ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅಮ್ಮಾಗೆ ಬಿದರಿ ದತ್ತಿ ಪ್ರಶಸ್ತಿ

ಎಸ್. ಜಾನಕಿ ಅಮ್ಮಾ
ಎಸ್. ಜಾನಕಿ ಅಮ್ಮಾ
Published on

ಬೀದರ್: ಇದೇ ಜನವರಿ 9 ರಿಂದ 11ರ ವರೆಗೆ ಬಿದರಿ, ಬೀದರ್ ಜಿಲ್ಲೆಯ ಸಾಂಸ್ಕøತಿಕ ವೇದಿಕೆ ಮೂರು ದಿನಗಳ ಕಾಲ ಪೂಜ್ಯ ಡಾ. ಚನ್ನಬಸವ ಪಟ್ಟದೇವರು ಜಿಲ್ಲಾ ರಂಗ ಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಿರುವ ಬಿದರಿ ಉತ್ಸವ 2025-26ರಲ್ಲಿ ರಾಜ್ಯ ಮಟ್ಟದ ಬಿದರಿ ದತ್ತಿ ಪ್ರಶಸ್ತಿಯನ್ನು ದೇಶದ ಪ್ರಖ್ಯಾತ ಹಿನ್ನೆಲೆ ಗಾಯಕಿ, ಶ್ರೀಮತಿ ಎಸ್. ಜಾನಕಿ ಅಮ್ಮಾ ಅವರಿಗೆ ನೀಡಲು ಆಯ್ಕೆ ಸಮಿತಿ ನಿರ್ಧರಿಸಿದೆ ಎಂದು ವೇದಿಕೆಯ ಅಧ್ಯಕ್ಷೆ ಹಾಗೂ ಗಾಯಕಿಯಾದ ಶ್ರೀಮತಿ ರೇಖಾ ಅಪ್ಪಾರಾವ್ ಸೌದಿ ತಿಳಿಸಿದ್ದಾರೆ.

ಈ ಕುರಿತಂತೆ ಪ್ರಕಟಣೆ ಹೊರಡಿಸಿರುವ ಅವರು, ಕಳೆದ 1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗೂಡಿವಾಡದಲ್ಲಿ ಜನಿಸಿದ ಎಸ್. ಜಾನಕಿ ಅಮ್ಮಾ ಅವರು ಬಾಲ್ಯದಲ್ಲಿಯೇ ಸಂಗೀತದ ಮೇಲೆ ಅಪಾರ ಆಸಕ್ತಿ ಹೊಂದಿ, ನಂತರ ಭಾರತೀಯ ಚಿತ್ರರಂಗದಲ್ಲಿ ಅಪ್ರತಿಮ ಗಾಯಕಿಯಾಗಿ ಹೊರಹೊಮ್ಮಿದವರು. ಅವರು ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಸುಮಾರು 17ಕ್ಕೂ ಹೆಚ್ಚು ಭಾಷೆಗಳಲ್ಲಿ 50,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದು ಕನ್ನಡ ಚಿತ್ರರಂಗದಲ್ಲಿ ಅವರು “ಗಾನಕೋಗಿಲೆ” ಎಂಬ ಬಿರುದನ್ನು ಪಡೆದಿದ್ದಾರೆ.

ಅತ್ಯುತ್ತಮ ಹಿನ್ನೆಲೆ ಗಾಯಕಿ ಎಂದು 4 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಅವರ ಮುಡಿಗೇರಿದ್ದು 1969ರಲ್ಲಿ ಪದ್ಮಶ್ರೀ ಪ್ರಶಸ್ತಿ, 2013ರಲ್ಲಿ ಪದ್ಮಭೂಷಣ ಪ್ರಶಸ್ತಿ ಸೇರಿದಂತೆ ಅನೇಕ ರಾಜ್ಯ, ರಾಷ್ಟ್ರ ಮಟ್ಟದ ಮತ್ತು ಚಲನಚಿತ್ರ ಪ್ರಶಸ್ತಿಗಳು ಅವರಿಗೆ ಸಂದಿವೆ.0

ಬಿದರಿ, ಬೀದರ್ ಜಿಲ್ಲೆಯ ಸಾಂಸ್ಕೃತಿಕ ವೇದಿಕೆಯು ಕಳೆದ ಹಲವಾರು ವರ್ಷಗಳಿಂದ ಖ್ಯಾತನಾಮ ಸಂಗೀತ ದಿಗ್ಗಜರ ಸಂಗೀತ ಸೇವೆಯನ್ನು ಮನಗಂಡು ರಾಜ್ಯ ಮಟ್ಟದ ಬಿದರಿ ದತ್ತಿ ಪ್ರಶಸ್ತಿ ನೀಡುತ್ತ ಬಂದಿರುವಂತೆ ಈ ಬಾರಿಯ ಬಿದರಿ ದತ್ತಿ ಪ್ರಶಸ್ತಿಯನ್ನು ಖ್ಯಾತ ಹಿನ್ನೆಲೆ ಗಾಯಕಿ ಶ್ರೀಮತಿ ಎಸ್ ಜಾನಕಿ ಅಮ್ಮಾ ಅವರಿಗೆ ನೀಡಲು ತೀರ್ಮಾನಿಸಿದೆ.

ಖ್ಯಾತನಾಮ ಸಂಗೀತ ದಿಗ್ಗಜರಾದ ಶ್ರೀ ಪಂಡಿತ್ ವೈಕುಂಠ ದತ್ತ ಮಹಾರಾಜ್ ತಾದಲಾಪೂರ, ಬೀದರ್, ಶ್ರೀ ಪಂಡಿತ್ ನರಸಿಂಹಲು ವಡವಾಟಿ, ರಾಯಚೂರು, ಶ್ರೀಮತಿ ಲತಾ ಹಂಸಲೇಖಾ, ಬೆಂಗಳೂರು, ಹಾಗೂ ಶ್ರೀ ಗುರುರಾಜ್ ಹೊಸಕೋಟೆ ಬೆಂಗಳೂರು ಅವರಿಗೆ ಬಿದರಿ ದತ್ತಿ ಪ್ರಶಸ್ತಿ ನೀಡಿದ್ದು, ಪ್ರಸಕ್ತ ಸಾಲಿನ ಬಿದರಿ ದತ್ತಿ ಪ್ರಶಸ್ತಿಯನ್ನು ದೇಶದ ಪ್ರಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅಮ್ಮಾ ಅವರು ಸ್ವೀಕರಿಸಲು ಒಪ್ಪಿದ್ದು ನಮ್ಮೆಲ್ಲರ ಸುದೈವ ಎಂದು ವೇದಿಕೆಯ ಅಧ್ಯಕ್ಷೆ, ಗಾಯಕಿ ಶ್ರೀಮತಿ ರೇಖಾ ಅಪ್ಪಾರಾವ್ ಸೌದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net