

ಬೀದರ್: ಆಪತ್ ಕಾಲದಲ್ಲಿ ಇರುವವರ ಜೀವ ಉಳಿಸಲು ಎಲ್ಲರೂ ರಕ್ತದಾನ ಮಾಡಬೇಕು ಎಂದು ಪ್ರಾಚಾರ್ಯ ರಾಜಶೇಖರ ಮುದ್ದಾ ಹೇಳಿದರು.
ಕಮಲನಗರ ತಾಲ್ಲೂಕಿನ ಠಾಣಾಕುಶನೂರದ ಶ್ರೀ ಮಾಣಿಕರಾವ್ ಪಾಟೀಲ ರೂರಲ್ ಪಾಲಿಟೆಕ್ನಿಕ್‍ನಲ್ಲಿ ವಿಶ್ವ ಸ್ವಯಂ ಪ್ರೇರಿತ ರಕ್ತದಾನಿಗಳ ದಿನಾಚರಣೆ ನಿಮಿತ್ತ ಮಂಗಳವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ರಕ್ತದಾನ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಕ್ತದಾನ ಮಾನವೀಯ ಕಾರ್ಯವಾಗಿದೆ. ಎಲ್ಲ ದಾನಗಳಲ್ಲೇ ಶ್ರೇಷ್ಠವಾಗಿದೆ ಎಂದು ತಿಳಿಸಿದರು.
ರಕ್ತದಾನದ ಬಗ್ಗೆ ಕೆಲವರಲ್ಲಿ ತಪ್ಪು ತಿಳಿವಳಿಕೆ ಇದೆ. ರಕ್ತದಾನದಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ ಎಂದು ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಹಾಗೂ ನಿಯಂತ್ರಣ ಘಟಕದ ಮೇಲ್ವಿಚಾರಕ ಸೂರ್ಯಕಾಂತ ಸಂಗೋಳಕರ್ ಹೇಳಿದರು.
ಎಚ್‍ಐವಿ/ಏಡ್ಸ್ ತಡೆಗಟ್ಟುವಿಕೆ ಹಾಗೂ ಸುರಕ್ಷಿತ ರಕ್ತದಾನ ಕುರಿತು ಔರಾದ್ ಸರ್ಕಾರಿ ಆಸ್ಪತ್ರೆಯ ಐಸಿಟಿಸಿ ಸಮಾಲೋಚಕಿ ಪುಷ್ಪಾಂಜಲಿ ಪಾಟೀಲ ಹಾಗೂ ರಕ್ತದಾನದ ಪ್ರಯೋಜನಗಳ ಕುರಿತು ಠಾಣಾಕುಶನೂರ ಸರ್ಕಾರಿ ಆಸ್ಪತ್ರೆಯ ಹಿರಿಯ ಆರೋಗ್ಯ ನಿರೀಕ್ಷಕ ಶರಣಪ್ಪ ಪಾಟೀಲ ಉಪನ್ಯಾಸ ನೀಡಿದರು.
ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಅಧಿಕಾರಿ ಸಂಗಮೇಶ ಆಣದೂರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ರಕ್ತದಾನಿಗಳನ್ನು ಸನ್ಮಾನಿಸಲಾಯಿತು. ಕಾಲೇಜು ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.