖಾನ್ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿ ಗಮನ ಸೆಳೆದರು.
ರಹೀಂಖಾನ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂಬುದು ಜಿಲ್ಲೆಯ ಜನರ ಬೇಡಿಕೆಯಾಗಿದೆ. ಕಾಂಗ್ರೆಸ್ ಹೈಕಮಾಂಡ್ ಜನರ ಭಾವನೆಗೆ ಸ್ಪಂದಿಸಿ ಸಚಿವ ಸ್ಥಾನ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಘಟಕದ ಕಾರ್ಯದರ್ಶಿ ಬಿಜೇಂದ್ರ ರಾಜಪುರೆ, ಪ್ರಮುಖರಾದ ದತ್ತಾತ್ರಿ ಜಮಾದಾರ್, ಫಿರೋಜ್‍ಖಾನ್, ಮುಕೇಶ್ ಗಂಗೆನೋರ್ ಮತ್ತಿತರರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net